ಕಲಬುರಗಿ: ಕೋವಿಡ್ ನಿಯಂತ್ರಣಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ ಎಂಬುದಾಗಿದ್ದರೂ ಬಾಡಿಗೆ (ಗುತ್ತಿಗೆ ಆಧಾರದ ಮೇಲೆ) ಪಡೆಯಲಾಗಿದ್ದ ಕ್ರೂಸರ್ ಹಾಗೂ ಇತರೆ ಖಾಸಗಿ ವಾಹನಗಳಿಗೆ ಬಿಲ್ ಮಾತ್ರ ಪಾವತಿಸದೆ ಜಿಲ್ಲಾಡಳಿತ ಸತಾಯಿಸುತ್ತಿದೆ. ಕೋವಿಡ್ ನಿಯಂತ್ರಣದ ಲಾಕ್‌ಡೌನ್ ಸಮಯದಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರನ್ನು ಹೋಂ ಕ್ವಾರಂಟೈನ್ ಕೇಂದ್ರಗಳಿಗೆ ಸಾಗಿಸುವುದು, ಆರೋಗ್ಯ ಇಲಾಖೆ ಸಿಬ್ಬಂದಿ ಸಂಚಾರಕ್ಕೆ, ಊಟ ಸರಬರಾಜು ಸೇರಿದಂತೆ ಇತರೆ ಕಾರ್ಯಗಳಿಗೆ ಖಾಸಗಿ (ಕ್ರೂಸರ್) ವಾಹನಗಳನ್ನು ದಿನಕ್ಕೆ 1500 ರೂ.ನಂತೆ ಕಳೆದ ಏಪ್ರಿಲ್ ತಿಂಗಳಿಂದ ನವೆಂಬರ್ ಅಂತ್ಯದವರೆಗೂ ಬಾಡಿಗೆ ಪಡೆಯಲಾಗಿದೆ. ಆದರೆ 8 ತಿಂಗಳ ಬಿಲ್ ಪಾವತಿಸದೆ ಇರುವುದರಿಂದ ಬಾಡಿಗೆ ನೀಡಿರುವ ವಾಹನಗಳ ಮಾಲೀಕರು ಕಂಗಾಲಾಗಿದ್ದಾರೆ.
ಕಲಬುರಗಿ ತಹಶೀಲ್ದಾರ್ ಮೂಲಕ 21 ಕ್ರೂಸರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಸಹ 20 ಕ್ರೂಸರ್‌ಗಳನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಿಕೊಂಡಿದ್ದು, ಬಿಲ್ ಮಾತ್ರ ಪಾವತಿಸದೆ ನಾಳೆ ಬಾ ಎಂಬ ನೀತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಬಿಲ್‌ಗಾಗಿ ವಾಹನಗಳ ಮಾಲೀಕರು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಕಚೇರಿ ಅಲೆದು ಸುಸ್ತಾಗಿದ್ದಾರೆ. ಜಿಲ್ಲಾಡಳಿತದ ನಿರ್ಲಕ್ಷ್ಯತನದ ನಡೆ ವಾಹನಗಳ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೋವಿಡ್ ನಿಯಂತ್ರಣವಲ್ಲದೇ ಪ್ರವಾಹ ಸಂದರ್ಭದಲ್ಲೂ ವಾಹನಗಳನ್ನು ಜಿಲ್ಲಾಡಳಿತ ಬಳಸಿಕೊಂಡಿದೆ. ಹಗಲಿರುಳು ಕ್ರೂಸರ್ ಓಡಿಸಲಾಗಿದೆ. ಆದರೆ ಅಧಿಕಾರಿಗಳು ಬಿಲ್ ಪಾವತಿಸುವಲ್ಲಿ ತೋರುತ್ತಿರುವ ನಿರ್ಲಕ್ಷ್ಯತನ ಮಾಲೀಕರನ್ನು ಕೆರಳುವಂತೆ ಮಾಡಿದೆ. ವಾರದೊಳಗೆ ಬಿಲ್ ಪಾವತಿಸದಿದ್ದರೆ ಎಲ್ಲ ಖಾಸಗಿ ವಾಹನಗಳೊಂದಿಗೆ ಜಿಲ್ಲಾಡಳಿತ ಎದುರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಆಯಾ ತಾಲೂಕು ಕೇಂದ್ರದಲ್ಲಿ ಪಡೆಯಲಾಗಿದ್ದ ವಾಹನಗಳ ಬಾಡಿಗೆ ಪಾವತಿಯಾಗಿದೆ. ಆದರೆ ಕಲಬುರಗಿ ತಾಲೂಕು ಹಾಗೂ ಎಸ್‌ಪಿ ಕಚೇರಿಯಿಂದ ಪಡೆಯಲಾಗಿದ್ದ ಸುಮಾರು 40 ಕ್ರೂಸರ್‌ಗಳ ಬಾಡಿಗೆ ಮಾತ್ರ ಪಾವತಿಯಾಗಿಲ್ಲ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಗ್ರಾಪಂ ಚುನಾವಣೆ ಸಂದರ್ಭದಲ್ಲೂ ವಾಹನಗಳನ್ನು ಬಾಡಿಗೆ ಪಡೆಯುವಾಗ ಮಾಲೀಕರೆಲ್ಲ ಬಾಡಿಗೆ ಕೊಡಲು ನಿರಾಕರಿಸಿದಾಗ ಎರಡು ತಿಂಗಳ ಬಾಡಿಗೆ ಪಾವತಿಸಿ ಕೈ ತೊಳೆದುಕೊಳ್ಳಲಾಗಿದೆ. ಪ್ರತಿಯೊಬ್ಬರಿಗೆ ತಿಂಗಳಿಗೆ 45 ಸಾವಿರ ರೂ.ನಂತೆ 6 ತಿಂಗಳ ಬಾಡಿಗೆ ಹಿಡಿದರೆ ಒಟ್ಟಾರೆ 50 ಲಕ್ಷ ರೂ ಆಗಬಹುದೆಂದು ಅಂದಾಜಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಕೋಟ್ಯಂತರ ಖರ್ಚು ಮಾಡಲಾಗಿದೆ. ಆದರೆ ತಮ್ಮ ಕ್ರೂಸರ್‌ಗಳ ಬಾಡಿಗೆ ಮಾತ್ರ ಕೊಡಲು ಹಿಂದೇಟು ಹಾಕಲಾಗುತ್ತಿದೆ. ಇದ್ಯಾವ ನಾಯ ಎಂದು ವಾಹನಗಳ ಮಾಲೀಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಣೆಯಲ್ಲಿ ಬರೆದಿದ್ದರೆ ಸಚಿವ ಸ್ಥಾನ ಸಿಗುತ್ತದೆ, ಇಲ್ಲಾಂದ್ರೆ ಇಲ್ಲ: ಮುನಿರತ್ನ
ಕೋವಿಡ್ ನಿಯಂತ್ರಣ ಸಲುವಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ಹಗಲಿರುಳು ಕ್ರೂಸರ್ ವಾಹನಗಳನ್ನು ಅಧಿಕಾರಿಗಳು ಹೇಳಿದ ಕಡೆ ಓಡಾಡಿಸಲಾಗಿದೆ. 6 ತಿಂಗಳ ಕಾಲದ ಬಾಡಿಗೆ ಕೊಡದೇ ಇರುವುದರಿಂದ ಪ್ರಸ್ತುತ ಸಂಕ್ರಾಂತಿ ಹಬ್ಬ ಕಹಿಯಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಬಾಡಿಗೆ ಪಾವತಿಸುವ ಮುಖಾಂತರ ಸಿಹಿ ಮೂಡಿಸಲಿ ಎಂದು ಬಾಡಿಗೆ ವಾಹನಗಳ ಮಾಲೀಕರಾದ ಗುಂಡೇರಾವ್ ಪಾಟೀಲ್, ವೀರೇಶ ಹಿರೇಮಠ, ಯಶ್ವಂತರಾವ ನಾಗೋಜಿ ಹಾಗೂ ಇತರರು ಒತ್ತಾಯಿಸಿದ್ದಾರೆ