ಕಾರವಾರ: ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 18 ವಾರ್ಡಿನಿಂದ ಸೋಂಕಿತನೊಬ್ಬ ಪರಾರಿಯಾಗಿ ಆತಂಕ ಸೃಷ್ಟಿಸಿದ್ದ. ಸದ್ಯ ಈತ ಕದ್ರಾ ಬಳಿ ಪತ್ತೆಯಾಗಿದ್ದು, ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.
ಧಾರವಾಡ ಮೂಲದ 38 ವರ್ಷದ ವ್ಯಕ್ತಿ, ಕಳ್ಳತನದ ಆರೋಪ ಪರಿಣಾಮ ಶಿರಸಿಯ ಸಬ್ ಜೈಲಿನಲ್ಲಿ ಇಡಲಾಗಿತ್ತು. ಅವನಿಗೆ ಕೊವಿಡ್- 19 ಸೋಂಕಿನ ಲಕ್ಷಣ ಕಾಣಿಸಿತ್ತು. ಆ ಕಾರಣದಿಂದ ಅವನ ಗಂಟಲು ದ್ರವ ಪರೀಕ್ಷಿಸಿದಾಗ ಕೋವಿಡ್- 19 ಸೋಂಕು ದೃಢಪಟ್ಟಿತ್ತು.
ನಿನ್ನೆ ಶಿರಸಿಯ ಸಬ್ ಜೈಲಿನಿಂದ ಕಾರವಾರದ ಕೋವಿಡ್ ವಾರ್ಡಿಗೆ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಸೋಂಕಿತ ವಾರ್ಡ್ ನ ಗಾಜು ಒಡೆದು ಪರಾರಿಯಾಗಿದ್ದ.
ಪರಾರಿಯಾಗುವ ಮುನ್ನ ಈತ ವಾರ್ಡ್ ನಲ್ಲೂ ಎರಡು ಮೊಬೈಲ್ ಕಳವು ಮಾಡಿದ್ದ. ಕೂಡಲೇ ವಿಷಯ ತಿಳಿದ ಪೊಲೀಸರು, ಈತನ ಹುಡುಕಲು ಮುಂದಾದರು. ಕಾರವಾರದ ಕದ್ರಾ ಬಳಿ ಸೋಂಕಿತ ಆರೋಪಿ ಸೆರೆ ಸಿಕ್ಕಿದ್ದು, ಆಸ್ಪತ್ರೆಗೆ ಕರೆತರಲಾಗುತ್ತಿದೆ.
ಉತ್ತರ ಕನ್ನಡ ಪೊಲೀಸರ ಕಾರ್ಯಕ್ಕೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.