Advertisement
ನ್ಯೂಯಾರ್ಕ್ ನಗರದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಪೈಕಿ 5300 ಮಂದಿಗೆ ನರ್ಸಿಂಗ್ ಹೋಂಗಳಲ್ಲಿಯೇ ಸೋಂಕು ಅಂಟಿಕೊಂಡದ್ದು ಬಹಿರಂಗವಾಗಿದೆ. ಅಲ್ಲೀಗ ಆಸ್ಪತ್ರೆಗಳೇ ಸಾವಿನ ತಾಣಗಳಾಗಿ ಬದಲಾಗಿವೆ.
Related Articles
Advertisement
ಕೆಲವು ಖಾಸಗಿ ನರ್ಸಿಂಗ್ ಹೋಂ ಮತ್ತು ಆಸ್ಪತ್ರೆಗಳ ಸ್ಥಿತಿ ಬಡ ರಾಷ್ಟ್ರಗಳ ಸರಕಾರಿ ಆಸ್ಪತ್ರೆಗಳ ಸ್ಥಿತಿಗಿಂತಲೂ ಕಳಪೆಯಾಗಿತ್ತು. ಸಾಕಷ್ಟು ಬೆಡ್‌ಗಳು ಇಲ್ಲದೆ ರೋಗಿಗಳನ್ನು ಕಾರಿಡಾರ್, ಶೌಚಾಲಯದ ಪಕ್ಕದಲ್ಲೆಲ್ಲ ಮಲಗಿಸಲಾಗಿತ್ತು. ಶವಾಗಾರಗಳಲ್ಲಿ ಹೆಣಗಳನ್ನು ಇಡಲು ಜಾಗ ಸಾಲದೆ ಒಂದರ ಮೇಲೊಂದರಂತೆ ರಾಶಿ ಹಾಕಲಾಗಿತ್ತು ಎಂದು ಆಸ್ಪತ್ರೆಯ ಭಯಾನಕ ಚಿತ್ರಣಗಳನ್ನು ಬಿಚ್ಚಿಟ್ಟಿದ್ದಾರೆ ಗುಣಮುಖರಾಗಿರುವ ಓರ್ವ ಕೋವಿಡ್ ಸೋಂಕಿತ.
ಕೋವಿಡ್‌ನ ಹಾವಳಿ ಆರಂಭದ ಘಟ್ಟದಲ್ಲಿರುವಾಗ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಆಸ್ಪತ್ರೆಗಳು ಇದು ಭರ್ಜರಿ ವ್ಯವಹಾರವಾಗುವ ಲಕ್ಷಣ ಎಂದು ಹಿಗ್ಗಿದ್ದವು. ಆದರೆ ವೈರಸ್‌ನ ಪ್ರಸರಣ ತೀವ್ರಗೊಂಡು ಎಲ್ಲ ವೈದ್ಯಕೀಯ ಸೌಲಭ್ಯಗಳು ನೆಲಕಚ್ಚಿದಾಗಲೇ ಅವುಗಳಿಗೆ ತಾವೆಂಥ ಅಪಾಯಕಾರಿ ಘಟ್ಟಕ್ಕೆ ತಲುಪಿದ್ದೇವೆ ಎಂದು ಅರಿವಾದದ್ದು. ಟೆಸ್ಟಿಂಗ್ ಕಿಟ್, ವೈಯಕ್ತಿಕ ಸುರಕ್ಷಾ ಉಡುಗೆ, ಗೌನ್‌ಗಳ ತೀವ್ರ ಕೊರತೆ ಕಾಣಿಸಿಕೊಂಡಾಗ ವೈದ್ಯಕೀಯ ಸಿಬಂದಿಗಳು ಕಂಗಾಲಾದರು. ಕೊನೆಗೆ ಎನ್-95 ಮಾಸ್ಕ್ನಂಥ ತೀರಾ ಅಗತ್ಯ ಸುರಕ್ಷಾ ಸಾಧನಗಳು ಕೂಡ ಸಿಗುವುದಿಲ್ಲ ಎಂಬ ಪರಿಸ್ಥಿತಿ ತಲೆದೋರಿದಾಗ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಹೆದರುವಂತಾಯಿತು. ಹೀಗಾಗಿ ಕೆಲವು ರೋಗಿಗಳನ್ನು ಗುಣಮುಖರಾಗುವ ಮೊದಲೇ ಮನೆಗೆ ಕಳುಹಿಸಿದ್ದೂ ಇದೆ.
ಪಿಪಿಇ ಉಡುಗೆಗಳು, ಮಾಸ್ಕ್ ಇನ್ನಿತರ ಸುರಕ್ಷಾ ಸಾಧನಗಳ ಕೊರತೆಯಿಂದಾಗಿ ಅನೇಕ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳೂ ಸಾವನ್ನಪ್ಪಿದ್ದಾರೆ. ಅಮೆರಿಕದ ಆರೋಗ್ಯ ಸೇವಾ ಕ್ಷೇತ್ರದ ಹುಳುಕುಗಳನ್ನೆಲ್ಲ ಈ ಒಂದು ವೈರಸ್ ಜಗಜ್ಜಾಹೀರುಗೊಳಿಸಿದೆ.