Advertisement
ಹೆಚ್ಚು ಸೋಂಕಿತರಿರುವ ರಾಜ್ಯಗಳಲ್ಲಿ ತಗ್ಗುತ್ತಿದೆ ಟೆಸ್ಟಿಂಗ್ ಸಂಖ್ಯೆ!ಯಾವ ರಾಜ್ಯಗಳಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆಯೋ ಅಲ್ಲೆಲ್ಲ ನಿತ್ಯ ಪರೀಕ್ಷೆಗಳ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ದೇಶದಲ್ಲಿ ಅತಿಹೆಚ್ಚು “ಸಕ್ರಿಯ’ ಪ್ರಕರಣಗಳು ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್‌ನಲ್ಲೇ ಇವೆ. ಶುಕ್ರವಾರ ಸಂಜೆಯ ವೇಳೆಗೆ ದೇಶದಲ್ಲಿ 1,42,763 ಸಕ್ರಿಯ ಪ್ರಕರಣಗಳಿದ್ದರೆ, ಮಹಾರಾಷ್ಟ್ರವೊಂದರಲ್ಲೇ ಈ ಸಂಖ್ಯೆ 47,980ರಷ್ಟಿದೆ. ಅಂದರೆ, 33.60 ಪ್ರತಿಶತ ಸಕ್ರಿಯ ಪ್ರಕರಣಗಳು ಮಹಾರಾಷ್ಟ್ರದಲ್ಲೇ ಇವೆ! ತಮಿಳುನಾಡು ಹೊರತುಪಡಿಸಿ ಉಳಿದ ಮೂರೂ ರಾಜ್ಯಗಳಲ್ಲಿ ಪರೀಕ್ಷೆಗಳ ಸಂಖ್ಯೆ ತಗ್ಗಿದೆ. ಆದರೆ ಈಗ ಈ ನಾಲ್ಕೂ ರಾಜ್ಯಗಳಲ್ಲೂ ಟೆಸ್ಟ್ ಪಾಸಿಟಿವ್ ರೇಟ್(ಪರೀಕ್ಷೆಗೊಳಪಟ್ಟವರಲ್ಲಿ ಸೋಂಕು ದೃಢಪಟ್ಟವರ ಪ್ರಮಾಣ) ಅಧಿಕವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ ತಿಂಗಳಿಗೆ ಹೋಲಿಸಿದರೆ, ಜೂನ್ ತಿಂಗಳಲ್ಲಿ ನಿತ್ಯ ಪರೀಕ್ಷೆಗಳ ಪ್ರಮಾಣ 7 ಸಾವಿರದಿಂದ 5 ಸಾವಿರಕ್ಕೆ ಇಳಿದಿದೆ. ಇದನ್ನು ಖುದ್ದು ಕೇಜ್ರಿವಾಲ್ ಸರ್ಕಾರವೇ ಹೇಳಿದೆ. ಈ ವಿಷಯವಾಗಿ, ಶುಕ್ರವಾರ ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿದ್ದು, ಅದೇಕೆ ಪರೀಕ್ಷೆಗಳನ್ನು ತಗ್ಗಿಸಲಾಗಿದೆ ಎಂದು ದೆಹಲಿ ಸರ್ಕಾರಕ್ಕೆ ವಿವರಣೆ ಕೇಳಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಡಾ|ಕೆ.ಕೆ. ಅಗರ್ವಾಲ್ ಅವರು, “”ದೆಹಲಿಯಲ್ಲಿ ಒಟ್ಟು 20 ಪ್ರತಿಶತಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದರೂ ಆಗಿರಬಹುದು. ಇದೇನೂ ನನಗೆ ಅಚ್ಚರಿ ಹುಟ್ಟಿಸುವುದಿಲ್ಲ. ಈ ಹಂತದಲ್ಲಂತೂ ಪರೀಕ್ಷೆಯ ಪ್ರಮಾಣ
ತಗ್ಗಿದೆ. ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುವವರೂ ಕಡಿಮೆಯಾಗಿದ್ದಾರೆ” ಎನ್ನುತ್ತಾರೆ . ಕಳೆದ ವಾರ ದೆಹಲಿ ಸರಕಾರ ಕೋವಿಡ್-19 ಪರೀಕ್ಷಣೆಗೆ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿತ್ತು. ಅದರ ಪ್ರಕಾರ ಕೊರೊನಾ ಲಕ್ಷಣಗಳು ಕಾಣಿಸಿಕೊಂಡವರನ್ನು ಮಾತ್ರ ಪರೀಕ್ಷಿಸಬೇಕು ಎಂದಿತ್ತು. ಆದರೆ, ರಾಷ್ಟ್ರೀಯ ಮಾರ್ಗಸೂಚಿಯು, ರೋಗಿಯೊಬ್ಬನ ಮನೆಯವರು ಹಾಗೂ ಆತನ ಸಂಪರ್ಕಕ್ಕೆ ಬಂದ ಆರೋಗ್ಯ ವಲಯದ ಸಿಬ್ಬಂದಿಯ ಟೆಸ್ಟ್ ಮಾಡಬೇಕು(ಅವರಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಸಹ) ಎನ್ನುತ್ತದೆ. ಹೀಗಾಗಿ,ಕೇಜ್ರಿವಾಲ್ ಸರ್ಕಾರದ ಈ ಅಪಾಯಕಾರಿ ನಿರ್ಧಾರವನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ರದ್ದು ಮಾಡಿದ್ದರು. ಇದೆಲ್ಲದರ ಹೊರತಾಗಿಯೂ, ಈಗಲೂ ಪ್ರತಿ ಹತ್ತು ಲಕ್ಷ ಜನಸಂಖ್ಯೆಯಲ್ಲಿ ಅತಿಹೆಚ್ಚು ಟೆಸ್ಟ್‌ಗಳನ್ನು ನಡೆಸಿದ ಪ್ರದೇಶಗಳಲ್ಲಿ ದೆಹಲಿಯೇ ಮುಂದಿದೆ. ಆದರೆ ಜುಲೈ ಅಂತ್ಯದ ವೇಳೆಗೆ ದೆಹಲಿಯೊಂದರಲ್ಲೇ ಸೋಂಕಿತರ ಸಂಖ್ಯೆ 5 ಲಕ್ಷ ದಾಟುವ ಅಂದಾಜು ಇರುವುದಾಗಿ ಖುದ್ದು ಆಪ್ ಸರ್ಕಾರವೇ ಹೇಳುತ್ತಿರುವುದರಿಂದ, ಟೆಸ್ಟಿಂಗ್‌ಗಳನ್ನು ಹೆಚ್ಚಿಸಲೇಬೇಕಾದ ಅನಿವಾರ್ಯವಿದೆ.
Related Articles
Advertisement
ಕರ್ನಾಟಕ ಕೋವಿಡ್ ಕಥನರಾಜ್ಯದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 95 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 799 ಜನರಲ್ಲಿ ಸೋಂಕುಪತ್ತೆಯಾದರೆ, ತಮಿಳುನಾಡಿನಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 511 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ ಕೋವಿಡ್-19 ಮರಣ ಪ್ರಮಾಣ 1.15 ಪ್ರತಿಶತದಷ್ಟಿದೆ. ಅಂದರೆ, ಪ್ರತಿ 100 ಕೊರೊನಾ ಸೋಂಕಿತರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮರಣ ಪ್ರಮಾಣ 3.68 ಪ್ರತಿಶತ, ಗುಜರಾತ್‌ನಲ್ಲಿ 6.28 ಪ್ರತಿಶತ ಹಾಗೂ ಪಶ್ಚಿಮ ಬಂಗಾಳದಲ್ಲಿ 4.52 ಪ್ರತಿಶತವಿದೆ! ಜೂನ್ 11ರ, ಮಧ್ಯಾಹ್ನ 3 ಗಂಟೆಯ ವೇಳೆಗೆ ರಾಜ್ಯದಲ್ಲಿ 4 ಲಕ್ಷ 16 ಸಾವಿರ ಜನರನ್ನು ಪರೀಕ್ಷಿಸಲಾಗಿದೆ. ತನ್ಮೂಲಕ ಕರ್ನಾಟಕದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 6330 ಜನರನ್ನು ಪರೀಕ್ಷಿಸಿದಂತಾಗಿದೆ. ಜೂನ್ 4ರಿಂದ ಜೂನ್ 12ರವರೆಗೆ ರಾಜ್ಯದಲ್ಲಿ ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಸರಾಸರಿ 4 ಪ್ರತಿಶತ ಏರಿಕೆ ಕಂಡುಬರುತ್ತಿದೆ. ಕೆಲವು ರಾಷ್ಟ್ರಗಳಲ್ಲಿ ಭಾರತಕ್ಕಿಂತಲೂ ಕಡಿಮೆ ಸೋಂಕಿತರಿದ್ದರೂ, ಅಲ್ಲಿ ಮರಣ ಪ್ರಮಾಣ ನಮ್ಮಲ್ಲಿಗಿಂತ ಅಧಿಕವಿದೆ
ದೇಶ ಸೋಂಕಿತರು ಮೃತರು
ಭಾರತ 2.98 ಲಕ್ಷ 8,501
ಇರಾನ್ 1.82 ಲಕ್ಷ 8,659
ಜರ್ಮನಿ 1.86 ಲಕ್ಷ 8,851
ಬೆಲ್ಜಿಯಂ 59.5 ಸಾವಿರ 9,646
ಮೆಕ್ಸಿಕೋ 1.33 ಲಕ್ಷ 15,944
ಫ್ರಾನ್ಸ್ 1.55 ಲಕ್ಷ 29,346
ಇಟಲಿ 2.36 ಲಕ್ಷ 34,000
(ಜೂನ್ 12ರ ಮಧ್ಯಾಹ್ನದವರೆಗೆ)