Advertisement

ಕೋವಿಡ್ ಮುಗಿದಿಲ್ಲ: ಕಾಳಜಿ ಇರಲಿ

05:34 PM Nov 27, 2020 | Adarsha |

ಹೊನ್ನಾವರ: ಜಿಲ್ಲೆಯಲ್ಲಿ ನಿನ್ನೆ 37 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು 13700 ಜನ ಈವರೆಗೆ ಸೋಂಕಿಗೆ ತುತ್ತಾಗಿದ್ದು 177 ಜನ ಬಲಿಯಾಗಿದ್ದಾರೆ. 13306 ಜನ ಗುಣಮುಖರಾಗಿದ್ದು 217 ಸೋಂಕಿನ ಸಕ್ರೀಯ ಪ್ರಕರಣಗಳು ವರದಿಯಾಗಿದ್ದು 76 ಮಂದಿಕೋವಿಡ್‌ ಆಸ್ಪತ್ರೆಯಲ್ಲಿ 141 ಜನ ಹೋಂ  ಐಸೋಲೇಶನ್‌ನಲ್ಲಿ ಇದ್ದಾರೆ. ಜನ ಮುಕ್ತವಾಗಿ ಓಡಾಡುತ್ತಿದ್ದು ಮದುವೆಗಳು ಭರ್ಜರಿಯಾಗಿ ನಡೆದಿವೆ.

Advertisement

ದೇವಾಲಯಗಳು ತಮ್ಮ ಉತ್ಸವಗಳನ್ನು ರದ್ದುಪಡಿಸಿದ್ದು ಆದಾಯ ಕಳೆದುಕೊಂಡದ್ದಲ್ಲದೇ ಈ ಉತ್ಸವಗಳನ್ನೇ ನಂಬಿಕೊಂಡಿದ್ದ ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಪುನಃ ಕಷ್ಟಕ್ಕೆ ಸಿಲುಕಿದೆ. ಎಲ್ಲರಿಗೂ ಕಾಳಜಿ ಬರದಿದ್ದರೆ ಕೊರೊನಾ ಲಸಿಕೆ ಬರುವವರೆಗೆ ನಿಯಂತ್ರಣದಲ್ಲಿ ಇರುವುದು ಕಷ್ಟ.

ಇದನ್ನೂ ಓದಿ:ನಮ್ಮ ಸರಕಾರ ಮಹಾರಾಷ್ಟ್ರದ ಜನತೆಯ ಆಶೀರ್ವಾದದ ಫ‌ಲ! ಇಡಿ, ಸಿಬಿಐನಿಂದ ಬೆದರಿಸಲಾಗದು: ಉದ್ಧವ್‌

ಸಂತ ಝೇವಿಯರ್‌ ಅಂಗಾಂಶಗಳುಳ್ಳ ಚಂದಾವರ ಚರ್ಚ್‌ನ ಹಬ್ಬಕ್ಕೆ ಜಿಲ್ಲೆಯ ವಿವಿಧ ಭಾಗ ಮತ್ತು ಗೋವಾದಿಂದ ಎಲ್ಲ ಧರ್ಮಿಯರು ಬರುತ್ತಿದ್ದರು. ಈ ಹಬ್ಬದಲ್ಲಿ ವಿಶೇಷವಾಗಿ ಮಾರಾಟವಾಗುತ್ತಿದ್ದ ಗಡ್ಡೆಗೆಣಸುಗಳು, ಮಲಬಾರ ಬೇಕರಿ ಬಿಸ್ಕೆಟ್‌, ನೂರಾರು ರೈತರ ಸಣ್ಣ ವ್ಯಾಪಾರಿಗಳ ಪಾಲಿಗೆ, ಟೆಂಪೋ ಮೊದಲಾದ ವಾಹನ ಚಾಲಕರಿಗೆ ಮೂರು ತಿಂಗಳ ಅನ್ನ ಗಿಟ್ಟುತ್ತಿತ್ತು.

ಬೆಳಗ್ಗಿನಿಂದ ಸಂಜೆ ತನಕ 50-70 ಸಾವಿರ ಜನ ಇಲ್ಲಿ ಬಂದು ಮೊಂಬತ್ತಿ ಉರಿಸುತ್ತಿದ್ದರು. ಈ ಬಾರಿ ಎಲ್ಲವೂ ರದ್ದಾಗಿದೆ. ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕ ಚಂಪಾ ಷಷ್ಠಿಗೆ ಬೆಳಗಿನಿಂದ ಸಂಜೆತನಕ ಸುಮಾರು ಲಕ್ಷ ಜನ ಬರುತ್ತಿದ್ದರು. ಯಕ್ಷಗಾನ ಮೊದಲಾದವು ಇರುತ್ತಿದ್ದವು, ನೂರಾರು ಮಿಠಾಯಿ ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದವು. ವರ್ಷಕ್ಕೊಮ್ಮೆ ನಡೆಯುವ ಜಿಲ್ಲೆಯ ಏಕೈಕ ಧನ್ವಂತರಿ ದೇವಸ್ಥಾನ ಯಲಗುಪ್ಪಾದಲ್ಲಿ ಧನ್ವಂತರಿ ಉತ್ಸವ, ಹೋಮ ಮೊದಲಾದ 4 ದಿನದ ಕಾರ್ಯಕ್ರಮ ರದ್ದಾಗಿದೆ. ರಾಜ್ಯದ ನಾನಾ ಭಾಗದಿಂದ ಜನ ಬಂದು ಹೋಗುತ್ತಿದ್ದರು.

Advertisement

ಹೀಗೆ ನವೆಂಬರ್‌, ಡಿಸೆಂಬರ್‌ನಲ್ಲಿ ಜಿಲ್ಲೆಯಾದ್ಯಂತ ನಡೆಯುವ ದೇವತಾ ಕಾರ್ಯಗಳು ರದ್ದಾಗಿವೆ. ದೇವಾಲಯದ ಆದಾಯ ಖೋತಾ ಆಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್‌ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಕಂಡುಬಂದ ಕಾರಣ ಹಾಜರಾತಿ ಕಡಿಮೆ ಇದೆ. ಆದರೆ ನೂರು ಜನರಿಗೆ ಪರವಾನಗಿ ಪಡೆದ ಮದುವೆಗಳಿಗೆ 500-1000 ಜನರನ್ನು ಆಮಂತ್ರಿಸುತ್ತಾರೆ. ಕಟ್ಟುನಿಟ್ಟಾಗಿ ಯಾವುದೇ ಕ್ರಮಕೈಗೊಳ್ಳದ ಕಾರಣ ಡಿಸೆಂಬರ್‌ ತಿಂಗಳಲ್ಲಿ ಎಲ್ಲ ಕಲ್ಯಾಣ ಮಂಟಪಗಳು ಬುಕ್‌ ಆಗಿವೆ. 100 ಜನರನ್ನು ಕರೆದು ಮನೆಯಲ್ಲಿ ಮದುವೆ ಮಾಡಿದರೆ ಹಣವೂ ಉಳಿತಾಯವಾಗುತ್ತಿತ್ತು.

ಸುರಕ್ಷಿತವಾಗಿತ್ತು. ಹೆಚ್ಚಿನವರು 50ಸಾವಿರ ವೆಚ್ಚ ಬರುವ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಮದುವೆ ನೆರವೇರಿಸುತ್ತಿದ್ದಾರೆ. ಸಂತೆಗಳು ಆರಂಭವಾಗಿವೆ, ಪೇಟೆಗಳಿಗೆ ಜನ ತುಳಸಿ ಹಬ್ಬ, ಹುಣ್ಣಿಮೆಯೆಂದು ಖರೀದಿಗೆ ಬಂದು ತುಂಬಿಕೊಳ್ಳುತ್ತಿದ್ದಾರೆ, ಮಾಸ್ಕ್ ಕುತ್ತಿಗೆಯಿಂದ ಕಿಸೆಗೆ ಸೇರಿದೆ. ಚಳಿಗಾಲ ಬೇರೆ, ಮತ್ತೆ ಕೋವಿಡ್‌ ಚಿಗುರದಿದ್ದರೆ ಸಾಕು. ಸಾಮೂಹಿಕ ಜವಾಬ್ದಾರಿ ಅರಿವಿಲ್ಲದ ಜನರಿಂದ ಕೊರೊನಾ ಚಿರಂಜೀವಿಯಾಗುವ ಲಕ್ಷಣ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next