ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, 3ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧವನ್ನು ಆಗಸ್ಟ್ 31ರವರೆಗೂ ವಿಸ್ತರಿಸಿ ಶುಕ್ರವಾರ (ಜುಲೈ 30) ಆದೇಶ ಹೊರಡಿಸಿದೆ.
ಇದನ್ನೂ ಓದಿ:ಜಾಗತಿಕ ಷೇರುಪೇಟೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಇಳಿಕೆ
ಆಗಸ್ಟ್ 31ರ ಮಧ್ಯರಾತ್ರಿವರೆಗೂ ಅಂತಾರಾಷ್ಟ್ರರೀಯ ಪ್ರಯಾಣಿಕರ ವಿಮಾನಗಳ ಮೇಲಿನ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿಯಂತ್ರಣ ನಿರ್ದೇಶನಾಲಯ(ಡಿಜಿಸಿಎ) ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಕೋವಿಡ್ ಸೋಂಕಿನ ಪರಿಣಾಮ ಕಳೆದ ಒಂದೂವರೆ ವರ್ಷದಿಂದ ಅಂತಾರಾಷ್ಟ್ರೀಯ ವಿಮಾನಯಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಕೋವಿಡ್ 3ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧ ಮುಂದುವರಿಸಲಾಗಿದೆ ಎಂದು ವಿವರಿಸಿದೆ.
ಈ ನಿರ್ಬಂಧ ಎಲ್ಲಾ ಅಂತರಾಷ್ಟ್ರೀಯ ಕಾರ್ಗೊ ವಿಮಾನಯಾನ ಸಂಚಾರಕ್ಕೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಡಿಜಿಸಿಎ ಅನುಮತಿ ನೀಡಿರುವ ವಿಶೇಷ ವಿಮಾನಗಳ ಸಂಚಾರಕ್ಕೂ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.
ಭಾರತವು ಅಮೆರಿಕ, ಯುನೈಟೆಡ್ ಕಿಂಗ್ ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಫ್ರಾನ್ಸ್, ಭೂತಾನ್ ಸೇರಿದಂತೆ ಹಲವಾರು ದೇಶಗಳ ಜತೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದ್ದು, ಈ ದೇಶಗಳ ನಡುವಿನ ಒಪ್ಪಂದದಂತೆ ವಿಶೇಷ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದಾಗಿದೆ.