ಹುಮನಾಬಾದ: ಕಳೆದ ಎರೆಡು ದಿನಗಳಲ್ಲಿ ಹುಮನಾಬಾದ ಪಟ್ಟಣವೊಂದರಲ್ಲಿಯೇ 38 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯಕ್ಕೆ 60ರ ಗಡಿ ದಾಟಿದೆ.
ಇಷ್ಟು ದಿನಗಳ ಕಾಲ ಕೇವಲ ಚಿಟಗುಪ್ಪ ಪಟ್ಟಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಇದೀಗ ಹುಮನಾಬಾದ ಪಟ್ಟಣದ ಸರದಿ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ಎರೆಡು ದಿನಗಳಲ್ಲಿಯೇ 38 ಪ್ರಕರಣಗಳು ಪತ್ತೆಯಾಗಿರುವುದು ಪಟ್ಟಣದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಎರಡು ದಿನಗಳಲ್ಲಿ ಎಎಸ್‌ಐ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿ, ಪಟ್ಟಣದ ನೂರು ಖಾನ್ ಅಖಾಡದ ಒಂದೇ ಕುಟುಂಬದಲ್ಲಿ ನಾಲ್ವರು, ಬಾಲಾಜಿ ಮಂದಿರ ಹತ್ತಿರದ ಮನೆಯೊಂದರಲ್ಲಿ ಹತ್ತು, ವಾಂಜರಿ ಬಡಾವಣೆಯ ಒಂದೇ ಕುಟುಂಬದಲ್ಲಿ ನಾಲ್ವರು ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.
ಈ ವರೆಗೆ ಪಟ್ಟಣದ ಮೂರು ನಾಲ್ಕು ಖಾಸಗಿ ಆಸ್ಪತ್ರೆಗಳು ಸೋಂಕಿನಿಂದಾಗಿ ಮುಚ್ಚಲ್ಪಟ್ಟಿವೆ. ಈ ಪೈಕಿ ಎರಡು ಆಸ್ಪತ್ರೆಗಳು ಪುನಃ ಕಾರ್ಯ ಆರಂಭಿಸಿವೆ. ಅಲ್ಲದೆ, ಪಟ್ಟಣದ ಸಂಚಾರ ಪೊಲೀಸ್ ಠಾಣೆ, ಸಿಪಿಐ ಕಚೇರಿ ಸೇರಿದಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಗೇಟ್‌ನಲ್ಲಿ ಕುಳಿತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೇಳಿಕೊಳ್ಳಲು ಹಿಂಜರಿಕೆ ಪಟ್ಟಣದ ಕೆಲ ಶ್ರೀಮಂತರು ಸೋಂಕಿನ ಲಕ್ಷಣಗಳು ತಿಳಿದು ನೇರವಾಗಿ ಹೈದ್ರಾಬಾದ ಖಾಸಗಿ ಲಾಬ್‌ಗಳಿಗೆ ಭೇಡಿ ನೀಡಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇಲ್ಲಿನ ಜನರಿಗೆ ರೋಗದ ಬಗ್ಗೆ ಮಾಹಿತಿಯದಂತೆ ನೋಡುಕೊಳ್ಳುತ್ತಿದ್ದಾರೆ. ಪಟ್ಟಣದ ನಾಲ್ವರು ವ್ಯಾಪಾರಸ್ಥರ ಪೈಕಿ ಇಬ್ಬರು ಹೈದ್ರಾಬಾದ ನಗರದಲ್ಲಿಯೇ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದು ಹೇಳಲಾಗಿದ್ದು, ಅವರೊಂದಿಗೆ ಪ್ರವಾಸ ಮಾಡಿದ ಇನ್ನಿಬ್ಬರು ಬೀದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಂಪರ್ಕಕ್ಕೆ ಬಂದಿರುವ ಜನರು ಯಾರಿಗೂ ಹೇಳಿಕೊಳ್ಳಲಾಗದೆ ಮೌನವಾಗಿ ಉಳಿದುಕೊಂಡಿದ್ದಾರೆ.
-ದುರ್ಯೋಧನ ಹೂಗಾರ