ಪಾಟ್ನಾ:ಭಾರತದಲ್ಲಿನ ಕೋವಿಡ್ ಎರಡನೇ ಅಲೆಯ ಭೀಕರತೆ ಸೋಮವಾರ(ಮೇ 10) ಇನ್ನಷ್ಟು ಬಯಲಾಗಿದೆ. ಅದಕ್ಕೆ ಕಾರಣವಾಗಿದ್ದು ಬಿಹಾರದ ಬಕ್ಸಾರ್ ನಲ್ಲಿ ಗಂಗಾನದಿ ತೀರದಲ್ಲಿ ಕೊಳೆತು ನಾರುತ್ತಿರುವ ಡಜನ್ ಗಟ್ಟಲೇ ಶವಗಳು ಪತ್ತೆಯಾಗಿರುವುದು!
ಇದನ್ನೂ ಓದಿ:ಮನೆಯಿಂದ ಹೊರಗೆ ಬರದಂತೆ ಪೋಲಿಸ್ ಅಧಿಕಾರಿಗಳಿಂದ ಕೈಮುಗಿದು ಮನವಿ
ಉತ್ತರಪ್ರದೇಶದ ಗಡಿಭಾಗದ ಬಿಹಾರದ ಚೌಸಾ ಪಟ್ಟಣದಲ್ಲಿರುವ ಗಂಗಾನದಿ ತೀರದಲ್ಲಿ ಕೊಳೆತು ನಾರುತ್ತಿರುವ ಹಲವಾರು ಶವಗಳು ತೇಲುತ್ತಿರುವುದು ವಿಡಿಯೋ ಮತ್ತು ಫೋಟೋಗಳಲ್ಲಿ ಸೆರೆಯಾಗಿದೆ.
ಇಂದು ಬೆಳಗ್ಗೆ ಜನರು ಈ ಗಂಗಾನದಿ ತೀರದತ್ತ ಹೆಜ್ಜೆ ಹಾಕಿದ ಸಂದರ್ಭದಲ್ಲಿ ಸುಮಾರು 40ಕ್ಕೂ ಅಧಿಕ ಶವಗಳು ತೇಲುತ್ತಾ ಬರುತ್ತಿರುವ ದೃಶ್ಯ ಕಂಡುಬಂದಿತ್ತು. ಈ ಶವಗಳು ಉತ್ತರಪ್ರದೇಶದಿಂದ ತೇಲುತ್ತಾ ಬಂದಿರುವುದಾಗಿ ಸ್ಥಳೀಯ ಅಧಿಕಾರಿಗಳು ಶಂಕಿಸಿದ್ದಾರೆ.
ಅಲ್ಲದೇ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದ ರೋಗಿಗಳ ಶವ ಸಂಸ್ಕಾರ ನಡೆಸಲು ಶವಾಗಾರ ಅಥವಾ ಹೂಳಲು ಸ್ಥಳ ಸಿಗದ ಪರಿಣಾಮ ಈ ಕೃತ್ಯ ಎಸಗಲು ಕಾರಣವಾಗಿರಬಹುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಾಜು 40ರಿಂದ 45 ಶವಗಳು ತೇಲುತ್ತಿರುವುದು ಕಂಡುಬಂದಿತ್ತು ಎಂದು ಚೌಸಾ ಜಿಲ್ಲೆಯ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದು, ಇದರಿಂದ ಮಹಾದೇವ ಘಾಟ್ ಪ್ರದೇಶ ತೀವ್ರ ಭಯಾನಕ ಹುಟ್ಟಿಸುವಂತಿತ್ತು. ಈ ಶವಗಳನ್ನು ನದಿಗೆ ಎಸೆದಂತೆ ಕಾಣಿಸುತ್ತಿದೆ. ಕೆಲವರು ಅಂದಾಜು ನೂರು ಶವಗಳು ಇದ್ದಿರುವುದಾಗಿ ಹೇಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.