ಶಿವಮೊಗ್ಗ: ಕೋವಿಡ್-19 ಸೋಂಕು ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾದ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮಾತ್ರ ಸೋಂಕು ನಿರ್ವಹಣೆಯಲ್ಲಿ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಶುಕ್ರವಾರ ರಾತ್ರಿ ಮರಣ ಹೊಂದಿದ್ದ ಸೋಂಕಿತನ ಶವವನ್ನು ಅರ್ಧಂಬರ್ಧ ಸುಟ್ಟು ಹೋಗಿದ್ದ ಪಾಲಿಕೆ ಅಧಿಕಾರಿಗಳು, ಈ ವೇಳೆ ಧರಿಸಿದ್ದ ಪಿಪಿಇ ಕಿಟ್ ಅನ್ನು ರಸ್ತೆ ಬದಿ ಬಿಸಾಕಿ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.
ಶುಕ್ರವಾರ ರಾತ್ರಿ ರೋಟರಿ ಶವಾಗಾರದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೃದ್ಧನನ್ನು ಪಾಲಿಕೆ ಅಧಿಕಾರಿಗಳ ಚಿತಗಾರದಲ್ಲಿ ಅರ್ಧಂಬರ್ಧ ಸುಟ್ಟು ಬಂದಿದ್ದರು. ಶವವನ್ನು ನಾಯಿಗಳು ಎಳೆದಾಡುತ್ತಿರುವುದನ್ನು ಕಂಡ ಜನ ಗಲಾಟೆ ಆರಂಭಿಸಿದ ಮೇಲೆ ಮತ್ತೆ ರಾತ್ರಿ ಎರಡು ಗಂಟೆಗೆ ಅಧಿಕಾರಿಗಳು ಶವವನ್ನು ಸಂಪೂರ್ಣವಾಗಿ ಸುಟ್ಟು ಬಂದಿದ್ದರು.
ಆದರೆ ಈ ವೇಳೆ ಪಾಲಿಕೆ ಅಧಿಕಾರಿಗಳು ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಶವ ಸಂಸ್ಕಾರದ ವೇಳೆ ಧರಿಸಿದ್ದ ಪಿಪಿಇ ಕಿಟ್ ಗಳನ್ನು ರೋಟರಿ ಚಿತಾಗಾರದ ಎದುರಿನ ರಸ್ತೆ ಪಕ್ಕದಲ್ಲೇ ಬೀಸಾಡಿ ಹೋಗಿದ್ದಾರೆ.
ಪಿಪಿಇ ಕಿಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದಿರುವ ಮಹಾನಗರ ಪಾಲಿಕೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ ರಾಜೀವ್ ಗಾಂಧಿ ಬಡಾವಣೆ ಜನರು ಬಿ.ಎಚ್.ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಿಪಿಇ ಕಿಟ್ ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲದ ಮಹಾನಗರ ಪಾಲಿಕೆ ಅಧಿಕಾರಿಗಳು ಅದು ಹೇಗೆ ಜನರಿಗೆ ಕೋವಿಡ್ 19 ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಾರೆ ಎಂಬ ಪ್ರಶ್ನೆ ಜನರಿಗೆ ಕಾಡುತ್ತಿದೆ. ಇಂತಹ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.