ಮುಂಬಯಿ, ಜೂ. 12: ಜಲ್ಗಾಂವ್ ಸಿವಿಲ್ ಆಸ್ಪತ್ರೆಯಲ್ಲಿ ಕೋವಿಡ್ ವೈರಸ್ ಪೀಡಿತ ರೋಗಿಯೊಬ್ಬರ ನಾಪತ್ತೆ ಪ್ರಕರಣಕ್ಕೆ ಸಲಂಧಿಸಿದಂತೆ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರ ನಿರ್ಲಕ್ಷ್ಯದ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.
ಜೂನ್ 2 ರಂದು ಆಸ್ಪತ್ರೆಯಿಂದ ನಾಪತ್ತೆಯಾದ ನಂತರ 82 ವರ್ಷದ ಕೋವಿಡ್ -19 ರೋಗಿಯ ಶವವನ್ನು ಆಸ್ಪತ್ರೆಯ ಶೌಚಾಲಯದಿಂದ ಪತ್ತೆ ಹಚ್ಚಿದ ಜಲ್ಗಾಂವ್ ಸಿವಿಲ್ ಆಸ್ಪತ್ರೆಯ ಘಟನೆಗೆ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಆಪಾದಿಸಲಾಗುತ್ತಿದೆ.
ಕ್ರಮ ಕೈಗೊಳ್ಳಲಾಗಿದೆ : ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ವೈದ್ಯಕೀಯ ಕಾಲೇಜಿನ ಡೀನ್ ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜಲ್ಗಾಂವ್ ಘಟನೆ ನಿಜ ಎಂದು ನಾನು ಒಪ್ಪಿಕೊಳ್ಳುತ್ತೇನೆ. ನಾವು ಸಿಬಂದಿಗಳ ನಿರ್ಲಕ್ಷ್ಯದ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದೇವೆ. ಆರಂಭಿಕ ವರದಿಯ ಆಧಾರದ ಮೇಲೆ ಆಸ್ಪತ್ರೆಯ ಡೀನ್, ಅಧೀಕ್ಷಕ, ಪ್ರಾಧ್ಯಾಪಕ ಮತ್ತು ಶುಶ್ರೂಷಾ ಸಿಬಂದಿಯನ್ನು ಅಮಾನತುಗೊಳಿಸಿದ್ದೇವೆ. ಮಹಾರಾಷ್ಟ್ರದಲ್ಲಿ ಇನ್ನು ಮುಂದೆ ಅಂತಹ ಯಾವುದೇ ಪ್ರಕರಣಗಳು ನಡೆಯದಂತೆ ನಾವು ಖಚಿತಪಡಿಸುತ್ತೇವೆ ಎಂದು ಟೋಪೆ ಅವರು ಭರವಸೆ ನೀಡಿದ್ದಾರೆ.
ಗಂಭೀರವಾಗಿ ಪರಿಗಣಿಸಿದ್ದೇವೆ : ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಕೂಡ ಜಲ್ಗಾಂವ್ ಘಟನೆಯಲ್ಲಿ ಕಠಿಣ ಕ್ರಮ ಕೈಗೊಂಡಿರುವುದಾಗಿ ಎಂದು ಹೇಳಿದ್ದಾರೆ. ನಾವು ಜಲ್ಗಾಂವ್ ಘಟನೆಯನ್ನು ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕ್ರಿಮಿನಲ್ ಅಪರಾಧಕ್ಕಾಗಿ ಈಗಾಗಲೇ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಮಾನವೀಯ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ದೇಶು¾ಖ್ ತಿಳಿಸಿದ್ದಾರೆ. ಈ ಹಿಂದೆ, ಸಯಾನ್ ಮತ್ತು ಕಾಂದಿವಲಿಯ ಆಸ್ಪತ್ರೆಗಳಿಂದ ಕೋವಿಡ್-17 ರೋಗಿಗಳು ಕಾಣೆಯಾದ ಎರಡು ಪ್ರಕರಣಗಳು ವರದಿಯಾಗಿವೆ. 80 ವರ್ಷದ ರೋಗಿಯೊಬ್ಬರು ಕೋವಿಡ್ -19 ಸೌಲಭ್ಯವನ್ನು ತೊರೆದ ನಂತರ ಕಾಂದಿವಲಿಯ ಶತಾಬ್ದಿ ಆಸ್ಪತ್ರೆಯ ಭದ್ರತ ಸಿಬಂದಿಯನ್ನು ಅಮಾನತುಗೊಳಿಸಲಾಗಿದ್ದು, ನಂತರ ಕೆಲವು ಕಿಲೋಮೀಟರ್ ದೂರದಲ್ಲಿರುವ ರೈಲ್ವೆ ಹಳಿಗಳ ಬಳಿ ರೋಗಿಯ ಶವ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಎರಡು ಘಟನೆಗಳಲ್ಲಿ ರೋಗಿಗಳು ತನ್ನ ಹಾಸಿಗೆಯನ್ನು ತೊರೆದಾಗ ಶೌಚಾಲಯಕ್ಕೆ ಹೋಗಿದ್ದಾರೆ ಎಂದು ಸಿಬಂದಿ ಭಾವಿಸಿದ್ದರು. ಆದರೆ ಇವರು ಆಸ್ಪತ್ರೆಯಿಂದ ಹೊರಟು ಪರಾರಿಯಾಗಿದ್ದರು ಎಂದು ಟೋಪೆ ಹೇಳಿದ್ದಾರೆ. ಇಂತಹ ಘಟನೆಗಳ ಪುನರಾವರ್ತನೆಯು ಹೆಚ್ಚುತ್ತಿರುವ ಕೊರೊನಾ ರೋಗಿಗಳೊಂದಿಗೆ ವ್ಯವಹರಿಸಲು ರಾಜ್ಯದ ಆರೋಗ್ಯ ಯಂತ್ರೋಪಕರಣಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಜ್ಯದಲ್ಲಿ ಪ್ರತಿಪಕ್ಷದಲ್ಲಿರುವ ಭಾರತೀಯ ಜನತಾ ಪಕ್ಷ ನಿರ್ಲಕ್ಷ್ಯಕ್ಕೆ ಮಹಾರಾಷ್ಟ್ರ ಸರಕಾರ ಮತ್ತು ಅದರ ಏಜೆನ್ಸಿಗಳ ವಿರುದ್ಧ ವಾಗ್ಧಾಳಿ ನಡೆಸಿದೆ.