ಗುಳೇದಗುಡ್ಡ: ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿ ಕಾರಿ ಸೇರಿ ಏಳು ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಆಸ್ಪತ್ರೆ ಸಂಪೂರ್ಣವಾಗಿ ಬಂದ್ ಆಗಿದ್ದು, ಗರ್ಭಿಣಿಯರು ಪರದಾಡುವಂತಾಗಿದೆ.
ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ರೋಗಿಗಳನ್ನು ಡಿಸ್ಚಾರ್ಜ್ ಮಾಡಿದ್ದು, ತುರ್ತು ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಒಬ್ಬರು ಸಾಮಾನ್ಯ ರೋಗಳಿಗೆ ಚಿಕಿತ್ಸೆ ನೀಡುವ, ಚಿಕ್ಕಮಕ್ಕಳ ವೈದ್ಯ, ಆಯುಷ್ ಹಾಗೂ ಅರವಳಿಕೆ ತಜ್ಞ, ಶುಶ್ರೂಷಕರು, ಸಿಬ್ಬಂದಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.
ಹೆರಿಗೆಗೆ ಪ್ರಸಿದ್ಧ ಆಸ್ಪತ್ರೆ: ಪಟ್ಟಣದ ಸರಕಾರಿ ಆಸ್ಪತ್ರೆಯಿಂದ ಗರ್ಭಿಣಿಯರಿಗೆ ಅನುಕೂಲಕರ ವಾಗಿದ್ದು, ಇಲ್ಲಿಯ ಮುಖ್ಯ ವೈದ್ಯಾಧಿ ಕಾರಿ ಡಾ| ನಾಗರಾಜ ಕುರಿ ಹಾಗೂ ವೈದ್ಯರು ಗರ್ಭಿಣಿಯರಿಗೆ ಸುಲಭವಾಗಿ ಹೆರಿಗೆ ಮಾಡುತ್ತ ಬಡವರಿಗೆ ಸರಕಾರಿ ಆಸ್ಪತ್ರೆ ಹತ್ತಿರವಾಗುವಂತೆ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಯನ್ನು ಹೆರಿಗೆಗಾಗಿ ಮೀಸಲಿಟ್ಟಿದ್ದು, ಇದರಿಂದ ಇಲ್ಲಿ ನಿತ್ಯವು ಗರ್ಭಿಣಿಯರಿಂದಲೇ ಆಸ್ಪತ್ರೆ ತುಂಬಿರುತ್ತಿತ್ತು. ಆದರೆ ಈ ವಿಭಾಗದ ಮುಖ್ಯಸ್ಥರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಚಿಕ್ಕಮಕ್ಕಳ ವೈದ್ಯರೇ ಆಸರೆ: ಸದ್ಯ ಎರಡು ದಿನಗಳಿಂದ ಚಿಕ್ಕಮಕ್ಕಳ ವೈದ್ಯ ಡಾ| ಕುಳಗೇರಿ, ಡಾ| ಕವಿತಾ ಸಂಕ್, ಅರವಳಿಕೆ ತಜ್ಞ ಅನಿಲ ಉಕ್ಕಲಿ ಸೇರಿದಂತೆ ಎಲ್ಲ ಸಿಬ್ಬಂದಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸುತ್ತಿದ್ದಾರೆ. ಈ ವೈದ್ಯರು ಸಹಜ ಹೆರಿಗೆ ಮಾಡಿಸುತ್ತಿದ್ದಾರೆ. ಆದರೂ ಸದ್ಯ ಆಸ್ಪತ್ರೆಗೆ ಮಹಿಳಾ ತಜ್ಞ ವೈದ್ಯರ ಅವಶ್ಯಕತೆ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಸದ್ಯ 967 ಗರ್ಭಿಣಿಯರಿದ್ದು, ಗುಳೇದಗುಡ್ಡ ಪಟ್ಟಣದಲ್ಲಿ 296 ಗರ್ಭಿಣಿಯರಿದ್ದಾರೆ.
ತಾಲೂಕಿಗೆ 2 ಹೆರಿಗೆ ಆಸ್ಪತ್ರೆ: ಕೋವಿಡ್ ಹೆಚ್ಚಳವಾಗುತ್ತಿರುವದರಿಂದ ಗರ್ಭಿಣಿಯರಿಗೆ ಕೋವಿಡ್ ತಗುಲಬಾರದೆಂದು ಗುಳೇದಗುಡ್ಡ, ಕೆರೂರು ಆಸ್ಪತ್ರೆಯಲ್ಲಿ ಹೆರಿಗೆಗೆ ಮೀಸಲಿರಿಸಲಾಗಿದೆ. ಅಷ್ಟೇ ಅಲ್ಲದೇ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯು ಹೆರಿಗೆಗೆ ಮಾಡಲಾಗುತ್ತಿದೆ. ಆದರೆ ಅತಿ ಹೆಚ್ಚು ಹೆರಿಗೆಗಳು ಮಾಡುವುದು ಗುಳೇದಗುಡ್ಡ ಸರಕಾರಿ ಆಸ್ಪತ್ರೆಯಲ್ಲಿ. ಬಾದಾಮಿಯಲ್ಲಿನ ಸರಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಿರುವುದರಿಂದ ಅಲ್ಲಿಯವರು ಸಹ ಇಲ್ಲಿಗೆ ಬರುವಂತಹ ಸ್ಥಿತಿ ಎದುರಾಗಿದೆ. ಈಗ ಇಲ್ಲಿರುವ ವೈದ್ಯರಿಗೂ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಗರ್ಭಿಣಿಯರು ಪರದಾಡುವಂತಾಗಿದೆ.
ವೈದ್ಯರ ನೇಮಕವಾಗಿಲ್ಲ: ಸದ್ಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗರ್ಭಿಣಿಯರು ಪರದಾಡುವಂತಾಗಿದ್ದು, ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರು ಕೂಡಲೇ ತಾತ್ಕಾಲಿಕವಾಗಿ ವೈದ್ಯರನ್ನು ಒದಗಿಸುವಂತೆ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಜೆಪಿ ಮುಖಂಡರು ಸಹ ವೈದ್ಯರ ನೇಮಕಕ್ಕೆ ಆಗ್ರಹಿಸಿದ್ದರು, ಆದರೆ ಇನ್ನೂ ವೈದ್ಯರ ನೇಮಕವಾಗಿಲ್ಲ. ಕೆಲ ಗರ್ಭಿಣಿಯರಿಗೂ ಕೋವಿಡ್ ಕಂಡು ಬಂದಿರುವುದರಿಂದ ಸಿಬ್ಬಂದಿ ಹೆರಿಗೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಡಾ| ನಾಗರಾಜ ಕುರಿ ಇದ್ದರೇ ಹೆರಿಗೆಗೆ ಹೆಚ್ಚು ಗರ್ಭಿಣಿಯರು ಬರುತ್ತಿದ್ದರು. ಈಗ ಅದೇ ವೈದ್ಯರು ಕ್ವಾರೈಂಟೈನಲ್ಲಿರುವುದರಿಂದ ಗರ್ಭಿಣಿಯರು ಸಹ ಸರಕಾರಿ ಆಸ್ಪತ್ರೆಗೆ ಬರಲು ಹಿಂಜರಿಕೆ ಪಡುತ್ತಿದ್ದಾರೆ.