Advertisement

ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂದಿನಿಂದ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ

11:27 AM Sep 28, 2020 | Suhan S |

ಮಹಾನಗರ, ಸೆ. 27:  ಮಂಗಳೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ ಗಳ ವ್ಯಾಪ್ತಿಯಲ್ಲಿ ಸೆ. 28ರಿಂದ ಅ. 5ರ ವರೆಗೆ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ನಡೆಯಲಿದೆ. ಆದರೆ ಇದು ಸ್ವಯಂ ಪ್ರೇರಿತ ತಪಾಸಣೆಯಾಗಿದ್ದು, ಜನ ಗೊಂದಲ, ಭಯಗೊಳ್ಳುವ ಅಗತ್ಯ ಇಲ್ಲ. ದ.ಕ. ಜಿಲ್ಲೆಯಲ್ಲಿ ಕೋವಿಡ್ ದೃಢ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತಾಲೂಕಿನ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಹಮ್ಮಿಕೊಳ್ಳಲು ದ.ಕ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗ್ರಾಮ ಪಂಚಾಯತ್‌ಗಳ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.  ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ಅಗತ್ಯ

Advertisement

ಜನರಿಗೆ ಕೋವಿಡ್ ಬಗ್ಗೆ ಆತಂಕ ಇರುವ ಹಿನ್ನೆಲೆಯಲ್ಲಿ ಮತ್ತು ಲಕ್ಷಣಗಳು ಕಂಡು ಬಂದಾಗ ಪರೀಕ್ಷೆ ಮಾಡುವ ಬಗ್ಗೆ ಗೊಂದಲ ಇರುವ ಕಾರಣ ಈ ಅವಕಾಶ ನೀಡಲಾಗಿದೆ. ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆಯಂತಹ ಲಕ್ಷಣಗಳಿದ್ದಲ್ಲಿ ಇದು ಕೊರೊನಾ ಸೋಂಕಿನ ಲಕ್ಷಣವನ್ನು ಹೋಲುವುದರಿಂದ ಜನ ಕೊರೊನಾ ಪರೀಕ್ಷೆಗೆ ಒಳಪಡಬಹುದು. ಇದು ಸೋಂಕು ತೀವ್ರಗೊಳ್ಳುವುದನ್ನು ಮತ್ತು ಕುಟುಂಬದ ಇತರರಿಗೆ ಹರಡು ವುದನ್ನು ತಡೆಯಲು ಸಹಕಾರಿ. ಜನ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ :  ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ನಡೆಸಿ ವಾರದೊಳಗೆ ವರದಿ ನೀಡುವಂತೆ ಗ್ರಾಮ ಪಂಚಾಯತ್‌ಗಳಿಗೆ ಸೂಚನೆ ನೀಡಿದ್ದೇನೆ. ಆದರೆ ಇದು ಕಡ್ಡಾಯ ಪರೀಕ್ಷೆಯಲ್ಲ. ಹೀಗಿರುವಾಗ, ಜನರು ಇದು ಕಡ್ಡಾಯವೆಂದು ಭಯ ಪಡಬಾರದು. ಆಸಕ್ತರು ಸ್ವಯಂ ಪ್ರೇರಿತವಾಗಿ ಪರೀಕ್ಷೆಗೆ ಒಳಗಾಗಬಹುದು. ತಪಾಸಣೆ ಮಾಡಿಸಿಕೊಳ್ಳುವುದರಿಂದ ಕುಟುಂಬ, ಸಮಾಜದಲ್ಲಿ ಹರಡುವುದು, ಸಂಭವನೀಯ ಅಪಾಯಗಳನ್ನು ತಪ್ಪಿಸಬಹುದು. -ಡಾ| ಆರ್‌. ಸೆಲ್ವಮಣಿ,   ಜಿ.ಪಂ. ಸಿಇಒ

ಭಯ ಬೇಡ, ಧೈರ್ಯವಿರಲಿ : ಗ್ರಾ.ಪಂ.  ಮಟ್ಟದಲ್ಲಿ ನಡೆಯುವ ಕೋವಿಡ್‌-19 ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟರೆ ಅದಕ್ಕೆ ಬೇಕಾದ ಔಷಧಗಳನ್ನು ವೈದ್ಯರು ನೀಡುತ್ತಾರೆ.  ಏನೂ ಲಕ್ಷಣವಿಲ್ಲದೆ ಇದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಇದ್ದು, ಅಥವಾ ಆಸ್ಪತ್ರೆಗೆ ಹೋಗಬೇಕಾದ ಅಗತ್ಯ ಕಂಡು ಬಂದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದು. ಆರಂಭಿಕ ಹಂತದಲ್ಲೇ ಈ ರೀತಿಯ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಜನ ಈ ಬಗ್ಗೆ ಅನಗತ್ಯ ಭಯಪಡದೆ ಧೈರ್ಯದಿಂದ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದು “ಸುದಿನ’ ಕಳಕಳಿ.

Advertisement

Udayavani is now on Telegram. Click here to join our channel and stay updated with the latest news.

Next