ನವದೆಹಲಿ: ಕೋವಿಡ್ ಎರಡನೇ ಅಲೆಯ ಸೋಂಕು ಪ್ರಕರಣ ಇಳಿಕೆಯಾಗುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಪ್ರವಾಸಿ ಸ್ಥಳಗಳಲ್ಲಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರುತ್ತಿರುವುದು ಮೂರನೇ ಅಲೆಗೆ ಆಹ್ವಾನ ನೀಡಿದಂತಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸೋಮವಾರ (ಜುಲೈ 12) ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ:ನೇಣು ಬಿಗಿದ ಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಶವ ಪತ್ತೆ
ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಕಡಿಮೆಯಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿರುವ ಈ ಸಂದರ್ಭದಲ್ಲಿ ನಾವು ನಿರ್ಲಕ್ಷ್ಯದಿಂದ ಜನರು ಸಾಮಾಜಿಕ ಅಂತರ ಮರೆತು ಗುಂಪುಗೂಡಿದಲ್ಲಿ ವೈರಸ್ ಹರಡಲು ಮತ್ತಷ್ಟು ಅವಕಾಶ ಕೊಟ್ಟಂತಾಗಲಿದೆ ಎಂದು ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
ಕೋವಿಡ್ 3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ನೂ ಕನಿಷ್ಠ ಮೂರು ತಿಂಗಳ ಕಾಲ ಕೋವಿಡ್ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಐಎಂಎ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ. ಪ್ರವಾಸಿ ಸ್ಥಳಕ್ಕೆ ಭೇಟಿ, ತೀರ್ಥಯಾತ್ರೆ, ಧಾರ್ಮಿಕ ಉತ್ಸಾಹ ಎಲ್ಲವೂ ಅಗತ್ಯ. ಆದರೆ ಇನ್ನೂ ಕೆಲವು ತಿಂಗಳು ಕಾಲ ಕಾದ ಬಳಿಕ ನಿಮ್ಮ ಆಸೆ ಈಡೇರಿಸಿಕೊಳ್ಳಿ ಎಂದು ಐಎಂಎ ಸಲಹೆ ನೀಡಿದೆ.
“ಯಾವುದೇ ಕಾರಣಕ್ಕೂ ಕೋವಿಡ್ 19 ವಿರುದ್ಧದ ಹೋರಾಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡೆಗಣಿಸಬಾರದು ಎಂದು ಐಎಂಎ” ಸೋಮವಾರ ಬರೆದ ಪತ್ರದಲ್ಲಿ ಎಚ್ಚರಿಸಿದೆ. ಈ ಪತ್ರಕ್ಕೆ ಐಎಂಎ ಅಧ್ಯಕ್ಷ ಡಾ.ಜಯಲಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್ ಲೇಲೆ ಸಹಿ ಹಾಕಿರುವುದಾಗಿ ವರದಿ ತಿಳಿಸಿದೆ.