ಉಪ್ಪಿನಂಗಡಿ: ಹೊಟೇಲ್ ಕಾರ್ಮಿಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದು, ಆ ವೇಳೆಗೆ ಅವರು ಜ್ವರದಿಂದ ಬಳಲುತ್ತಿದ್ದರು ಎಂಬ ವದಂತಿ ಹಬ್ಬಿದ್ದರಿಂದ ಕೋವಿಡ್ ಭೀತಿಯಿಂದಾಗಿ ಶವದ ಬಳಿ ಬರಲು ಯಾರೂ ಒಪ್ಪದ ಸನ್ನಿವೇಶ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ದರ್ಬೆ ಯಲ್ಲಿ ಬುಧವಾರ ಸೃಷ್ಟಿಯಾಯಿತು.
ಉಡುಪಿ ಮೂಲದ 56 ವರ್ಷದ ವ್ಯಕ್ತಿ ಮನೆಯವರಿಂದ ದೂರವಾಗಿ ಉಪ್ಪಿನಂಗಡಿಯ ಹೊಟೇಲಲ್ಲಿ ಕಾರ್ಮಿಕರಾಗಿದ್ದರು. ಪ್ರಸಕ್ತ ಹೊಟೇಲು ವ್ಯವಹಾರ ಇಲ್ಲದಿರುವುದರಿಂದ ನೆಕ್ಕಿಲಾಡಿಯ ಪರಿಚಯಸ್ಥರ ಮನೆಯಲ್ಲಿದ್ದರು. ಕುಡಿತದ ಚಟ ಹೊಂದಿದ್ದ ಅವರು ಬುಧವಾರ ಮಧ್ಯಾಹ್ನದ ವೇಳೆಗೆ ಮನೆಯಲ್ಲೇ ಕುಸಿದು ಬಿದ್ದು ಮೃತಪಟ್ಟರೆನ್ನಲಾಗಿದೆ.
ಈ ಮಧ್ಯೆ ಅವರು ಜ್ವರದಿಂದ ಬಳಲುತ್ತಿ ದ್ದರು ಎಂದು ಯಾರೋ ಸುದ್ದಿ ಹಬ್ಬಿಸಿದರು. ಪೊಲೀಸ್ ಠಾಣೆಗೂ ಮಾಹಿತಿ ತಲುಪಿತು. ವಿಷಯ ತಿಳಿದ ಮೃತನ ಪುತ್ರನೂ ಸಂಜೆ ವೇಳೆಗೆ ನೆಕ್ಕಿಲಾಡಿಗೆ ಆಗಮಿಸಿದರು. ಆದರೆ ಯಾರೂ ನೆರವಿಗೆ ಬಾರದ್ದರಿಂದ ಶವ ಸಂಸ್ಕಾರ ಮಾಡಲೂ ಆಗದೆ, ಶವವನ್ನು ಊರಿಗೆ ಸಾಗಿಸಲೂ ಆಗದೆ ಅಸಹಾಯಕರಾಗಿ ಪೊಲೀಸ್ ಠಾಣೆಯ ಬಾಗಿಲಲ್ಲಿ ಕಾಯುವ ಸ್ಥಿತಿ ಎದುರಾಯಿತು. ಕಂದಾಯ, ಆರೋಗ್ಯ ಇಲಾಖಾಧಿಕಾರಿಗಳಿಗೆ ಮಾಡಿದ ಪೋನ್ ಕರೆಗಳು ವಿಫಲವಾದವು.
ಮೃತರ ಪುತ್ರನ ಸಂಕಷ್ಟವನ್ನು ಮನಗಂಡ ಉಪ್ಪಿನಂಗಡಿ ಎಸ್‌ಐ ಈರಯ್ಯ ಅವರು, ಖಾಸಗಿ ಆ್ಯಂಬುಲೆನ್ಸ್ ಚಾಲಕನ ಮನವೊಲಿಸಿ ಪೊಲೀಸರಿಗೆ ನೀಡಲಾದ ಪಿಪಿಇ ಉಡುಪನ್ನು ಆತನಿಗೆ ತೊಡಿಸಿ ಶವವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸುವಂತೆ ಮಾಡಿದರು. ಮೃತನ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶ ಬಂದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
ಒಟ್ಟಾರೆಯಾಗಿ ಸಾವಿನ ಬಳಿಕ ಸೃಷ್ಟಿಯಾದ ವದಂತಿಯು ಮೃತ ವ್ಯಕ್ತಿಯ ಮನೆಯವರನ್ನೂ ಅಕ್ಕಪಕ್ಕದ ನಿವಾಸಿಗಳನ್ನೂ ಕಂಗೆಡಿಸುವಂತೆ ಮಾಡಿದೆ.