ಬೀದರ: ಕೋವಿಡ್-19 ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸಿ ಹುತಾತ್ಮರಾದ ವಾರಿಯರ್ಸ್ ಗಳ ಕುಟುಂಬಗಳಿಗೆ ಎರಡ್ಮೂರು ತಿಂಗಳು ಕಳೆದರೂ ಸರ್ಕಾರದ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಸರ್ಕಾರದ ನಿಷ್ಕಾಳಜಿ ಮತ್ತು ವಿಳಂಬ ನೀತಿಯಿಂದಾಗಿ ನೊಂದ ಕುಟುಂಬಗಳು ಪರಿಹಾರದ ಮೊತ್ತಕ್ಕಾಗಿ ಎದುರು ನೋಡುವಂತಾಗಿದೆ.
ಕೋವಿಡ್- ವಿರುದ್ಧ ಹೋರಾಟದಲ್ಲಿಕರ್ತವ್ಯಕ್ಕಾಗಿ ವೈಯಕ್ತಿಕ ತ್ಯಾಗಗಳ ಜತೆಗೆ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಜಿಲ್ಲೆಯ ಹತ್ತಾರು ಜನ ವಾರಿಯರ್ಗಳಿಗೆ ಸೋಂಕು ತಗುಲಿದ್ದು, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ತಲಾ ಒಬ್ಬರುಸಿಬ್ಬಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಜನರನ್ನು ಕೋವಿಡ್‌ನಿಂದ ರಕ್ಷಿಸಲು ಶ್ರಮಿಸಿದ ಇಬ್ಬರು ಸಿಬ್ಬಂದಿ ಮೃತಪಟ್ಟು ಎರಡು ತಿಂಗಳು ಕಳೆದರೂ ಸರ್ಕಾರ ಘೋಷಿಸಿದ 30 ಲಕ್ಷ ರೂ. ಪರಿಹಾರ ಮಾತ್ರ ಕುಟುಂಬಕ್ಕೆ ತಲುಪಿಲ್ಲ.
ಕೋವಿಡ್- ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಠಾಣೆಯ ಪೊಲೀಸ್ ಪೇದೆರವೀಂದ್ರ ಕಂಠೆಪ್ಪ (35) ಆ.21ರಂದುರೋಗಕ್ಕೆ ತುತ್ತಾಗಿ ಬ್ರಿಮ್ಸ್‌ನಲ್ಲಿ ಮೃತಪಟ್ಟಿದ್ದರು. ಹುಮನಾಬಾದ ತಾಲೂಕಿನ ಹಂದಿಕೇರಾದ ಪೇದೆ 2008ರಿಂದ ಧನ್ನೂರಾ, ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2017ರಿಂದ ಖಟಕಚಿಂಚೋಳಿ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಸರ್ಕಾರದ ಪರಿಹಾರ ಮಾನದಂಡಗಳಿಗೆ ಒಳಪಟ್ಟರೂ ತಾಂತ್ರಿಕ ಕಾರಣದಿಂದಾಗಿ ಹಣ ಬಿಡುಗಡೆಯಾಗುವಲ್ಲಿ ವಿಳಂಬವಾಗಿದೆ.
ಪೇದೆಗೆ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಮನೆಗೆ ಆಸರೆಯಾಗಿದ್ದ ಪೇದೆ ಸಾವು ಅವರ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದ್ದು, ಈಗ ಕುಟುಂಬನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ವಾರಿಯರ್ಸ್ ಗಳ ಕುಟುಂಬಕ್ಕೆ ತಕ್ಷಣವೇ ಪರಿಹಾರ ಕಲ್ಪಿಸಿ ಸರ್ಕಾರ ಅವರ ಕುಟುಂಬಗಳಿಗೆ ಆಸರೆಯಾಗಬೇಕಿತ್ತು. ಆದರೆ, ಆಡಳಿತದ ಭರವಸೆ ಕೇವಲದಾಖಲೆಗಳಲ್ಲೇ ಉಳಿಯುತ್ತಿರುವುದು ಮಾತ್ರ ವಿಪರ್ಯಾಸ.
ಇನ್ನೂ ಬೀದರನ ಬ್ರಿಮ್ಸ್ ಕೋವಿಡ್ ಅಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸಾ ಸೇವೆಯಲ್ಲಿದ್ದ ಡಿ ಗ್ರೂಪ್ ಸಿಬ್ಬಂದಿಗೆ (ಹೊರ ಗುತ್ತಿಗೆ) ಎರಡು ತಿಂಗಳು ಹಿಂದೆ ಸೋಂಕು ತಗುಲಿ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಸಿಬ್ಬಂದಿ ಕುಟುಂಬಕ್ಕೆ ಪರಿಹಾರಕ್ಕಾಗಿ ಬ್ರಿಮ್ಸ್ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಪುರಸ್ಕಾರಗೊಂಡಿದೆ. ನೊಂದ ಕುಟುಂಬ ಪರಿಹಾರಕ್ಕಾಗಿ ಬ್ರಿಮ್ಸ್‌ಗೆ ಅಲೆಯುತ್ತಿದ್ದರೂ ಹಣ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ. ಬಸವಕಲ್ಯಾಣ ಆಸ್ಪತ್ರೆ ಶುಶ್ರೂಷಾಧಿಕಾರಿ ಮತ್ತು ಕಲಖೋರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಕೋವಿಡ್ ನಿಯಂತ್ರಣ ಕರ್ತವ್ಯದಲ್ಲಿದ್ದಾಗಮೃತಪಟ್ಟಿದ್ದರೂ ಅವರಿಬ್ಬರ ಕೋವಿಡ್ ವರದಿಯಲ್ಲಿ ನೆಗೆಟಿವ್ ಬಂದಿದ್ದರಿಂದ ಪರಿಹಾರದ ಅರ್ಜಿ ತಿರಸ್ಕೃತಗೊಂಡಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಕೋವಿಡ್ ಗೆ ಬಲಿಯಾಗಿರುವ ವಾರಿಯರ್ಸ್ ಗಳ ಕುಟುಂಬಕ್ಕೆ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡುವ ಮೂಲಕ ರೋಗದ ಕಡಿವಾಣಕ್ಕೆ ಶ್ರಮಿಸುತ್ತಿರುವ ಸಿಬ್ಬಂದಿಗಳಲ್ಲಿ ಹೊಸ ಭರವಸೆ ಮೂಡಿಸಬೇಕಿದೆ.
ಕೋವಿಡ್‌ನಿಂದ ಮೃತಪಟ್ಟಿರುವ ಖಟಕಚಿಂಚೋಳಿ ಪೊಲೀಸ್ ಠಾಣೆ ಪೇದೆ ಕುಟುಂಬಕ್ಕೆ ಶೀಘ್ರದಲ್ಲಿ ಪರಿಹಾರ ಸಿಗಲಿದೆ. ಪೇದೆ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೇ ಮದುವೆ ಆಗಿದ್ದರು. ಇಬ್ಬರಿಗೂ ಸಮಾನ ಮೊತ್ತ ನೀಡುವ ವಿಷಯದಲ್ಲಿ ತಾಂತ್ರಿಕ ತೊಂದರೆಯಿಂದ ವಿಳಂಬ ಆಗಿದೆ. ಈಗಾಗಲೇ ಎರಡನೇ ಪತ್ನಿ ಮತ್ತು ಮಕ್ಕಳಿಗೆ 18 ಲಕ್ಷ ರೂ. ಪರಿಹಾರಕ್ಕೆ ಕಡತ ವಿಲೇವಾರಿ ಮಾಡಿ ಕಳುಹಿಸಲಾಗಿದ್ದು, ಖಜಾನೆ ಇಲಾಖೆಯಿಂದ ಹಣ ಬಿಡುಗಡೆ ಆಗಲಿದೆ. ಗಾರ್ಡಿಯನ್ ಸರ್ಟಿಫಿಕೆಟ್ ಸಲ್ಲಿಕೆ ಬಳಿಕ ಮೊದಲ ಪತ್ನಿ, ಮಕ್ಕಳಿಗೆ ಉಳಿದ ಪರಿಹಾರ ಸಿಗಲಿದೆ.
-ಡಿ.ಎಲ್. ನಾಗೇಶ, ಎಸ್‌ಪಿ, ಬೀದರ
–ಶಶಿಕಾಂತ ಬಂಬುಳಗೆ