Advertisement

ಆಸ್ಪತ್ರೆ ಸೇರಲು ಪಾಸಿಟಿವ್‌ ವರದಿ ಬೇಕಿಲ್ಲ : ಕೇಂದ್ರ ಸರಕಾರದಿಂದ ಹೊಸ ನಿಯಮ

03:09 AM May 09, 2021 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ಕೊರೊನಾ ಲಕ್ಷಣ ಹೊಂದಿರುವವರನ್ನು ಆಸ್ಪತ್ರೆಗೆ ದಾಖಲಿಸಲು ಪಾಸಿಟಿವ್‌ ವರದಿ ಬೇಕಿಲ್ಲ ಎಂದು ಸರಕಾರ ಹೇಳಿದೆ.

Advertisement

ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಇದುವರೆಗೆ ಕೊರೊನಾ ಲಕ್ಷಣ ಇದ್ದರೂ ಬಿಯು ನಂಬರ್‌ ಇಲ್ಲದಿದ್ದರೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುತ್ತಿರಲಿಲ್ಲ. ಇದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹೆಚ್ಚಿನ ಸಾವು ಸಂಭವಿಸುತ್ತಿತ್ತು. ಇದನ್ನು ಮನಗಂಡಿರುವ ಸರಕಾರ ಮಾರ್ಗಸೂಚಿಯನ್ನು ಬದಲಾಯಿಸಿದೆ.

ಈ ನಿಯಮ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅನ್ವಯವಾಗುತ್ತದೆ ಎಂದು ಸೂಚಿಸಲಾಗಿದೆ.

ನಿರಾಕರಿಸುವಂತಿಲ್ಲ
ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸುವುದಕ್ಕೆ ಸರಿಯಾದ ವಿಳಾಸ ಅಥವಾ ಗುರುತಿನ ಚೀಟಿ ಇಲ್ಲ, ದೂರದ ಊರಿನವರು ಎಂಬ ಕಾರಣವನ್ನೂ ನೀಡುವಂತಿಲ್ಲ. ಕಡಿಮೆ ಲಕ್ಷಣ ಇರುವಂಥವರಿಗೆ ಆಸ್ಪತ್ರೆ ದಾಖಲಾತಿ ಅಗತ್ಯವಿಲ್ಲ. ರೋಗಿಗಳ ಸ್ಥಿತಿ  ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದೂ ಹೇಳಿದೆ.

ಆಮ್ಲಜನಕ: ಟಾಸ್ಕ್ ಫೋರ್ಸ್‌
ಆಮ್ಲಜನಕ ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದೆ. ಸಮರ್ಪಕ ಮತ್ತು ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಆಮ್ಲಜನಕ ಹಂಚಿಕೆ ಮಾಡುವುದಕ್ಕೆ 12 ಸದಸ್ಯರ ಸಮಿತಿಯನ್ನು ಅದು ರಚಿಸಿದೆ. ನ್ಯಾ| ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾ| ಎಂ.ಆರ್‌. ಶಾ ಅವರು ಎಲ್ಲ ಸದಸ್ಯರ ಜತೆಗೆ ಚರ್ಚೆ ನಡೆಸಿದ್ದು, ಸಮರ್ಪಕವಾಗಿ ಆಮ್ಲಜನಕ ಹಂಚಿಕೆಯ ವ್ಯವಸ್ಥೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಸಮಿತಿ ತಾನು ಮಾಡಿದ ಕೆಲಸದ ಬಗ್ಗೆ ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಬೆಂಗಳೂರಿನ ಖ್ಯಾತ ವೈದ್ಯ ಡಾ| ದೇವಿಪ್ರಸಾದ್‌ ಶೆಟ್ಟಿ ಅವರು ಸಮಿತಿಯ ಸದಸ್ಯರಾಗಿದ್ದಾರೆ.

Advertisement

ಹೊಸ ಔಷಧಕ್ಕೆ ಒಪ್ಪಿಗೆ
ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ ಡಿಒ) ದೇಶವಾಸಿಗಳಿಗೆ ಒಂದು ಖುಷಿಯ ಸುದ್ದಿ ನೀಡಿದೆ. ಕೊರೊನಾ ಪೀಡಿತರಿಗಾಗಿ ಅದು ಹೊಸ ಔಷಧವೊಂದನ್ನು ಅಭಿವೃದ್ಧಿಪಡಿಸಿದ್ದು, ಇದರ ಬಳಕೆಗೆ ದೇಶದ ಔಷಧ ನಿಯಂತ್ರಣ ಮಹಾನಿರ್ದೇಶಕರು (ಡಿಸಿಜಿಐ) ಒಪ್ಪಿಗೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತು ಆಮ್ಲಜನಕ ಅಗತ್ಯವಿರುವ ರೋಗಿಗಳಿಗೆ 2-ಡಿಯಾಕ್ಸಿ -ಡಿ-ಗ್ಲುಕೋಸ್(2-ಡಿಜಿ) ಎಂಬ ಈ ಔಷಧ ಪರಿಣಾಮಕಾರಿಯಾಗಿರುತ್ತದೆ ಎಂದು ಡಿಆರ್‌ ಡಿಒ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next