ಬೆಂಗಳೂರು: ಆಸ್ಪತ್ರೆಗಳಲ್ಲಿ ಯಾರೂ ಪ್ರಾಣ ಉಳಿಸುವ ಕೆಲಸ ಮಾಡುತ್ತಿಲ್ಲ ಸರ್. ಮೊನ್ನೆ ತಾನೆ 29 ವರ್ಷದ ತಾಯಿ ಕೊರೊನಾದಿಂದ ಮೃತಪಟ್ಟರು. ಈಗ ಅವರ ಮಾವ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಪೂಜೆ ಸಾಮಗ್ರಿ ತರಲು ಮನೆಯಿಂದ ಹೊರಟಾಗ ಅವರ ಮಗ ಅಮ್ಮ ಎಲ್ಲೋದ್ರು ಎಂದ. ದೇವರ ಹತ್ತಿರ ಹೋಗಿದಾರೆ ಎಂದೆ. ನಾನು ಅಮ್ಮನ ನೋಡಬೇಕು, ನಾನು ದೇವರ ಹತ್ತಿರ ಹೋಗುತ್ತೇನೆ ಎನ್ನುತ್ತಿದ್ದಾನೆ ಸರ್.. ಏಳು ವರ್ಷದ ಮಗು..
ಇದು, ತನ್ನ ತಾಯಿಯನ್ನು ಕಳೆದುಕೊಂಡ ಏಳು ವರ್ಷದ ಮಗ, ತಾಯಿ ಮೃತಪಟ್ಟಿದ್ದಾರೆ ಎಂಬುವುದನ್ನೂ ಅರಿಯದೆ ಅಮ್ಮನನ್ನು ನಾನು ನೋಡಬೇಕು. ನಾನು ಸಹ ದೇವರ ಬಳಿ ಹೋಗುತ್ತೇನೆ ಎಂದು ಪೋಷಕರ ಬಳಿ ಕಣ್ಣೀರಿಡುತ್ತಿರುವುದನ್ನು ನೆನೆದು ಸಂಬಂಧಿಕರು, ನಗರದ ಯಲಹಂಕ ಚಿತಾಗಾರದ ಬಳಿ ಶುಕ್ರವಾರ ಕಣ್ಣೀರಾದರು.
ಕೋವಿಡ್ ದೃಢವಾದ ರೋಗಿಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದರೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಮೊನ್ನೆ ತಾನೆ ಒಂದು ಮೃತದೇಹ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಕೆಲವೇ ದಿನಗಳಲ್ಲಿ ಮತ್ತೆ ಈಗ ಮತ್ತೂಂದು ಸಾವಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು, ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ನೀಡಲ್ಲ. ಮೊದಲೇನೊಂದಿರುವವರಿಗೆ ವೈದ್ಯರು, ಸರಿಯಾಗಿ ರೆಸ್ಪಾನ್ಸ್ ಮಾಡದೆ ಕೇರ್‌ಲೆಸ್ ಆಗಿ ಮಾತನಾಡುತ್ತಾರೆ ಎಂದು ಆಸ್ಪತ್ರೆಗಳ ವಾಸ್ತವ ಸ್ಥಿತಿ ಬಿಚ್ಚಿಟ್ಟರು. ವೈದ್ಯರು, ಪ್ರಾಣ ಉಳಿಸುವ ಕೆಲಸ ಮಾಡುತ್ತಿಲ್ಲ.
ಎಲ್ಲರೂ ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ಬಂದಿರುವ ಪರಿಸ್ಥಿತಿ ಯಾರಿಗೂ ಬರಬಾರದು.ಆಕ್ಸಿಜನ್, ಬೆಡ್ ಕೊರತೆ ಇದೆ. ಇದರಿಂದಾಗಿ ಕೊರೊನಾ ಸೋಂಕಿತರುಸಾವನ್ನಪ್ಪಿದ್ದಾರೆ. ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದರೆ ಆಸ್ಪತ್ರೆಗೆ ಹೋದ ವ್ಯಕ್ತಿ, ಅವನು ಸತ್ತೇ ಹೊರಗಡೆ ಬರುತ್ತಾನೆ. ಬದುಕಿ ಯಾರೂ ಬರುವುದಿಲ್ಲ ಎನಿಸುತ್ತಿದೆ ಎಂದು ಬೇಸರಿಸಿದರು.