Advertisement

ಸಗರ ಕ್ವಾರಂಟೈನ್‌ ಕೇಂದ್ರದಲ್ಲಿದ್ದ ತಾಯಿ-ಮಗನಿಗೆ ಕೋವಿಡ್ ಪಾಸಿಟಿವ್‌

07:35 AM Jun 08, 2020 | Team Udayavani |

ಶಹಾಪುರ: ತಾಲೂಕಿನ ಸಗರ ಗ್ರಾಮದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ 14 ಜನರ ಪೈಕಿ ತಾಯಿ ಮತ್ತು ಮಗನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ತಂದೆ ವರದಿ ಬಾಕಿ ಇದೆ. ಆದರೆ ಈವರೆಗೆ ತಮ್ಮ ವರದಿ ಬಾರದ್ದಕ್ಕೆ ತಂದೆ ಆಕ್ರೋಶಗೊಂಡ ಘಟನೆ ಸಗರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಕ್ವಾರಂಟೈನ್‌ ಕೇಂದ್ರದಲ್ಲಿ ರವಿವಾರ ನಡೆದಿದೆ.

Advertisement

ಸಗರ ಗ್ರಾಮದವರೇ ಆಗಿದ್ದ ಈ ಮೂವರು, ಗುಜರಾತ್‌ಗೆ ಕೂಲಿ ಕೆಲಸಕ್ಕೆಂದು ತೆರಳಿದ್ದರು. ತಂದೆ, ತಾಯಿ ಮತ್ತು 20 ವರ್ಷದ ಮಗ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಗ್ರಾಮಕ್ಕೆ ವಾಪಸಾಗಿದ್ದರು. ಆಗ ಪರೀಕ್ಷೆಗೆ ಒಳಪಡಿಸಿ ಇವರನ್ನು ಸ್ವಗ್ರಾಮದ ಕ್ವಾರಂಟೈನ್‌ ಕೇಂದ್ರದಲ್ಲಿರಿಸಲಾಗಿತ್ತು. ಇದೀಗ ಕೇವಲ ತಾಯಿ ಮತ್ತು ಮಗನ ವರದಿ ಮಾತ್ರ ಬಂದಿದ್ದು, ಕೋವಿಡ್ ಸೋಂಕು ದೃಢಪಟ್ಟಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರಿಬ್ಬರನ್ನೂ ಆಂಬ್ಯುಲೆನ್ಸ್‌ ಮೂಲಕ ಸುರಪುರದ ಐಸೋಲೇಷನ್‌ ವಾರ್ಡ್‌ಗೆ ಕರೆದೊಯ್ಯುವಾಗ, ತಂದೆ ನನ್ನದು ಪರೀಕ್ಷಾ ವರದಿ ತರಬೇಕಿತ್ತು. ಈಗ ತಾಯಿ-ಮಗನಿಗೆ ಇಬ್ಬರಿಗೆ ಪಾಸಿಟಿವ್‌ ಬಂದಿದೆ ಎಂದು ನನ್ನಿಂದ ಅವರನ್ನು ಬೇರ್ಪಡಿಸಿ ಕರೆದೊಯ್ದರೆ ಹೇಗೆ? ಪರೀಕ್ಷಾ ವರದಿ ವಿಳಂಬ ಮಾಡಿದ್ದಾದರೂ ಏಕೆ? ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದರು.

ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ತಾಯಿ ಮತ್ತು ಮಗನನ್ನು ಐಸೋಲೇಷನ್‌ ವಾರ್ಡ್‌ಗೆ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next