ನಾಗಮಂಗಲ: ಕೋವಿಡ್ ಪರೀಕ್ಷೆಗೆ ಬಳಕೆ ಮಾಡಲಾಗುವ ಪರಿಕರಗಳು ಸೇರಿದಂತೆ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ತಾಲೂಕಿನ ಆಡಳಿತ ಶಕ್ತಿ ಕೇಂದ್ರ ಮಿನಿವಿಧಾನಸೌಧದ ಆವರಣದಲ್ಲಿ ಬಿಸಾಡಿರುವುದು ತಾಲೂಕು ಆಡಳಿತದಬೇಜವಾಬ್ದಾರಿಯನ್ನು ಸಾಕ್ಷೀಕರಿಸುತ್ತಿದೆ. ಮಿನಿ ವಿಧಾನಸೌಧಕ್ಕೆ ತಾಲೂಕಿನನೂರಾರು ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಆಗಮಿಸುತ್ತಾರೆ. ಆರ್‌ಟಿಸಿ, ಎಂಆರ್, ವಿಧವಾ ವೇತನ ಸೇರಿದಂತೆ ಇನ್ನೂ ಅನೇಕ ಕಾರ್ಯ ನಿರ್ವಹಿಸುವ ಕೊಠಡಿಗಳು ಇವೆ. ಇದರ ಪಕ್ಕದಲ್ಲೇ ಕೊರೊನಾ ತಪಾಸಣೆ ತ್ಯಾಜ್ಯ ಬಿಸಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕು ಕಚೇರಿ ಸಿಬ್ಬಂದಿ ಹಾಗೂ ತಾಲೂಕು ಕಚೇರಿಗೆ ಆಗಮಿಸುವ ಎಲ್ಲಾ ಸಾರ್ವಜನಿಕರಿಗೆ ಕಳೆದ ಕೆಲವು ದಿನಗಳ ಹಿಂದೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಕಳೆದ 10 ದಿನಗಳಿಗೂ ಹೆಚ್ಚು ದಿನಗಳಿಂದ ಈ ತ್ಯಾಜ್ಯ ಇಲ್ಲೇ ಬಿದ್ದಿದ್ದರೂ ಅದನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗಿಲ್ಲ. ವಯೋವೃದ್ಧರು, ಮಹಿಳೆಯರು ಸೇರಿದಂತೆ ಮುಂತಾದ ಸಾರ್ವಜನಿಕರು ಈ ತ್ಯಾಜ್ಯದ ಪಕ್ಕದಲ್ಲಿಯೇಕೆಲಸ ಕಾರ್ಯ ಮಾಡಿಸಿಕೊಳ್ಳಬೇಕಾಗಿದೆ.
ದಿನನಿತ್ಯ ಆತಂಕದಲ್ಲಿಯೇ ಕಚೇರಿಗೆ ಆಗಮಿಸುತ್ತಿದ್ದಾರೆ. ಕೋವಿಡ್ ನಿಯಮ ಪಾಲನೆ ಮಾಡದ ಸಾರ್ವಜನಿಕರಿಗೆ ದಂಡ ವಿಧಿಸುವ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೋವಿಡ್ ನಿಯಮ ಪಾಲನೆ ಬಗ್ಗೆ ದಿನಪ್ರತಿ ಭಾಷಣ ಬಿಗಿಯುವ ಅಧಿಕಾರಿಗಳಿಂದಲೇ ಈ ರೀತಿಯ ನಿಯಮ ಉಲ್ಲಂಘನೆಯಾಗಿರುವುದು ಅಧಿಕಾರಿಗಳ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ.
ಆವರಣ ಕಸದ ತೊಟ್ಟಿ: ಕೋವಿಡ್ ನಿಯಮದ ಪ್ರಕಾರ ಕೋವಿಡ್ ಟೆಸ್ಟ್‌ಗೆ ಬಳಕೆ ಮಾಡಲಾಗುವ ಪರಿಕರ ಹಾಗೂ ಪಿಪಿಇ ಕಿಟ್ ಸೇರಿದಂತೆ ಕೋವಿಡ್ ತ್ಯಾಜ್ಯಗಳನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕಿದೆ. ಆದರೆ, ಈ ಯಾವ ನಿಯಮಗಳನ್ನೂ ಪಾಲನೆ ಮಾಡದೆ ಕಳೆದ ಹಲವು ದಿನಗಳಿಂದ ಮಿನಿವಿಧಾನಸೌಧದ ಆವರಣದ ಒಂದು ಚರಂಡಿಯಲ್ಲಿ ಬಿಸಾಡಲಾಗಿದೆ. ಇಷ್ಟು ಮಾತ್ರವಲ್ಲದೆ, ಮಿನಿ ವಿಧಾನಸೌಧದ ಪಕ್ಕದಲ್ಲಿನ ಚರಂಡಿಯಲ್ಲಿ ಕಚೇರಿಯಲ್ಲಿನ ದಿನನಿತ್ಯದ ತ್ಯಾಜ್ಯ ಸುರಿಯುತ್ತಿದ್ದು, ಚರಂಡಿ ಗಬ್ಬೆದ್ದು ನಾರುತ್ತಿದೆ. ಕಳೆದ 2 ದಿನಗಳ ಹಿಂದೆ ತಾಲೂಕಿನಾದ್ಯಂತ ನಾಗಮಂಗಲ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪಾಲ್ಗೊಂಡು ಎಲ್ಲಾ ಹೋಬಳಿ ಕೇಂದ್ರದಲ್ಲಿ ಕೋವಿಡ್ ನಿಯಂತ್ರಣ ಕುರಿತಾಗಿ ಜಾಗೃತಿ ಮೂಡಿಸಲಾಗಿತ್ತು. ಆದರೆ, ತಮ್ಮ ಕಚೇರಿ ಆವರಣದಲ್ಲಿಯೇ ಇರುವ ತ್ಯಾಜ್ಯವನ್ನು ನಿಯಮದಂತೆ ವಿಲೇವಾರಿ ಮಾಡದೆ ಜಾಗೃತಿ ಮೂಡಿಸಲು ಮುಂದಾಗಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ತೆರವುಗೊಳಿಸಲಾಗುತ್ತದೆ: ತಹಶೀಲ್ದಾರ್ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಕಚೇರಿಗೆ ಬರುವ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆಸ್ಪತ್ರೆ ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಬಳಸಿದ್ದ ಪರಿಕರಗಳ ಕವರ್ ಮತ್ತು ಅದರ ತ್ಯಾಜ್ಯಗಳನ್ನು ಬಿಟ್ಟು ಹೋಗಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಈಗ, ಗಮನಕ್ಕೆ ಬಂದಿದ್ದು ತಕ್ಷಣ ತೆರವುಗೊಳಿಸಲಾಗುತ್ತದೆ ಎಂದು ತಹಶೀಲ್ದಾರ್ ಕುಂಞ ಅಹಮದ್ ತಿಳಿಸಿದ್ದಾರೆ.
ಕಳೆದ 4-5 ದಿನಗಳಿಂದ ನನ್ನ ಜಮೀನಿಗೆ ಸಂಬಂಧಿಸಿದ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಬರುತ್ತಿದ್ದೇನೆ. ಆಗಿನಿಂದಲೂ ಈ ಕಸ ಇಲ್ಲಿಯೇ ಇದೆ. ಕೋವಿಡ್ ನಿಯಮ ಪಾಲನೆಗೆ ಸೂಚಿಸುವ ಅಧಿಕಾರಿಗಳೇ ನಿಯಮ ಉಲ್ಲಂಘನೆ ಮಾಡಿದ್ದಾರೆ. ತೆರವುಗೊಳಿಸಲಾಗುತ್ತದೆ: –
ರಾಮಕೃಷ್ಣ, ಸಾರ್ವಜನಿಕ
ಪಿ.ಜೆ.ಜಯರಾಂ