ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಮುಂದುವರಿದಿದ್ದು, ರವಿವಾರ 170 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆಯು 3680ಕ್ಕೆ ಏರಿಕೆಯಾಗಿದೆ. ಇದೇ ದಿನ 4 ಜನ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆಯು 82ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಪ್ರತಿದಿನ ಸೋಂಕು ಏರುತ್ತಲೇ ಇದೆ. ಪ್ರಮುಖವಾಗಿ ಕೋವಿಡ್ ಪರೀಕ್ಷೆಗೆ ತೆರಳುವ ಜನರು ತಮಗೆ ಸೋಂಕು ಇರುವುದು ದೃಢಪಡುತ್ತಿದ್ದಂತೆ ಮಾನಸಿಕಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸೋಂಕಿತರ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಕೇವಲ ಡಿ ಗ್ರುಪ್ ನೌಕರರಿಂದ ರೋಗಿಗಳಿಗೆ ಔಷಧ ಪೂರೈಕೆ ಮಾಡಲಾಗುತ್ತಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ. ಇದಲ್ಲದೇ ಮಾನಸಿಕ ಒತ್ತಡಕ್ಕೆ ಒಳಗಾಗುವ ರೋಗಿಗಳು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಜಿಲ್ಲೆಯಲ್ಲಿ ಹೃದಯ ಸಂಬಂಧಿ ವೈದ್ಯರೇ ಇಲ್ಲದಿರುವುದು ದುರಂತವೇ ಸರಿ.
ರೋಗಿಯು ಹೃದಯಾಘಾತಕ್ಕೆ ಒಳಗಾದಾಗ ಅವರಿಗೆ ಚಿಕಿತ್ಸೆ ನೀಡುವ ವೈದ್ಯರೇ ಇಲ್ಲವೆಂದರೆ ಪರಿಸ್ಥಿತಿಯೇನು? ಅಂತಹ ರೋಗಿಗಳನ್ನು ಕೂಡಲೇ ಹುಬ್ಬಳ್ಳಿ, ಧಾರವಾಡಕ್ಕೆ ಸಾಗಹಾಕಲಾಗುತ್ತಿದೆ. ಅಲ್ಲಿಗೆ ತೆರಳುವ ರೋಗಿಗಳಲ್ಲಿ ಕೆಲವರು ದಾರಿ ಮಧ್ಯೆದಲ್ಲೇ ಮೃತಪಡುತ್ತಿದ್ದಾರೆ. ಇನ್ನು ಕೆಲವರು ಚಿಕಿತ್ಸೆ ಫಲಿಸದೇ ಸ್ಥಳದಲ್ಲೇ ಮೃತಪಡುತ್ತಿದ್ದಾರೆ. ಇದನ್ನು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಒಪ್ಪಿಕೊಂಡಿದ್ದಾರೆ. ಹೃದಯ ಸಂಬಂಧಿ ವೈದ್ಯರ ನಿಯೋಜನೆಗೆ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಮಾತನ್ನಾಡಿದ್ದಾರೆ. ಜಿಲ್ಲೆಯಲ್ಲಿ ರವಿವಾರ ನಾಲ್ವರು ಸೇರಿದಂತೆ ಒಟ್ಟಾರೆ 82 ಜನರು ಕೋವಿಡ್ ಸೋಂಕಿಗೆ ಸಾವನ್ನಪ್ಪಿದ್ದಾರೆ. ಇಲ್ಲಿ ಎಲ್ಲರೂ ಕೋವಿಡ್ ಸೋಂಕಿನಿಂದಲೇ ಬಳಲಿ ಸಾವನ್ನಪ್ಪಿಲ್ಲ. ಬದಲಾಗಿ ಸೋಂಕಿದೆ ಎಂಬ ಆತಂಕಕ್ಕೆ ಒಳಗಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಿಂದಲೂ ಸಾವು ಸಂಭವಿಸಿವೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ 170 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 3680ಕ್ಕೆ ಏರಿಕೆಯಾಗಿದೆ. ಇವರಲ್ಲಿ 82 ಜನರು ಮೃತಪಟ್ಟಿದ್ದಾರೆ. ಇನ್ನೂ ಇದೇ ದಿನದಂದು 154 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟಾರೆ ಈ ವರೆಗೂ 2405ಕ್ಕೆ ಏರಿಕೆಯಾಗಿದೆ. ಇನ್ನು 197 ಜನರು ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದಾರೆ.