Advertisement

ಒಂದೇ ದಿನ 22 ಮಂದಿಗೆ ಕೋವಿಡ್

09:45 AM Jul 01, 2020 | Suhan S |

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ 22 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಈವರೆಗೆ 173 ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ 109 ಮಂದಿ ಗುಣಮುಖರಾಗಿದ್ದು, 62 ಸಕ್ರಿಯ ಪ್ರಕರಣಗಳಿವೆ.

Advertisement

ಭದ್ರಾವತಿಯಲ್ಲಿ 7 ಮಂದಿಗೆ ಪಾಸಿಟಿವ್‌ ವರದಿ ಬಂದಿದ್ದು, ಶಿಕಾರಿಪುರದಲ್ಲಿ 8, ಹೊಸನಗರ 1, ಸೊರಬ ಹಾಗೂ ತೀರ್ಥಹಳ್ಳಿಯಲ್ಲಿ ತಲಾ ಇಬ್ಬರಿಗೆ ಸೋಂಕು ತಗುಲಿದೆ. ಶಿಕಾರಿಪುರದ ಖವಾಸಪುರ ವೃದ್ಧೆಯ ಸಾವು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಅಲ್ಲಿ ಸೋಂಕು ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

ಶಿವಮೊಗ್ಗ ನಗರದಲ್ಲಿ ಇಬ್ಬರು ವೈದ್ಯರು ಸೇರಿದಂತೆ ತಾಲೂಕಿನಲ್ಲಿ 8 ಮಂದಿಗೆ ಸೋಂಕು ತಗುಲಿದೆ. ಶಿವಮೊಗ್ಗದ ಗಾಂ ನಗರದ “ಎ’ ಬ್ಲಾಕ್‌ 6ನೇ ತಿರುವು ಹಾಗೂ 1ನೇ ಅಡ್ಡರಸ್ತೆಯಲ್ಲಿ 2 ಹಾಗೂ ಭದ್ರಾವತಿಯ ಗಾಂಧಿ ನಗರ ಸೇರಿದಂತೆ ಹಲವೆಡೆ ಕೋವಿಡ್ ಸೋಂಕಿತರು ವಾಸವಿದ್ದ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬ ಬಂದು ಹೋಗಿದ್ದ ಹಿನ್ನೆಲೆಯಲ್ಲಿ ಪಾಲಿಕೆಯ ಅನೇಕ ವಿಭಾಗಗಳ ಕಚೇರಿಯನ್ನು ಬಂದ್‌ ಮಾಡಿ ಸ್ಯಾನಿಟೈಸ್‌ ಮಾಡಲಾಗಿದೆ. ಪಾಲಿಕೆಗೆ ಭೇಟಿ ನೀಡುವವರ ತಪಾಸಣೆ ನಡೆಸಿ ಒಳಬಿಡಲಾಗಿದೆ.

ಭದ್ರಾವತಿಯ ಗಾಂಧಿ ನಗರದ ಒಂದೇ ಕುಟುಂಬದ ನಾಲ್ವರು, ಹೊಸಮನೆ ಮುಖ್ಯ ರಸ್ತೆ ಎನ್‌ಎಂಸಿ ಎಡಭಾಗದ ಭೋವಿ ಕಾಲನಿಯಲ್ಲಿ ಒಬ್ಬರು ಹಾಗೂ ಹೊಸಮನೆ ಸುಭಾಷ್‌ನಗರದಲ್ಲಿ ಇಬ್ಬರು ವ್ಯಕ್ತಿಗಳು ಸೋಂಕಿಗೆ ತುತ್ತಾದವರಾಗಿದ್ದಾರೆ. ಗಾಂಧಿ ನಗರದ ನಾಲ್ವರಲ್ಲಿ 56 ವರ್ಷದ ಪುರುಷ, 44 ವರ್ಷದ ಮಹಿಳೆ, 26 ವರ್ಷದ ಮಹಿಳೆ ಹಾಗೂ 6 ವರ್ಷದ ಮಗು ಹಾಗೂ ಬೋವಿ ಕಾಲನಿಯ 42 ವರ್ಷದ ಮಹಿಳೆ ಇಲ್ಲಿನ ಹಳೇನಗರದ ಉಪ್ಪಾರಬೀದಿಯ ಸೋಂಕಿತ ಬಸ್‌ ಏಜೆಂಟ್‌ ಸಂಬಂಧಿಗಳಾಗಿದ್ದು, ಇವರೆಲ್ಲರೂ ತುಮಕೂರಿಗೆ ಸೋಂಕಿತನ ಜೊತೆಗೆ ಹೆಣ್ಣು ನೋಡಲು ತೆರಳಿದ್ದರು ಎನ್ನಲಾಗಿದೆ.

ಉಳಿದಂತೆ ಸೋಂಕು ತಗುಲಿರುವ ಸುಭಾಷ್‌ನಗರದ ವಯಸ್ಸಾದ ಗಂಡ (57), ಹೆಂಡತಿ(46) ಇಬ್ಬರಿಗೆ ತಮಿಳುನಾಡಿನ ನಂಟು ಇದೆ. ಸುಭಾಷ್‌ನಗರದ ಪುರುಷ ಹಾಗು ಮಹಿಳೆ ಇತ್ತೀಚೆಗೆ ತಮಿಳುನಾಡಿನಲ್ಲಿರುವ ತನ್ನ ಸೊಸೆಗೆ ಡಿಲೆವರಿಯಾಗಿದ್ದು ಕರೆದುಕೊಂಡು ಬರಲು ಮಗನೊಂದಿಗೆ ಹೋಗಿದ್ದರು ಎಂದು ತಿಳಿದುಬಂದಿದ್ದು, ಅವರಿಬ್ಬರನ್ನು ಹೊರತುಪಡಿಸಿ ಮಗ ಸೊಸೆ ಹಾಗು ಮಗುವಿಗೆ ಸೋಂಕು ತಗುಲಿಲ್ಲ.

Advertisement

ತಪ್ಪು ಮಾಹಿತಿ ನೀಡಿದ್ದ ಸೋಂಕಿತೆ: ಜಿಲ್ಲಾಡಳಿತ ತಾಲೂಕಿನ ಗಾಂಧಿ ನಗರದ 5 ಜನ, ಸುಭಾಷ್‌ ನಗರದ ಇಬ್ಬರಿಗೆ ಪಾಸಿಟಿವ್‌ ಇರುವುದು ದೃಢಪಡಿಸಿದ ಹಿನ್ನೆಲೆಯಲ್ಲಿ ಎರಡೂ ಸ್ಥಳಗಳಿಗೆ ಭೇಟಿ ನೀಡಿದ ನಗರಸಭೆ ಅಧಿಕಾರಿಗಳು ಗಾಂಧಿ ನಗರ ಹಾಗೂ ಹೊಸಮನೆಯ ಸುಭಾಷ್‌ನಗರದಲ್ಲಿ ಬ್ಯಾರಿಕೇಡ್‌ ನಿರ್ಮಿಸಿ ಸುಮ್ಮನಾಗಿದ್ದರು. ನಂತರ ವಾರ್ಡ್‌ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಗಾಂಧಿ ನಗರದ ಸೋಂಕಿತರಲ್ಲಿ 42 ವರ್ಷದ ಮಹಿಳೆಯೊಬ್ಬರು ಹೊಸಮನೆ ಎನ್‌ ಎಂಸಿಮುಖ್ಯರಸ್ತೆ ಭೋವಿ ಕಾಲೊನಿಯಲ್ಲಿ ಗಂಡನೊಂದಿಗೆ ವಾಸವಿದ್ದು, ಒಂದು ಮಗು ಇರುವ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹೊಸಮನೆ ಎನ್‌ಎಂಸಿ, ಎಡಭಾಗದ ರಸ್ತೆಗೆ ಬ್ಯಾರಿಕೇಡ್‌ ನಿರ್ಮಿಸಿ ಸೀಲ್‌ ಡೌನ್‌ ಮಾಡಿದ್ದಾರೆ. ಸುಭಾಷ್‌ನಗರದ ಮೂವರು ಹಾಗೂ ಎನ್‌ಎಂಸಿ ಎಡಭಾಗದ ಇಬ್ಬರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next