Advertisement

ಕೋವಿಡ್ ನಿರ್ವಹಣೆ: ಸಚಿವರ ಮೇಲಿದೆ ಹೆಚ್ಚಿನ ಹೊಣೆ

08:26 PM Aug 08, 2021 | Team Udayavani |

ಕೊರೊನಾ ಎರಡನೆಯ ಅಲೆಯಿಂದ ಮೂರನೆಯ ಅಲೆಯತ್ತ ತಿರುವು ಪಡೆಯುತ್ತಿರುವ ಕಾಲ ಘಟ್ಟದಲ್ಲಿ ನೂತನ  ಜಿಲ್ಲಾ ಉಸ್ತುವಾರಿ ಸಚಿವರು ನೇಮಕಗೊಳ್ಳಲಿದ್ದಾರೆ. ಪ್ರಸ್ತುತ ಕೊರೊನಾ ಮತ್ತು ಪ್ರಾಕೃತಿಕ ವಿಕೋಪ ನಿಭಾವಣೆ ಕುರಿತು ಗಮನ ಹರಿಸಿ ಎಂದಷ್ಟೇ ಮುಖ್ಯಮಂತ್ರಿಗಳು ನೂತನ ಸಚಿವ ವಿ. ಸುನಿಲ್‌ ಕುಮಾರ್‌ ಅವರಿಗೆ ಸೂಚಿಸಿರುವುದರಿಂದ ಇದರ ಜವಾಬ್ದಾರಿಯಂತೂ ಇವರ ಹೆಗಲ ಮೇಲೇರಿದೆ.

Advertisement

ಇದುವರೆಗೆ ರೋಗಲಕ್ಷಣಗಳಿರದ ಕೊರೊನಾ ಸೋಂಕಿತರಿಗೆ ಹೋಮ್‌ ಕ್ವಾರಂಟೈನ್‌ ವಿಧಿಸಲಾಗುತ್ತಿತ್ತು. ಇದರಿಂದ ಸೋಂಕಿನ ಪ್ರಸರಣ ಹೆಚ್ಚಿಗೆಯಾಗಲಿದೆ ಎಂಬ ಕಾರಣಕ್ಕಾಗಿ ಗಂಭೀರವಲ್ಲದ ಸೋಂಕಿತರಿಗೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಕೊಡಲು ಜಿಲ್ಲಾಡಳಿತ ನಿರ್ಣಯ ತಳೆದಿದೆ. ವಸ್ತುತಃ ಬಸವರಾಜ ಬೊಮ್ಮಾಯಿಯವರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿಯೇ  ಸೋಂಕಿತರಿಗೆ ಹೋಮ್‌ ಕ್ವಾರಂಟೈನ್‌ ಸಲ್ಲದು, ಕೇರ್‌ ಸೆಂಟರ್‌ಗೆ ದಾಖಲಿಸಿ ಎಂದು ನಿರ್ದೇಶನ ನೀಡಿದ್ದರು. ಆದರೆ ಇದು ಪಾಲನೆಯಾಗಿಲ್ಲ ಎನ್ನುವುದಕ್ಕೆ  1,408 ಸೋಂಕಿತರಲ್ಲಿ 12 ಮಂದಿ ಮಾತ್ರ ಕೇರ್‌ ಸೆಂಟರ್‌ಗಳಲ್ಲಿ, 139 ಮಂದಿ ಆಸ್ಪತ್ರೆಗಳಲ್ಲಿ, 1,257 ಮಂದಿ ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆಂದು ಶನಿವಾರವಷ್ಟೇ ಸುನೀಲ್‌ ಕುಮಾರ್‌ ಹೇಳಿರುವುದು ಸಾಕ್ಷಿ.

ಇದೇ ವೇಳೆ ಸಾಕಷ್ಟು ಬೆಡ್‌ಗಳನ್ನು ಕೇರ್‌ ಸೆಂಟರ್‌ಗಳಲ್ಲಿ ಸೃಜಿಸಬೇಕಾಗಿದೆ. ಜನರಲ್ಲಿ ಜಾಗೃತಿ ಮೂಡಿದಾಗಲೇ ಇಂತಹ ನಿರ್ಣಯಗಳು ಸಮಾಧಾನಕರ ರೀತಿಯಲ್ಲಿ ಅನುಷ್ಠಾನಕ್ಕೆ ಬರುವುದು ಸಾಧ್ಯ.  ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾದಾಗ ಜನರ ಆರೋಗ್ಯದ ಬಹುತೇಕ ಜವಾಬ್ದಾರಿ ತಂತಾನೆ ಸೆಂಟರ್‌ನ  ವೈದ್ಯ ಸಮುದಾಯಕ್ಕೆ ವರ್ಗಾವಣೆಯಾಗುತ್ತದೆ. ಇದು ಜಿಲ್ಲಾಡಳಿತಕ್ಕೂ, ಸಾರ್ವಜನಿಕರಿಗೂ ಸಾಕಷ್ಟು ತಲೆ ನೋವನ್ನು ಕಡಿಮೆ ಮಾಡುತ್ತದೆ. ಜತೆಜತೆಗೆ ಕೇರ್‌ ಸೆಂಟರ್‌ಗಳಲ್ಲಿ ಗುಣಮಟ್ಟದ ಸೇವೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಎಂದಿನಂತೆ “ಸರಕಾರಿ ನಿರ್ಲಕ್ಷ್ಯ’ ಕಂಡುಬಂದರೆ ಇದು ಕೇರ್‌ ಸೆಂಟರ್‌ಗೆದಾಖಲಾಗಲಾಗದಿರಲು ಕಾರಣವಾಗುತ್ತದೆ. ಇದೊಂದು ರೀತಿ ರಚನಾತ್ಮಕ ಕಾರ್ಯ, ಕೇವಲ ಸರಕಾರಿ ಆದೇಶದಿಂದ ಪರಿಪೂರ್ಣವಾಗಿ ಜಾರಿಗೊಳ್ಳುವಂಥದ್ದಲ್ಲ.

ಮೂರನೆಯ ಅಲೆ ಎದುರಿಸಲು ಆರೋಗ್ಯ ಸಂಸ್ಥೆಗಳ ಸಬಲೀಕರಣವೂ ಅಗತ್ಯವಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಉಡುಪಿ ಜಿಲ್ಲಾಸ್ಪತ್ರೆ, ಕುಂದಾಪುರ- ಕಾರ್ಕಳ ತಾಲೂಕು ಆಸ್ಪತ್ರೆಗಳಲ್ಲಿ 50 ಮಕ್ಕಳ ನಿಗಾವಣೆಗೆ ಐಸಿಯು ಬೆಡ್‌ಸಿದ್ಧಪಡಿಸಬೇಕಾಗಿದೆ. 2ನೇ ಅಲೆಯ ಕಾಲದಲ್ಲಿ ಉಂಟಾದ ಆಮ್ಲಜನಕ ಪೂರೈಕೆ ಸಮಸ್ಯೆ ಬಗೆಹರಿಸಲು ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನ ಘಟಕಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತಿದೆ. ಹೆಬ್ರಿಯಲ್ಲಿ ಆರಂಭಗೊಂಡಿದ್ದು ಉಳಿದ ಆಸ್ಪತ್ರೆಗಳಲ್ಲಿ  ಶೀಘ್ರದಲ್ಲಿ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕಾಗಿದೆ.

ಮುಖ್ಯವಾಗಿ ಆಗಬೇಕಾಗಿರುವುದು ವ್ಯಾಕ್ಸಿನ್‌ಗಳ ಪೂರೈಕೆಯಾಗುವಂತೆ ನೋಡಿ ಕೊಳ್ಳುವ ಜವಾಬ್ದಾರಿ. ಈಗಾಗಲೇ ಜಿಲ್ಲೆಯಲ್ಲಿ 34,000 ಜನರು 2ನೇ ಡೋಸ್‌ ಲಸಿಕೆ ಪಡೆಯಲು ಕಾಯುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ಬಹುತೇಕರಿಗೆ ಎರಡು ಲಸಿಕೆಗಳನ್ನು ವಿತರಿಸಿದರೆ ಮಾತ್ರ ಸೋಂಕಿಗೆ ಪರಿಣಾಮಕಾರಿ ತಡೆ ಒಡ್ಡಬಹುದು. ಈ ಕುರಿತು ಸಚಿವರು ತತ್‌ಕ್ಷಣ ಕಾರ್ಯೋನ್ಮುಖರಾಗಬೇಕಾಗಿದೆ.

Advertisement

-ಸಂ.

Advertisement

Udayavani is now on Telegram. Click here to join our channel and stay updated with the latest news.

Next