ಕುರುಗೋಡು : ಕೊರೊನಾ ಮೂರನೇ ಅಲೆಯಿಂದ ರಾಜ್ಯದ್ಯಂತ ಜನರ ಜೀವನ ಅಸ್ತವ್ಯಸ್ತ ಗೊಂಡಿದ್ದು, ಶಾಲೆ, ಕಾಲೇಜ್ ಗಳು, ದೇವಸ್ಥಾನಗಳು ಬಂದ್ ಮಾಡಲಾಗಿದ್ದು, ಅದರಂತೆ ಕೊರೊನಾ ಕರಿ ನೆರಳು ಕುರುಗೋಡು ತಾಲೂಕಿನ ಎರಂಗಳ್ಳಿ ಗ್ರಾಮದ ಮೊರಾರ್ಜಿ ವಸತಿ ನಿಲಯಕ್ಕೆ ಕಾಲಿಟ್ಟಿದೆ.
ನಿಲಯದ 6,7,8,9,10ನೇ ತರಗತಿಯ 46 ಮಕ್ಕಳಿಗೆ ಕೊರೊನಾ ಸೋಂಕು ಬುದುವಾರ ಸಂಜೆ ದೃಢಪಟ್ಟಿದೆ. ಇದರಲ್ಲಿ 35 ಹೆಣ್ಣು ಮಕ್ಕಳು ಹಾಗೂ 11 ಗಂಡು ಮಕ್ಕಳು ಇದ್ದಾರೆ.
ಮಂಗಳವಾರ 231 ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು, ಬುದುವಾರ ಸಂಜೆ 46 ಮಕ್ಕಳಿಗೆ ಸೋಂಕು ಇರುವುದು ದೃಢವಾಗಿರುವುದು ವರದಿ ಬಂದಿದೆ.
ಸೋಂಕು ತಗುಲಿದ ವಿದ್ಯಾರ್ಥಿಗಳು ವಸತಿ ನಿಲಯದಲ್ಲೆ ಕ್ವಾರಂಟೈನ್ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಸತಿ ನಿಲಯದ ಸ್ಥಳಕ್ಕೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಗ್ರೇಡ್ ತಹಸೀಲ್ದಾರ್ ಮಲ್ಲೇಶಪ್ಪ, ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ನಿಲಯದ ಸುತ್ತಮುತ್ತ ಹಾಗೂ ಕೊಠಡಿಗಳಿಗೆ ಸ್ಯಾನಿಟೈಜಾರ್ ಸಿಂಪರಣೆ ಮಾಡಿದ್ದಾರೆ. ಸೋಂಕು ಕಾಣಿಸಿಕೊಂಡ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಅದಕ್ಕೆ ಬೇಕಾದ ಎಲ್ಲ ಸೌಲಭ್ಯ ಗಳನ್ನು ತಯಾರಿ ಮಾಡಿಕೊಳ್ಳಿ ಎಂದು ಸಂಬಂದಿಸಿದ ಅಧಿಕಾರಿಗಳಿಗೆ ತಹಸೀಲ್ದಾರ್ ರಾಘವೇಂದ್ರ ರಾವ್ ಸೂಚನೆ ನೀಡಿದರು.
ಅದರಂತೆ ಇಂದು ಸಂಜೆ 46 ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆ ನಾಳೆಯಿಂದ ಸಂಪೂರ್ಣ ವಾಗಿ ತರಗತಿಗಳು ನಡೆಯದಂತೆ ಬಂದ್ ಮಾಡಲಾಗುತ್ತದೆ ಎಂದು ನಿಲಯದ ಪ್ರಾಚಾರ್ಯರು ತಿಳಿಸಿದರು. ಆದರೂ ಮಕ್ಕಳನ್ನು ಮನೆಗೆ ಕಳಿಸದೆ ವಸತಿ ನಿಲಯದಲ್ಲೇ ತಮ್ಮ ತಮ್ಮ ಕೊಠಡಿಗಳಲ್ಲಿ ಉಳಿದುಕೊಳ್ಳುತ್ತಾರೆ ಎಂದರು.
ಪ್ರಸ್ತುತ ಸಕ್ರಿಯ ಪ್ರಕರಣಗಳು ಹೊರತು ಪಡಿಸಿ ಈಗಾಗಲೇ ಕುರುಗೋಡಲ್ಲಿ ಒಟ್ಟು 26 ಪಾಸಿಟಿವ್ ಕೇಸ್ ಬಂದಿದ್ದಾವೆ.