ಕೊಪ್ಪಳ: ತಿಂಗಳಾಂತ್ಯದೊಳಗೆ ಜಿಲ್ಲಾ ಕೇಂದ್ರದಲ್ಲೇ ಕೋವಿಡ್-19 ಪರೀಕ್ಷಾ ಲ್ಯಾಬ್ ಪ್ರಾರಂಭಿಸಲಿದ್ದೇವೆ. ರ್ಯಾಪಿಡ್ ಟೆಸ್ಟ್ ಸಹಿತ ನಡೆಯಲಿದೆ. ಇದೆಲ್ಲದಕ್ಕೂ 1.50 ಕೋಟಿ ರೂ. ಅನುದಾನ ವೆಚ್ಚವಾಗಲಿದೆ ಎಂದು ಕೃಷಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯು ಈವರೆಗೂ ಗ್ರೀನ್ ಜೋನ್‌ನಲ್ಲಿ ಇರುವುದು ಸಮಾಧಾನದ ಸಂಗತಿಯಾಗಿದೆ. ಈವರೆಗೂ ಯಾವುದೇ ಸೋಂಕು ಕಾಣಿಸಿಕೊಂಡಿಲ್ಲ. ಇಲ್ಲಿನ ಜಿಲ್ಲಾಡಳಿತ ಹಾಗೂ ಶಾಸಕ, ಸಂಸದರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.
ಜಿಲ್ಲೆಯ ಜನರ ಗಂಟಲು ದ್ರವ ಪರೀಕ್ಷೆ ಬೇರೆಡೆ ನಡೆಯುತ್ತಿದ್ದವು. ಇನ್ಮುಂದೆ ಜಿಲ್ಲೆಯ ಜನರ ಗಂಟಲು ದ್ರವ ಸೇರಿ ಕೆಲವೊಂದು ಪರೀಕ್ಷೆಗಳನ್ನು ಜಿಲ್ಲೆಯಲ್ಲಿಯೇ ನಡೆಯಲಿವೆ. ಇದೇ ತಿಂಗಳಾಂತ್ಯದೊಳಗೆ ಕೋವಿಡ್ -19 ಲ್ಯಾಬ್ ಆರಂಭವಾಗಲಿದೆ. ಇದರೊಟ್ಟಿಗೆ ರ್ಯಾಪಿಡ್ ಟೆಸ್ಟ್ ಸಹಿತ ನಡೆಯಲಿದೆ. ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತೀವ್ರಗತಿಯಲ್ಲಿ ಕೆಲಸ ಆರಂಭಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್‌ನ ಕೊರತೆಯಿಲ್ಲ. ಅಗತ್ಯಕ್ಕೆ ತಕ್ಕಂತೆ ಇವೆ ಎಂದರಲ್ಲದೇ, ಜಿಲ್ಲೆಯಲ್ಲಿ 286 ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈವರೆಗೂ 262 ಜನರ ವರದಿ ಬಂದಿದ್ದು, ಅವೆಲ್ಲವೂ ನೆಗಟಿವ್ ಆಗಿವೆ. ಇನ್ನೂ 24 ವರದಿ ಬರುವುದು ಬಾಕಿಯಿದೆ ಎಂದರು.
ಗಡಿಯಲ್ಲಿ ಇಬ್ಬರ ಆರೋಗ್ಯ ತಪಾಸಣೆ: ಇನ್ನೂ ಜಿಲ್ಲೆಯಲ್ಲಿ ಭತ್ತ ಬೆಳೆಯಾಗಿದ್ದು, ಅದನ್ನು ಅಂತಾರಾಜ್ಯಕ್ಕೆ ಮಾರಾಟ, ಸಾಗಾಟ ಮಾಡುವುದಕ್ಕೆ ತುಂಬಾ ಸಮಸ್ಯೆಯಾಗುತ್ತಿದ್ದು, ಇದನ್ನರಿತು ಕೃಷಿ ಸಂಬಂಧಿತ ಯಾವುದೇ ಉತ್ಪನ್ನಗಳನ್ನು ಸಾಗಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಭತ್ತ ಸೇರಿ ಯಾವುದೇ ಉತ ನ್ನವು ಜಿಲ್ಲೆಯ ಗಡಿ ಹಾಗೂ ಅಂತಾರಾಜ್ಯದ ಗಡಿಗೆ ತೆರಳಿದಾಗ ಅಲ್ಲಿ ವಾಹನ ಚಾಲಕ ಹಾಗೂ ಕ್ಲೀನರ್ ಇಬ್ಬರ ಆರೋಗ್ಯ ತಪಾಸಣೆ ಮಾಡಿಯೇ ಬಿಡಲಾಗುತ್ತದೆ. ಅವರಿಗೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವ ಕುರಿತು ಸೂಚನೆ ನೀಡಲಾಗಿದೆ. ಅನ್ಯ ಜಿಲ್ಲೆ ಅಥವಾ ಅನ್ಯ ರಾಜ್ಯಕ್ಕೆ ಉತನ್ನ ಮಾರಾಟದ ವೇಳೆ ವಾಹನದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಿದೆ ಎಂದರು.
ಜಿಲ್ಲೆಯಲ್ಲಿ ಲಾಕ್‌ಡೌನ್ ಬಳಿಕ ಜನತೆಗೆ ಕಿರಾಣಿ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿ ಬೆಳಗಿನ ಅವಧಿಗೆ ಕಿರಾಣಿ ಅಂಗಡಿ ತೆರೆಯಲು ಸೂಚಿಸಿದೆ. ಕೃಷಿಗೆ ಸಂಬಂಧಿತ ಕೆಲವೊಂದು ಕಾರ್ಯ ಚಟುವಟಿಕೆಗಳಿಗೂ ಲಾಕ್‌ಡೌನ್‌ನಿಂದ ವಿನಾಯತಿ ನೀಡಿದೆ. ಅಲ್ಲದೇ, ಮನೆ ಮನೆಗೂ ತರಕಾರಿ ಪೂರೈಕೆ ಕಾರ್ಯ ನಡೆದಿದೆ. ಈ ವೇಳೆ ಕೆಲವು ಕಿರಾಣಿ ಅಂಗಡಿ ಮಾಲೀಕರು ಜನರಿಂದ ಕಿರಾಣಿಗೆ ದುಬಾರಿ ದರ ಪಡೆಯುತ್ತಿರುವ ದೂರು ಕೇಳಿ ಬರುತ್ತಿವೆ. ಅಂಥವರ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಇನ್ಮುಂದೆ ಕಡ್ಡಾಯವಾಗಿ ಎಲ್ಲ ಮಾಲೀಕರು ಅಂಗಡಿಗಳ ಮುಂದೆ ಎಂಆರ್‌ಪಿ ದರ ಪ್ರಕಟಿಸಬೇಕು. ಹೆಚ್ಚು ದರ ಪಡೆಯುವಂತಿಲ್ಲ. ಈ ಬಗ್ಗೆ ಅಧಿಕಾರಿಗಳು ಕೂಡಲೇ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ಸಂಸದ ಸಂಗಣ್ಣ ಕರಡಿ, ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರು, ರಾಘವೇಂದ್ರ ಹಿಟ್ನಾಳ, ಡಿಸಿ ಸುನೀಲ್ ಕುಮಾರ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.