Advertisement

ಚೀನದಲ್ಲಿ ಮತ್ತೆ ಹೆಚ್ಚಿದ ಕೋವಿಡ್ ಸೋಂಕು; ಜನರಿಂದ ಮತ್ತೆ ಆಹಾರ ವಸ್ತು ಸಂಗ್ರಹ ಶುರು

09:31 PM Dec 20, 2022 | Team Udayavani |

ಬೀಜಿಂಗ್‌: ಮೂರು ವರ್ಷಗಳ ಕಾಲ ಕಠಿಣ ನಿಯಮಗಳಿಂದ ಬೇಸತ್ತ ನಾಗರಿಕರ ಆಕ್ರೋಶಕ್ಕೆ ಬಾಗಿದ ಚೀನ ಸರ್ಕಾರ ಅದನ್ನು ಸಡಿಲಿಕೆ ಮಾಡಿದ ಬೆನ್ನಲ್ಲೇ ಕೊರೊನಾ ಸೋಂಕು ಸ್ಫೋಟಗೊಂಡಿದೆ.

Advertisement

ಮುಂದಿನ ಮೂರು ತಿಂಗಳಲ್ಲಿ ಸೋಂಕಿನ ಪ್ರಮಾಣ ಶೇ.60ಕ್ಕೆ ಏರಿಕೆಯಾಗಲಿದೆ ಎಂದು ಅಲ್ಲಿನ ತಜ್ಞರೇ ಎಚ್ಚರಿಕೆ ನೀಡಿದ್ದಾರೆ.

ಆ ದೇಶದ ವಿವಿಧ ಭಾಗಗಳಲ್ಲಿ ಇರುವ ಆಸ್ಪತ್ರೆಗಳು ಮತ್ತೆ ಸೋಂಕು ಪೀಡಿತರಿಂದ ತುಂಬಲು ಶುರುವಾಗಿದೆ.

ವೈರಾಣು ತಜ್ಞರ ಪ್ರಕಾರ ಮುಂದಿನ 90 ದಿನಗಳಲ್ಲಿ ಚೀನದ ಶೇ.60ರಷ್ಟು ಮತ್ತು ಜಗತ್ತಿನ ಶೇ.10ರಷ್ಟು ಮಂದಿಗೆ ಮತ್ತೆ ಕೊರೊನಾ ಬಾಧೆ ಕಾಣಿಸಿಕೊಳ್ಳಲಿದೆ.

ಏಪ್ರಿಲ್‌ ವೇಳೆಗೆ ಕೊರೊನಾ ಸಾವಿನ ಪ್ರಕರಣ 5 ಲಕ್ಷ ಆಗಲಿದೆ. 2023ರ ಅಂತ್ಯದಲ್ಲಿ 16 ಲಕ್ಷ ಮಂದಿ ಸಾವಿಗೀಡಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

Advertisement

ರಾಜಧಾನಿ ಬೀಜಿಂಗ್‌ನ ಶವಸಂಸ್ಕಾರ ಕೇಂದ್ರವೊಂದರಲ್ಲಿ ನಿರೀಕ್ಷೆಗೆ ಮೀರಿ ಮೃತದೇಹಗಳು ಆಗಮಿಸುತ್ತಿವೆ. ಅವುಗಳ ಸಂಸ್ಕಾರಕ್ಕೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ಉಂಟಾಗಿದೆ.

ಶೇಖರಣೆಗೆ ಸಿದ್ಧತೆ:
ಅದಕ್ಕೆ ಪೂರಕವಾಗಿ ಚೀನಾದಲ್ಲಿ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಮತ್ತೆ ಕಠಿಣ ಪ್ರತಿಬಂಧಕ ಕ್ರಮಗಳು ಜಾರಿಯಾಗಬಹುದು ಎಂಬ ಅಂಜಿಕೆಯಿಂದ ದೀರ್ಘ‌ ಕಾಲ ಸಂಗ್ರಹಿಸಲು ಸಾಧ್ಯ ಇರುವ ಆಹಾರ ವಸ್ತುಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಒಂದು ವಾರದಿಂದ ಈಚೆಗೆ ಆಹಾರ ವಸ್ತುಗಳ ಮಾರಾಟ ಪ್ರಮಾಣ 20ರಿಂದ 30 ಟನ್‌ಗಳಷ್ಟು ಹೆಚ್ಚಾಗಿದೆ.

ಬೀಜಿಂಗ್‌ ಮತ್ತು ಶಾಂಘೈ ಮಾರುಕಟ್ಟೆಗಳಲ್ಲಿ ವಿಟಮಿನ್‌ ಸಿ ಪ್ರಮಾಣದ ಆಹಾರ ವಸ್ತುಗಳ ಖರೀರಿ ಪ್ರಮಾಣ ಹೆಚ್ಚಾಗಿದೆ. ಪ್ರತಿ 500 ಗ್ರಾಂ ನಿಂಬೆಹಣ್ಣಿಗೆ 12 ರೂ. ದರ ನಿಗದಿಯಾಗಿದೆ. ಮೊದಲು ಇದು 2 ರೂ.ಗೆ ಸಿಗುತ್ತಿತ್ತು. ಕಿತ್ತಳೆ, ಮರಸೇಬು, ಪೀಚ್‌ ಹಣ್ಣುಗಳ ಮಾರಾಟವೂ ಹೆಚ್ಚಾಗಿದೆ. ಇದೇ ವೇಳೆ, ಚೀನಾದಲ್ಲಿನ ಪರಿಸ್ಥಿತಿಯ ಬಗ್ಗೆ ಅಮೆರಿಕ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next