ಬೆಂಗಳೂರು: ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭವಾಗಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ. ಇದಕ್ಕೆ ಕೋವಿಡ್ ಆತಂಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ನಡುವೆಯೇ ಸಮಾಧಾನಕರ ಅಂಶವೊಂದು ಬಯಲಾಗಿದೆ. ರಾಜ್ಯದಲ್ಲಿ ಅಂದಾಜು 25 ಸಾವಿರ ವಿದ್ಯಾರ್ಥಿಗಳಲ್ಲಿ ಸೋಂಕು ಪರೀಕ್ಷೆ ಮಾಡಿಸಲಾಗಿದ್ದು, 72 ಮಂದಿಗಷ್ಟೇ ಪಾಸಿಟಿವ್ ಬಂದಿದೆ.
ಮಂಗಳವಾರದಿಂದಲೇ ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ತರಗತಿ ಆರಂಭವಾಗಿದೆ. ಆದರೆ, ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್ ವ್ಯವಸ್ಥೆಯಲ್ಲೇ ಕಲಿಕೆ ಮುಂದುವರಿಸಿದ್ದು, ಆನ್‌ಲೈನ್ ತರಗತಿಯಲ್ಲೇ ಭಾಗವಹಿಸುತ್ತಿದ್ದಾರೆ.
ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವುದರಿಂದ ಕೆಲವರು ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕಿದ್ದು, ಆದರೆ, ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡೇ ತರಗತಿಗೆ ಬರುತ್ತಿದ್ದು, ಅತಿ ಕಡಿಮೆ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಸಮಾಧಾನ ತಂದಿದೆ.
ಬೆಂಗಳೂರಿನಲ್ಲಿ ಶೈಕ್ಷಣಿಕ ವರ್ಷದ ಕಾಲೇಜು ತರಗತಿಗಳು ಆರಂಭವಾದ ಹಿನ್ನೆಲೆಯಲ್ಲಿ ನಗರದಲ್ಲಿ ಎರಡು ದಿನಗಳಲ್ಲಿ 18000 ವಿದ್ಯಾರ್ಥಿಗಳಿಗೆ ಸೋಂಕು ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ 57 ಜನ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬಳ್ಳಾರಿಯಲ್ಲಿ ಜಿಲ್ಲೆಯಾದ್ಯಂತ7 ವಿದ್ಯಾರ್ಥಿಗಳಲ್ಲಿಪಾಸಿಟಿವ್ ಬಂದಿದೆ. ಬಳ್ಳಾರಿ ತಾಲೂಕು2, ಹೊಸಪೇಟೆ 3, ಕೂಡ್ಲಿಗಿ ತಾಲೂಕು ಇಬ್ಬರು ವಿದ್ಯಾರ್ಥಿಗಳಲ್ಲಿಸೋಂಕುಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಎಲ್.ಜನಾರ್ದನ್ ಮಾಹಿತಿ ನೀಡಿದ್ದಾರೆ.
ಹಾಸನದಲ್ಲಿ ಎರಡು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಸೋಂಕು ಪರೀಕ್ಷೆಯಲ್ಲಿ ಜಿಲ್ಲೆಯ 6 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿ ಬಂದಿದೆ ಎಂದು ಡಿಎಚ್‌ಒ ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 646 ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ಇಬ್ಬರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಕೋಲಾರ ಜಿಲ್ಲೆಯಲ್ಲಿ ನಡೆದ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಪಾಸಿಟಿವ್ ಬಂದಿರುವುದಿಲ್ಲ. ಕೋಲಾರ ಜಿಲ್ಲೆಯಲ್ಲಿ ಮೂರು ದಿನಗಳಿಂದಲೂ 300-400 ಸಂಖ್ಯೆಯ ವಿದ್ಯಾರ್ಥಿಗಳು ಸೋಂಕು ಪರೀಕ್ಷೆಗೊಳಪಡುತ್ತಿದ್ದು, ಗುರುವಾರವರೆಗೂ ವಿದ್ಯಾರ್ಥಿ ಸೋಂಕಿತರು ಕಂಡು ಬಂದಿಲ್ಲ ಎಂದು ಕೋವಿಡ್ ಅಧಿಕಾರಿ ಡಾ.ಚಾರಿಣಿ ತಿಳಿಸಿದ್ದಾರೆ.
ಉಳಿದ ಹೆಚ್ಚಿನ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದರೂ, ಕಾಲೇಜು ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ದಾಖಲಿಸಿಲ್ಲ. ಎಷ್ಟು ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದಾರೆ ಎಂಬ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.