ಮಂಗಳೂರು/ಉಡುಪಿ: ಲಾಕ್‌ಡೌನ್ ಮಾದರಿಯ ಕರ್ಫ್ಯೂನಲ್ಲಿ ಸರಕಾರ ಶನಿವಾರ ಹೊರಡಿಸಿದ್ದ ಪರಿಷ್ಕೃತ ಅದೇಶದಲ್ಲಿ ವ್ಯವಹಾರ ಅವಧಿ ಮಿತಿಯನ್ನು ವಿಸ್ತರಿಸುವುದರಿಂದ ಉಭಯ ಜಿಲ್ಲೆಗಳಲ್ಲಿ ರವಿವಾರ ಅಗತ್ಯ ಹಾಗೂ ಅನುಮತಿ ನೀಡಿದ ಸೇವೆಗಳ ವ್ಯವಹಾರಗಳು ಮಧ್ಯಾಹ್ನ 12 ಗಂಟೆಯವರೆಗೆ ಮುಂದುವರಿದಿತ್ತು. ಆದರೆ ಪರಿಷ್ಕೃತ ಆದೇಶದ ಬಗ್ಗೆ ಕೆಲವು ಅಧಿಕಾರಿಗಳು ಮಾಹಿತಿ ಹೊಂದಿರದಿದ್ದ ಪರಿಣಾಮ ಕೆಲವೆಡೆ ಗೊಂದಲದ ಪರಿಸ್ಥಿತಿ ಕಂಡುಬಂದಿತ್ತು.
ಪರಿಷ್ಕೃತ ಆದೇಶದಂತೆ ದಿನಸಿ ಅಂಗಡಿಗಳು ಮಧ್ಯಾಹ್ನ 12 ರವರೆಗೆ ತೆರೆದಿದ್ದವು. ಆದರೆ 10 ಗಂಟೆಯ ಬಳಿಕ ಅಂಗಡಿಗಳನ್ನು ಮುಚ್ಚುವಂತೆ ಮೊಬೈಲ್ ಸಂಚಾರಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದು ವ್ಯಾಪಾರಿಗಳು ಹಾಗೂ ತಳ್ಳುಗಾಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದವರಿಗೆ ಗೊಂದಲ ನಿರ್ಮಿಸಿತು. ಉಳಿದಂತೆ ಎಲ್ಲಾ ವಾಣಿಜ್ಯ ವ್ಯವಹಾರ ಹಾಗೂ ಚಟುವಟಿಕೆಗಳು ಸ್ಥಗಿತಗೊಂಡಿತ್ತು. ರವಿವಾರ ಬೆಳಗ್ಗೆಯಿಂದಲೇ ನಗರದಲ್ಲಿ ವಾಹನ ಸಂಚಾರ ಹೆಚ್ಚಿತ್ತು.
ಬೈಕ್, ಕಾರು, ಸ್ಕೂಟರ್, ಆಟೋ ರಿಕ್ಷಾ ಸೇರಿದಂತೆ ಬಹುತೇಕ ವಾಹನಗಳು ರಸ್ತೆಗಳಿದಿತ್ತು. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆಯಿಂದಲೇ ಜನದಟ್ಟನೆ ಕಂಡಬಂದಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ಜನಸಂಚಾರ ಹಾಗೂ ವಾಹನ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿತ್ತು. ಮಧ್ಯಾಹ್ನದ ಬಳಿಕ ಜನಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ತಳ್ಳುಗಾಡಿಯಲ್ಲಿ ಸಿಯಾಳ, ತರಕಾರಿ ವ್ಯಾಪಾರಕ್ಕೆ ಅವಕಾಶವಿದ್ದರೂ ಹೆಚ್ಚಿನ ವ್ಯಾಪಾರವಿರಲಿಲ್ಲ.
ಉಡುಪಿ: ಉತ್ತಮ ಸ್ಪಂದನೆ
ಉಡುಪಿ: ನಗರದಲ್ಲಿ ರವಿವಾರ ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಆದರೆ ಪರಿಷ್ಕೃತ ಆದೇಶದ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಯಿತು.
ಸರಕಾರದ ಆದೇಶದ ಬಗ್ಗೆ ಅಧಿಕಾರಿಗಳಿಗೂ ಸೂಕ್ತ ಮಾಹಿತಿ ಇಲ್ಲದ ಕಾರಣ ರವಿವಾರ ಅಂಗಡಿಗಳನ್ನು ಬಂದ್ ಮಾಡಿಸಲಾಯಿತು. .
ಸಂತೆಕಟ್ಟೆಯಲ್ಲಿ ಸಂತೆ :
ರವಿವಾರ ಆದ್ದರಿಂದ ವಾಹನಗಳ ಓಡಾಟ ಕ್ಷೀಣವಾಗಿತ್ತು. ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಿದರು. ಸಂತೆಕಟ್ಟೆಯಲ್ಲಿ ಸಂತೆ ಮಾರುಕಟ್ಟೆಯೂ ನಡೆಯಿತು. ಬಳಿಕ ಅಧಿಕಾರಿಗಳು ದಂಡ ಹಾಕಿದ ಬಳಿಕ ತೆರವು ಗೊಳಿಸಲಾಯಿತು.