ಮಂಗಳೂರು : ಕೋವಿಡ್-19 ವೈರಾಣು ಸೋಂಕಿನಿಂದಾಗಿ 2022ರ ಮಾರ್ಚ್ 20ಕ್ಕಿಂತ ಮೊದಲು ಮೃತಪಟ್ಟ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಕಾಲಮಿತಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.
2022ರ ಮಾರ್ಚ್ 20ರ ಅನಂತರ ಕೋವಿಡ್‌ನಿಂದ ಸಾವನ್ನಪ್ಪಿದ ವ್ಯಕ್ತಿಗಳ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಮರಣ ಸಂಭವಿಸಿದ ದಿನಾಂಕದಿಂದ 90 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಲಾಗಿದೆ.
ಮೃತಪಟ್ಟವರ ಕಾನೂನು ಬದ್ಧ ವಾರಸುದಾರರಿಗೆ ಕೇಂದ್ರ ಸರಕಾರದ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ತಲಾ 50,000 ರೂ. ಪರಿಹಾರಧನ ವಿತರಿಸುವಂತೆ ಸರಕಾರ ಆದೇಶ ನೀಡಿರುತ್ತದೆ.
ಕೊರೊನಾದಿಂದಾಗಿ ಸಾವು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯ ದತ್ತಾಂಶದಲ್ಲಿ ಲಭ್ಯವಿಲ್ಲದ ಪ್ರಕರಣಗಳನ್ನು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಕುಂದುಕೊರತೆ ನಿವಾರಣ ಸಮಿತಿಯಲ್ಲಿ ತೀರ್ಮಾನಿಸಿ ಸ್ಟೇಟ್‌ಕೋವಿಡ್ ವಾರ್‌ರೂಂ ಲೈನ್‌ಲಿಸ್ಟ್‌ನಲ್ಲಿ ಸೇರ್ಪಡೆಗೊಳಿಸಿದ ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಅನ್ವಯ ಪರಿಹಾರ ಪಾವತಿಸಲು ಆದೇಶ ಹೊರಡಿಸಲಾಗಿದೆ.
ಸ್ವೀಕೃತವಾದ ಅರ್ಜಿಗಳ ಸಂಸ್ಕರಣೆ ಹಾಗೂ ಪರಿಹಾರ ಪಾವತಿಗೆ ಅರ್ಜಿ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಕಾಲಾವಕಾಶ ಇದೆ.
ಯಾವುದೇ ಅರ್ಜಿದಾರರು ಕೋವಿಡ್-19 ಮರಣ ಪರಿಹಾರ ಪಡೆಯುವ ಸಲುವಾಗಿ ಸಲ್ಲಿಸಿದ ಅರ್ಜಿಯಲ್ಲಿ ಸುಳ್ಳು ಮಾಹಿತಿ, ನಕಲಿ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರ ಪಡೆದಿದ್ದು ಸಾಬೀತಾದಲ್ಲಿ ಅಂತಹ ವ್ಯಕ್ತಿಗಳು ವಿಪತ್ತು ನಿರ್ವಹಣಾ ಅಧಿನಿಯಮ-2005ರ ನಿಯಮ 52ರಡಿ ಸೂಕ್ತ ದಂಡದೊಂದಿಗೆ, ಎರಡು ವರ್ಷ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ.