Advertisement

ಇನ್ನೂ 74 ಲಕ್ಷ ರೂ. ರೋಗಿಗಳಿಗೆ ಹಿಂದಿರುಗಿಸದ ಆಸ್ಪತ್ರೆಗಳು

12:56 PM Jun 27, 2021 | Team Udayavani |

ಥಾಣೆ: ನಗರಸಭೆಯ ಲೆಕ್ಕಪರಿಶೋಧನಾ ಇಲಾಖೆಯು ಕಳೆದ ವರ್ಷ ನಡೆಸಿದ ತನಿಖೆಯಲ್ಲಿ ನಗರದ ಖಾಸಗಿ ಕೊರೊನಾ ಆಸ್ಪತ್ರೆಗಳು ರೋಗಿಗಳಿಂದ ಅತಿಯಾದ ಶುಲ್ಕ ಪಡೆಯುತ್ತಿವೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ 1,62,73,583 ಹೆಚ್ಚುವರಿ ಶುಲ್ಕ ವಿಧಿಸಿದ್ದು, ಈ ಪೈಕಿ ಕೇವಲ 87,73,958 ರೂ. ಗಳನ್ನು ಮಾತ್ರ ರೋಗಿಗಳಿಗೆ ಮರುಪಾವತಿಸಲಾಗಿದೆ. ಉಳಿದ 74,99,625 ರೂ. ಗಳನ್ನು ಇನ್ನೂ ರೋಗಿಗಳಿಗೆ ನೀಡಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ಇದು ಪುರಸಭೆಯ ಕೊರೊನಾ ನಿರ್ವಹಣೆ ಜವಾಬ್ದಾರಿಯ ಕುರಿತು ಮತ್ತೆ ಪ್ರಶ್ನೆಗಳನ್ನು ಸೃಷ್ಟಿಸಿದೆ.

Advertisement

ಕೊರೊನಾದ ಮೊದಲ ಅಲೆ ಸಂದರ್ಭ ರೋಗಿಗಳ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಸೌಲಭ್ಯಗಳು ಇರಲಿಲ್ಲ. ಈ ಹಿನ್ನೆಲೆ ಕೆಲವರು ಪ್ರಾಣ ಕಳೆದುಕೊಂಡರು. ಇದನ್ನು ತಪ್ಪಿಸಲು ಪುರಸಭೆ ಆಡಳಿತವು ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಆಸ್ಪತ್ರೆಗಳಾಗಿ ಗುರುತಿಸಿತ್ತು. ಕೊರೊನಾ ರೋಗಿಗಳಿಗೆ ತತ್‌ಕ್ಷಣ ಚಿಕಿತ್ಸೆ ನೀಡುವ ಉದ್ದೇಶದಿಂದ ನಗರಸಭೆ ಈ ನಿರ್ಧಾರ ಕೈಗೊಂಡಿತ್ತು. ಬಳಿಕ ಈ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸುವ ಮೂಲಕ ರೋಗಿಗಳನ್ನು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿಬಂದಿದ್ದವು.

ಇದರ ತನಿಖೆಗೆ ಲೆಕ್ಕಪರಿಶೋಧಕರ ವಿಶೇಷ ತಂಡವನ್ನು ರಚಿಸಲಾಯಿತು. ತಂಡದ ತನಿಖೆಯಲ್ಲಿ ಹಲವಾರು ಆಸ್ಪತ್ರೆಗಳು ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿವೆ ಎಂದು ತಿಳಿದುಬಂದ ಬಳಿಕ ಎಲ್ಲ ಆಸ್ಪತ್ರೆಗಳಿಗೆ ನೋಟಿಸ್‌ ನೀಡುವಂತೆ ಥಾಣೆ ಮಹಾನಗರ ಪಾಲಿಕೆಯ ಆಯುಕ್ತ ವಿಪಿನ್‌ ಶರ್ಮಾ ಅವರು ಆದೇಶಿಸಿದ್ದರು.

ಆಸ್ಪತ್ರೆಗಳು ಪಡೆದ ಹೆಚ್ಚುವರಿ ಮೊತ್ತವನ್ನು ಸಂಬಂಧಪಟ್ಟ ರೋಗಿಯ ಖಾತೆಗೆ ಹಿಂದಿರುಗಿಸಲು ಅವರು ಆದೇಶಿಸಿದ್ದರು. ಒಂದು ವರ್ಷದ ಬಳಿಕವೂ 74,99,625 ರೂ. ಗಳನ್ನು ರೋಗಿಗಳಿಗೇ ಮೊತ್ತವನ್ನು ಹಿಂದಿರುಗಿಸಲಾಗಿಲ್ಲ. ಈ ಮೊತ್ತದ ಮರುಪಾವತಿಯನ್ನು ರೋಗಿಗಳು ಕೂಡಲೇ ಪಡೆಯಬೇಕು ಎಂದು ಶಾಸಕ ಸಂಜಯ್‌ ಕೇಲ್ಕರ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next