ಸೊರಬ : ಪ್ರಾಣದ ಹಂಗನ್ನೂ ಲೆಕ್ಕಿಸದೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಶನಿವಾರ ಕೋರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಗೆ ಮೂರನೇ ಹೆರಿಗೆ ಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಪಟ್ಟಣದ ಕಾನಕೇರಿ ನಿವಾಸಿಯಾಗಿರುವ ಸುಮಾರು 28 ವರ್ಷದ ಗರ್ಭಿಣಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಮಗು ಜನನದ ಮೊದಲೇ ಕರುಳ ಬಳ್ಳಿ ಹೊರ ಬಿದ್ದಿತ್ತು. ಕನಿಷ್ಟ 15 ನಿಮಿಷ ತಡವಾಗಿದ್ದರೂ ತಾಯಿ ಮತ್ತು ಮಗು ಪ್ರಾಣಾಪಾಯ ಎದುರಿಸಬೇಕಿತ್ತು. ತಮ್ಮ ಪ್ರಾಣವನ್ನು ಸಹ ಲೆಕ್ಕಿಸದ ವೈದ್ಯರ ತಂಡ ಗರ್ಭಿಣಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿತ ಮಹಿಳೆಗೆ ಹೆರಿಗೆ ಮಾಡಿಸಲಾಗಿದ್ದು, ವೈದ್ಯರ ತಂಡಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ :ತೌಖ್ತೇ ಚಂಡಮಾರುತ ಹಿನ್ನಲೆ : ಹಳಿಗಳ ಮೇಲೆ ಮರ ಬಿದ್ದು ರೈಲು ಸಂಚಾರದಲ್ಲಿ ವ್ಯತ್ಯಯ
ಹೆರಿಗೆ ಮಾಡಿಸಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಜಿ. ಶ್ವೇತಾ, ಅರವಳಿಕೆ ತಜ್ಞೆ ಡಾ. ಎಂ. ರಜನಿ, ದಾದಿ ಹೀಮಾಮಣಿ, ಸಚಿನ್ ಮತ್ತು ಗಂಗಾ ಅವರ ವೈದ್ಯಕೀಯ ತಂಡಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.