ವರದಿ : ಗೋವಿಂದಪ್ಪ ತಳವಾರ
ಮುಧೋಳ: ಕಳೆದೊಂದು ವರ್ಷದಿಂದ ಸಾರ್ವಜನಿಕರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಹೊಡೆತಕ್ಕೆ ಇಡೀ ಮನುಕುಲವೇ ನಲುಗಿಹೋಗಿದೆ.
ಕಳೆದ ಬಾರಿ ಕೊರೊನಾ ವೈರಸ್‌ನಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದ ಶಾಮಿಯಾನಾದವರ (ಪೆಂಡಾಲ್ ಹಾಕುವವರು) ಬಾಳಲ್ಲಿ ಇದೀಗ ಮತ್ತೂಮ್ಮೆ ಕರಿನೆರಳಿನ ಛಾಯೆ ಆವರಿಸಿದೆ. ಮದುವೆ ಸೀಸನ್‌ನಲ್ಲೆ ಉಲ್ಬಣ: ಕಳೆದ ವರ್ಷ ದೇಶದಲ್ಲಿ ಹೆಚ್ಚು ಕಡಿಮೆ ಫೆಬ್ರವರಿಯಲ್ಲಿ ಕೋವಿಡ್ ಆರ್ಭಟ ಜೋರಾಗಿತ್ತಾದರೂ ಅದನ್ನು ತಡೆಗಟ್ಟಲು ಸರ್ಕಾರ ಮಾರ್ಚ್‌ನಲ್ಲಿ ಲಾಕ್‌ಡೌನ್ ಜಾರಿ ಮಾಡಿತ್ತು. ಪ್ರತಿವರ್ಷ ಮಾರ್ಚ್ ತಿಂಗಳಿಂದ ಮದುವೆ ಸೀಸನ್ ಆರಂಭವಾಗುತ್ತದೆ. ಹೀಗಾಗಿ ಕಳೆದ ವರ್ಷ ಸಾರ್ವಜನಿಕ ಮದುವೆಗಳಿಗೆ ಅನುಮತಿ ನಿರಾಕರಿಸಿದ್ದರಿಂದ ಶಾಮಿಯಾನ್ ಹಾಕುವವರು ಕೆಲಸವಿಲ್ಲದೆ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಆಗಿನ ಬಿಗಿಯಾದ ಲಾಕ್‌ಡೌನ್ ಕ್ರಮದಿಂದಾಗಿ ಸಾರ್ವಜನಿಕ ಮದುವೆ ಹಾಗೂ ಶುಭ ಕಾರ್ಯಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ಪೆಂಡಾಲ್ ಹಾಕುವವರು ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರು.
ಈ ಬಾರಿಯೂ ಹೊಡೆತ: ಕಳೆದ ಬಾರಿ ಉಂಟಾಗಿದ್ದ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡು ಈ ಬಾರಿಯಾದರೂ ನಾಲ್ಕಾರು ಕಾಸು ಸಂಪಾದಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಪೆಂಡಾಲ್ ಹಾಕುವವರ ಜೀವನ ಮತ್ತೆ ಮಸುಕಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಕೋವಿಡ್ 2ನೇ ಅಲೆಯ ಅಬ್ಬರ ನಾಗಾಲೋಟದಲ್ಲಿ ಸಾಗುತ್ತಿದ್ದು, ದೇಶದಲ್ಲಿ ದೈನಂದಿನ ಕಾರ್ಯಕಲಾಪದ ಮೆಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇನ್ನು ಮದುವೆ ಸೀಸನ್ ಆರಂಭದಲ್ಲಿಯೇ ಸರ್ಕಾರ ಕೊರೊನಾ ತಡೆಗೆ ಹಲವು ಬಿಗಿ ಕ್ರಮ ಕೈಗೊಂಡಿದ್ದು, ಪೆಂಡಾಲ್ ಹಾಕುವವರನ್ನು ಚಿಂತಾಕ್ರಾಂತರನ್ನಾಗಿಸಿದೆ.
ಲಕ್ಷಾಂತರ ರೂ. ವಹಿವಾಟು: ಪ್ರತಿವರ್ಷ ಮಾರ್ಚ್ ನಿಂದ ಮೇವರೆಗೆ ನಡೆಯುವ ಮದುವೆ ಸೀಸನ್ ನಲ್ಲಿ ಪೆಂಡಾಲ್ ಕೆಲಸಗಾರರು ಲಕ್ಷಾಂತರ ರೂ. ವ್ಯವಹಾರ ಮಾಡುತ್ತಾರೆ. ಎರಡ್ಮೂರು ತಿಂಗಳಲ್ಲಿ ವರ್ಷಕ್ಕಾಗುವಷ್ಟು ದುಡಿಮೆ ಮಾಡುವ ಇವರಿಗೆ ಮದುವೆ ಸೀಸನ್ ಬಹಳ ಮುಖ್ಯ. ಆದರೆ ಕಳೆದೆರಡು ಸೀಸನ್‌ನಲ್ಲಿ ವ್ಯಾಪಾರವಿಲ್ಲದ ಕಾರಣ ಜೀವನ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.
ಪೂರಕ ಕೆಲಸಕ್ಕೂ ಹೊಡೆತ: ಒಂದು ಮದುವೆ ಎಂದರೆ ಅಲ್ಲಿ ಕೇವಲ ಪೆಂಡಾಲ್ ಹಾಕುವವರಿಗೆ ಮಾತ್ರ ಕೆಲಸವಿರುವುದಿಲ್ಲ. ಅಡುಗೆ ಬಾಣಸಿಗರು, ಮಂಗಲಮಂಟಪ, ಬ್ಯಾಂಜೋ ಪಾರ್ಟಿ ವಾಹನ ಸವಾರರು ಸೇರಿದಂತೆ ಹತ್ತಾರು ವರ್ಗದ ಜನರಿಗೆ ಮದುವೆಯಿಂದ ಕೆಲಸ ದೊರೆಯುತ್ತಿರುತ್ತದೆ. ಆದರೆ ಕೊರನಾ ಹೊಡೆತಕ್ಕ ತತ್ತರಿಸಿರುವ ಈ ಎಲ್ಲ ವರ್ಗದ ಜನರು ವಿ ಯ ಆಟಕ್ಕೆ ನಿಟ್ಟುಸಿರು ಹಾಕುವಂತಾಗಿದೆ.
ಅಡ್ವಾನ್ಸ್ ಬುಕ್ಕಿಂಗ್ ಕ್ಯಾನ್ಸಲ್: ಮೊನ್ನೆ ಮೊನ್ನೆಯವರೆಗೆ ಯಾವುದೇ ಕಾರಣಕ್ಕೂ ಲಾಕ್‌ಡೌನ್ ವಿಧಿಸುವುದಿಲ್ಲ ಎಂದು ಹೇಳುತ್ತಿದ್ದ ಸರ್ಕಾರ ಲಾಕ್‌ಡೌನ್ ಬದಲಿಗೆ ಹತ್ತಾರು ಬಿಗಿಯಾದ ಕ್ರಮಕ್ಕೆ ಮುಂದಾಗುತ್ತಿದೆ. ಕೊರೊನಾ ತಡೆಗೆ ಬಿಗಿಯಾದ ಕ್ರಮ ಅನಿವಾರ್ಯವಾದರೂ ದಿನದ ಕೂಲಿ ನಂಬಿ ಬದುಕುವವರಿಗೆ ಅದು ಅರಗಿಸಿಕೊಳ್ಳಲಾಗದ ಹಿಂಸೆಯಾಗುತ್ತಿದೆ.
ಇನ್ನು ಮಾರ್ಚ್‌ನಿಂದ ಆರಂಭವಾಗುತ್ತಿದ್ದ ಮದುವೆಗಳ ಸಂಭ್ರಮಾಚರಣೆಗೆ ಹಲವೆಡೆ ಈಗಾಗಲೇ ಶಾಮಿಯಾನ ಬುಕ್ ಆಗಿದ್ದವು. ಆದರೆ ಸರ್ಕಾರ ಮದುವೆ ಮನೆಗಳಲ್ಲಿ ಐವತ್ತಕ್ಕಿಂತ ಹೆಚ್ಚಿನ ಜನರು ಸೇರಬಾರದು ಎಂಬ ಷರತ್ತು ವಿಧಿಸಿರುವ ಪರಿಣಾಮ ಮದುವೆಗಾಗಿ ಬುಕ್ ಆಗಿದ್ದ ಅದೆಷ್ಟೋ ಶಾಮಿಯಾನ್ ರದ್ದುಗೊಳಿಸಿ ಅಡ್ವಾನ್ಸ್ ಹಣವನ್ನು ವಾಪಸ್ ನೀಡಲಾಗಿದೆ. ದೊರೆಯದ ಪರಿಹಾರ: ತೀವ್ರ ಹಾನಿಯಿಂದಾಗಿ ಕಂಗೆಟ್ಟಿದ್ದ ಶಾಮಿಯಾನಾ ವ್ಯಾಪಾರಸ್ಥರು ತಾಲೂಕು ಪೆಂಡಾಲ್ ಮಾಲೀಕರ ಸಂಘದ ಅಡಿಯಲ್ಲಿ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಮನವಿಗೆ ಸ್ಪಂದಿಸದ ಸರ್ಕಾರ ಮನವಿ ಪಡೆದುಕೊಂಡಿದ್ದನ್ನು ಬಿಟ್ಟರೆ ಮತ್ತೇನನ್ನೂ ನೀಡಿಲ್ಲ ಎಂಬುದು ಸಂಘಟನೆ ಮುಖಂಡರ ದೂರು.