Advertisement

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

12:59 PM Jan 20, 2022 | Team Udayavani |

ಬೆಂಗಳೂರು : ಲಸಿಕೆ ಪಡೆಯುವವರಿಗೆ ಪರೀಕ್ಷೆ ಕಡ್ಡಾಯ! – ನಗರದ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹದ್ದೊಂದು ಅಲಿಖೀತ ನಿಯಮ ಜಾರಿಯಲ್ಲಿದೆ. ಇದು ಲಸಿಕೆ ಪಡೆಯಲು ಬರುವವರಿಗೆ ಕಿರಿಕಿರಿ ಉಂಟುಮಾಡುತ್ತಿದೆ.

Advertisement

ಮೊದಲ ಅಥವಾ ಎರಡನೇ ಹಾಗೂ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವ ಪ್ರತಿಯೊಬ್ಬರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಈ ಪರೀಕ್ಷೆಗೊಳಪಟ್ಟ ನಂತರವಷ್ಟೇ ಲಸಿಕೆ ಪಡೆಯಲು ಒಳಗೆ ಕಳುಹಿಸಲಾಗುತ್ತದೆ. ಯಾವುದೇ ಲಕ್ಷಣಗಳಿಲ್ಲದಿದ್ದರೂ ಹೀಗೆ ತಮ್ಮ ಗಂಟಲು ದ್ರವದ ಮಾದರಿ ಸಂಗ್ರಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ ಲಸಿಕೆ ಪಡೆಯಲು ಬರುವವರಿಗೆ ವಯಸ್ಸು, ಲಸಿಕೆಗಳ ನಡುವಿನ ಅಂತರ ಮತ್ತಿತರ ಅರ್ಹತೆಗಳನ್ನು ಪರಿಶೀಲಿ ಸಲಾಗುತ್ತದೆ. ಉದಾಹರಣೆಗೆ ಮಕ್ಕಳಾದರೆ, 15 ವರ್ಷ ಮೇಲ್ಪಟ್ಟಿರಬೇಕು. 60 ವರ್ಷ ಮೇಲ್ಪಟ್ಟಿದ್ದರೆ ಎರಡೂ ಡೋಸ್‌ ಪಡೆದು  9 ತಿಂಗಳಾಗಿರಬೇಕು. ಉಳಿದವರಿಗೆ ಎರಡು ಲಸಿಕೆಗಳ ನಡುವಿನ ಅಂತರ 90 ದಿನಗಳು ಇರಬೇಕು. ಆದರೆ, ಬಿಬಿಎಂಪಿ ವ್ಯಾಪ್ತಿಯ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಮಾನದಂಡಗಳ ಜತೆಗೆ ಪರೀಕ್ಷೆಗೆ ಒಳಪಡುವುದೂ ಸೇರಿದೆ.

ಪರೀಕ್ಷೆ ಸಂಖ್ಯೆಗಳನ್ನು ಹೆಚ್ಚಿಸಲು ಈ ಸುಲಭ ಮಾರ್ಗವನ್ನು ಕೆಲವು ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ನನಗೆ ಯಾವುದೇ ಲಕ್ಷಣಗಳಿಲ್ಲ. ಆದರೆ, ಕಚೇರಿ, ಮಾಲ್‌ ಗಳು ಸೇರಿದಂತೆ ಅನೇಕ ಕಡೆ ಎರಡೂ ಡೋಸ್‌ ಪ್ರಮಾಣಪತ್ರ ಕೇಳುತ್ತಿದ್ದಾರೆ. ಹಾಗಾಗಿ, ಲಸಿಕೆ ಪಡೆಯಲು ಮಂಜುನಾಥನಗರ
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದೆ. ಆದರೆ, ಇಲ್ಲಿ ಮೊದಲು ನನ್ನ ಗಂಟಲು ದ್ರವದ ಮಾದರಿ ಸಂಗ್ರಹಿಸಿದರು. ಈ ಬಗ್ಗೆ ಕೇಳಿದರೆ, ಮೇಲಿನಿಂದ ನಿರ್ದೇಶನ ಬಂದಿದೆ. ಲಸಿಕೆ ಬೇಕಾದರೆ, ಪರೀಕ್ಷೆ ಮಾಡಿಸಿ ಎಂದರು. ಇದು ಯಾವ ನ್ಯಾಯ?’ ಎಂದು ರಾಜಾಜಿನಗರ ನಿವಾಸಿ ಮಹೇಶ್‌ ಪ್ರಶ್ನಿಸುತ್ತಾರೆ.

ಇದನ್ನೂ ಓದಿ : ರಾತ್ರಿ ಹಸುಗಳನ್ನು ಕದ್ದು ಸಂತೆಗೆ ಮಾರಾಟ :ಜಿಲ್ಲೆಯ 10 ದನಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು

Advertisement

ಪ್ರಗತಿ ಮಂದಗತಿ ಇರುವಲ್ಲಿ ಅನುಸರಣೆ?: ನಗರದಲ್ಲಿ ಕೊರೊನಾ ಮೂರನೇ ಅಲೆ ತೀವ್ರವಾಗಿ ಹರಡುತ್ತಿದೆ. ಈ ಭೀತಿ ಹಿನ್ನೆಲೆಯಲ್ಲಿ ಲಸಿಕೆಗೆ ಬೇಡಿಕೆ ಬಂದಿದ್ದು, ಕೆಲವೆಡೆ ಸರದಿಯಲ್ಲಿ
ನಿಂತು ಲಸಿಕೆ ಪಡೆಯುತ್ತಿದ್ದಾರೆ. ಈ ಅವಕಾಶವನ್ನು ಬಳಸಿ ಕೊಂಡು ಬಿಬಿಎಂಪಿಯು ಪರೀಕ್ಷೆ ಸಂಖ್ಯೆ ಹೆಚ್ಚಿಸುವ ಲೆಕ್ಕಾಚಾರ ಹಾಕುತ್ತಿದೆ. ವಾಸ್ತವವಾಗಿ ಬಿಬಿಎಂಪಿ ಅಧಿಕಾರಿಗಳು ಆಯಾ
ವಾರ್ಡ್‌ ಮಟ್ಟದಲ್ಲಿ ಆರೋಗ್ಯ ಕೇಂದ್ರಗಳಿಗೆ ಸಾಧ್ಯವಾದಷ್ಟು ಹೆಚ್ಚು ಪರೀಕ್ಷೆಗಳನ್ನು ನಡೆಸಲು ಸೂಚಿಸಿದ್ದಾರೆ. ನಿರೀಕ್ಷಿತ ಪ್ರಗತಿ ಸಾಧಿಸದ ಆರೋಗ್ಯ ಕೇಂದ್ರಗಳು ಈ ಮಾದರಿಯನ್ನು ಅನುಸರಿ ಸುತ್ತಿವೆ. ಇದು ಬಹುತೇಕ ಎಲ್ಲ ವಲಯಗಳಲ್ಲೂ ಕೆಲವೇ ಕೆಲವು ಕಡೆ ಕಂಡುಬರುತ್ತಿದೆ. ಆದರೆ, ಇದು ತಪ್ಪು ಎಂದು ಅಧಿಕಾರಿ ಗಳು ಸ್ಪಷ್ಟಪಡಿಸಿದ್ದಾರೆ.

“ಸರ್ಕಾರದ ಮಾರ್ಗಸೂಚಿ ಪ್ರಕಾರ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಬರುವವರು, ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿತ ಸಹ-ಅಸ್ವಸ್ಥತೆ (ಉದಾ: ಮಧು
ಮೇಹ, ಹೃದ್ರೋಗ ಇತ್ಯಾದಿ) ಇರುವವರನ್ನು ಮಾತ್ರ ಪರೀಕ್ಷೆ ಗೊಳಪಡಿಸಬೇಕು. ಇನ್ನೂ ಮುಂದುವರಿದು, ಪ್ರಾಥಮಿಕ ಸಂಪರ್ಕಿತರನ್ನೂ ಕೈಬಿಡಲಾಗಿದೆ. ಸೋಂಕಿನ ಲಕ್ಷಣಗಳಿದ್ದರೆ
ಮಾತ್ರ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಸೂಚಿಸಲಾ ಗಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

“ದೂರು ನೀಡಿದ್ರೆ ಕ್ರಮ’
“ಲಸಿಕೆ ಪಡೆಯಲು ಬಂದವರನ್ನು ಪರೀಕ್ಷೆಗೊಳಪಡಿಸುವ ಯಾವುದೇ ನಿಯಮ ಅಥವಾ ಸೂಚನೆಯನ್ನೂ ಬಿಬಿಎಂಪಿಯಿಂದ ನೀಡಿಲ್ಲ. ಇದು ತಪ್ಪು ಕೂಡ. ಒಂದು ವೇಳೆ ಈ ರೀತಿಯ ಘಟನೆಗಳು ಕಂಡುಬಂದರೆ, ತಕ್ಷಣ ಪಾಲಿಕೆಗೆ ದೂರು ನೀಡಬಹುದು. ಅಂತಹ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ.ಬಾಲಸುಂದರ್‌ ತಿಳಿಸಿದ್ದಾರೆ. ನಗರದಲ್ಲಿ ನಿತ್ಯ ಸರಾಸರಿ 30 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ ಆರೋಗ್ಯ
ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಮೂರೂ ಹಂತದ ಲಸಿಕೆಗಳು ಸೇರಿವೆ. ಮೊದಲ ಡೋಸ್‌ ಶೇ. 95ರಷ್ಟು ಪೂರ್ಣಗೊಂಡಿದ್ದು, ಎರಡನೇ ಡೋಸ್‌ನಲ್ಲೂ ಈಚೆಗೆ ಉತ್ತಮ ಪ್ರಗತಿ ಕಂಡುಬಂದಿದೆ. ಇನ್ನು ನಿತ್ಯ ರಾಜ್ಯದ ಅರ್ಧದಷ್ಟು ಅಂದರೆ ಒಂದು ಲಕ್ಷ ಪರೀಕ್ಷೆಗಳು ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next