Advertisement

ಮೋದಿ, ಶಾ ಅವರಿಂದ ಕೋವಿಡ್ ಸೋಂಕು ಹೆಚ್ಚು ಹರಡುತ್ತಿದೆ: ಖರ್ಗೆ ಆರೋಪ

08:29 PM Jul 02, 2020 | Sriram |

ಬೆಂಗಳೂರು : ದೇಶದಲ್ಲಿ ಆರ್ಥಿಕತೆ ಕುಸಿಯಲು ಮತ್ತು ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಅವರ ನೀತಿಯೇ ಕಾರಣ ಎಂದು ರಾಜ್ಯಸಭಾಸದಸ್ಯ ಮಲ್ಲಿಕಾರ್ಜುನ ಖರ್ಗೆ ವಾಗ್ಧಾಳಿ ನಡೆಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹತ್ತಿಕ್ಕುವರೆಗೂ ಹಾಗೂ ಮೋದಿ ಮತ್ತು ಅಮಿತ್‌ ಶಾ ಅವರನ್ನು ಬಗ್ಗುಬಡಿಯುವವರೆಗೂ ದೇಶಕ್ಕೆ ಹಾಗೂ ದೇಶದ ಯುವಜನತೆಗೆ ಭವಿಷ್ಯವಿಲ್ಲ. ಮೋದಿ ಮತ್ತು ಅಮಿತ್‌ ಶಾ ದ್ವೇಷ ಹಾಗೂ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ. ತಾವು ಮಾಡಿದ ತಪ್ಪನ್ನೂ ಒಪ್ಪಿಕೊಳ್ಳುತ್ತಿಲ್ಲ ಮತ್ತು ವಿರೋಧ ಪಕ್ಷದವರ ಮಾತನ್ನೂ ಕೇಳುವುದಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ಪಕ್ಷವು ನಂಬಿಕೊಂಡು ಬಂದ ತತ್ವ ಮತ್ತು ನೀತಿಯಂತೆ ನಡೆಯುತ್ತಿದೆ ಮತ್ತು ನಡೆದುಕೊಂಡು ಹೋಗಬೇಕು. ಪಕ್ಷದ ತತ್ವ, ಸಿದ್ಧಾಂತಕ್ಕೆ ಎಂದಿಗೂ ದಕ್ಕೆಯಾಗದಂತೆ ನೋಡಿಕೊಳ್ಳಬೇಕು. ಮೋದಿ ಮತ್ತು ಅಮಿತ್‌ ಶಾ ಸೇರಿಕೊಂಡು ದೇಶವನ್ನು ಹಾಳು ಮಾಡುವ ದೃಷ್ಟಿಯಿಂದ ಕೆಲವು ಕೆಟ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.

ದೇಶಾದ್ಯಂತ ಸಣ್ಣ ಕೈಗಾರಿಕೆಗಳ ಮೇಲೆ ತೀವ್ರವಾದ ಹೊಡೆತ ಬಿದ್ದಿದ್ದು, ನಿರುದ್ಯೋಗ ಹೆಚ್ಚಳವಾಗುತ್ತಿದೆ. ಮೋದಿ ಏನೇ ಮಾಡಿದರೂ ದೇಶದ ಯುವ ಜನತೆ ಚಪ್ಪಾಳೆ ಹೊಡೆಯುತ್ತಾರೆ. ಮೋದಿ, ಶಾ ಅವರು ಮಾಡುತ್ತಿದ್ದ ಕೆಟ್ಟ ಕೆಲಸವನ್ನು ತಡೆಯಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆಕೊಟ್ಟರು.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಫೌಂಡೇಷನ್‌ಗೆ ಚೀನಾದಿಂದ ಬಂದಿದ್ದ 1.40 ಕೋಟಿ ರೂ.ಗಳನ್ನೇ ಅತ್ಯಂತ ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಲು ದಾನ ಪಡೆಯುವುದಲ್ಲಿ ತಪ್ಪೇನಿದೆ. ಹಾಗಾದರೇ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಪಿಎಂ ಕೇರ್ ಟ್ರಸ್ಟ್‌ ಸಂವಿಧಾನದಲ್ಲಿ ಬರೆದಿದೆಯೇ? ಅದಕ್ಕೆ ಬಂದಿರುವ ಹಣದ ಲೆಕ್ಕ ನೀಡಿದ್ದಾರೇ? ಆರ್‌ಟಿಐನಲ್ಲಿ ಅರ್ಜಿ ಹಾಕಿದರು ಮಾಹಿತಿ ಏಕೆ ನೀಡುತ್ತಿಲ್ಲ. ಪಿಎಂ ಕೇರ್‌ಗೆ ಚೀನಾದ ಹುವಾಯ್ಯಿ, 1ಪ್ಲಸ್‌, ಟಿಕ್‌ಟಾಕ್‌, ಪೇಟಿಎಂ ಮೊದಲಾದ ಸಂಸ್ಥೆಗಳಿಂದ 130ಕೋಟಿಗೂ ಅಧಿನ ಹಣ ಬಂದಿದೆ ಎಂದು ವಿವರ ನೀಡಿದರು.

Advertisement

ಕೇಂದ್ರ ಸರ್ಕಾರ ಈ ಧೋರಣೆಯ ವಿರುದ್ಧ ಹೋರಾಟ ಮಾಡಲೇ ಬೇಕು. ರಾಜೀವ್‌ ಗಾಂಧಿ, ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ವಿರುದ್ಧ ಟೀಕೆ ಬಂದ ಸಂದರ್ಭದಲ್ಲಿ ನಾವು ಪ್ರತಿಭಟನೆ ಮಾಡಬೇಕಿದೆ. ಕೇಂದ್ರದ ಸರ್ಕಾರದ ವೈಫ‌ಲ್ಯಗಳನ್ನು ಜನರಿಗೆ ತೋರಿಸುವ ಕಾರ್ಯ ಮಾಡಬೇಕು. ಪಿಎಂ ಕೇರ್‌ ಟ್ರಸ್ಟ್‌ಗೆ ಸುಮಾರು 9,860 ಕೋಟಿ ರೂ. ಜಮಾ ಆಗಿದೆ ಎಂಬ ಮಾಹಿತಿಯಿದೆ.

ಇಟ್ಟೊಂದು ದೊಡ್ಡ ಹಗರಣ ಇಟ್ಟುಕೊಂಡು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡಲೇಬೇಕು ಎಂದು ಎಚ್ಚರಿಸಿದರು.

ಭಾರತ ಚೀನ ಗಡಿಯಲ್ಲಿ ಎಷ್ಟು ಜನ ಸತ್ತಿದ್ದಾರೆ ಮತ್ತು ಎಷ್ಟು ಜನರಿಗೆ ತೊಂದರೆಯಾಗಿದೆ ಎಂಬ ಮಾಹಿತಿಯನ್ನು ರಾಹುಲ್‌ ಗಾಂಧಿಯವರು 9 ಟ್ವೀಟ್‌ ಮೂಲಕ ಕೇಳಿದ್ದರು. ಇದಕ್ಕೆ ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಸೇರಿ ಯಾರು ಕೂಡ ಉತ್ತರ ನೀಡಿಲ್ಲ. ಸರ್ವಪಕ್ಷ ಸಭೆಯಲ್ಲೂ ವಸ್ತು ಸ್ಥಿತಿಯನ್ನು ಹೇಳಿಲ್ಲ. ಭಾರತದ ಸೈನಿಕರು ಯಾರ ಜಾಗದಲ್ಲಿ ಸತ್ತಿದ್ದಾರೆ ಎಂಬುದು ಸೇರಿದಂತೆ ಗಾಲ್ವಾನ್‌ ಕಣಿವೆಯ ಸ್ಪಷ್ಟ ಮಾಹಿತಿಯನ್ನು ಜನರಿಗೆ ತಿಳಿಸಬೇಕು.

ಎಲ್ಲಿಯವರೆಗೆ ಈ ಸರ್ಕಾರವನ್ನು ಹೊಡೆದು ಹೋಡಿಸುವುದಿಲ್ಲವೋ ಅಲ್ಲಿಯವರೆಗೂ ದೇಶ ಉದ್ದಾರ ಆಗುವುದಿಲ್ಲ. ಇಂದಿನ ಪೀಳಿಗೆ ಈ ಬಗ್ಗೆ ವಿಷಯ ತಿಳಿದು ಹೆಜ್ಜೆ ಇಡಬೇಕು. ಆ ಕೆಲಸವನ್ನು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್‌ ಮಾಡಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next