ಯಲಬುರ್ಗಾ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಆರಂಭಿಸಲಾಗಿದೆ. ತಾಲೂಕಿನ ಕೋವಿಡ್ ಸೋಂಕಿತ ಪ್ರಕರಣಗಳಿಗೆ ಪಟ್ಟಣದಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಸೋಮವಾರ ನೂತನ ಕೋವಿಡ್ ಆಸ್ಪತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಸ್ಪತ್ರೆ ಆರಂಭಿಸಲಾಗಿದೆ. ಸಾರ್ವಜನಿಕರು ಕೋವಿಡ್ ವೈರಸ್ ಕುರಿತು ಹೆಚ್ಚಿನ ಜಾಗೃತಿ ಹೊಂದಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್ ನಿರ್ಮೂಲನೆಗೆ ಸಾಕಷ್ಟು ಶ್ರಮಿಸುತ್ತಿವೆ. ಕೋವಿಡ್ ನಿರ್ಮೂಲನೆಯಲ್ಲಿ ಕೋವಿಡ್ ವಾರಿಯರ್ಸ್ ಪಾತ್ರ ಸಾಕಷ್ಟಿದೆ ಎಂದರು. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದರು. ಸಾರ್ವಜನಿಕರು ತಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ಆರೋಗ್ಯ ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಪ್ರಕಾಶ ವಿ. ಮಾತನಾಡಿ, ನೂತನ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್, ವೆಂಟಿಲೇಟರ್, ಮಾನಿಟರ್ ವ್ಯವಸ್ಥೆ ಹೊಂದಿದೆ. ಅಗತ್ಯ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ. ನಾಲ್ಕು ಪ್ರತ್ಯೇಕ ವಾರ್ಡ್‌ಗಳಿದ್ದು ಅವೆಲ್ಲವುಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಸಿಬ್ಬಂದಿಗೆ ಸುರಕ್ಷಾ ಸಲಕರಣೆಗಳನ್ನು ನೀಡಲಾಗವುದು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ| ಮಂಜುನಾಥ ಬ್ಯಾಳಹುಣಸಿ, ವೈದ್ಯರಾದ ಡಾ| ಸುನೀಲ, ಡಾ| ರವಿ, ಡಾ| ಲಕ್ಷ್ಮಣ್ಣ, ಮಹಾಲಕ್ಷ್ಮಿ, ಸಂಗಮೇಶ ಹಾಗೂ ಆಸ್ಪತ್ರೆ ಸಿಬ್ಬಂದಿ, ನಿರ್ಮಿತಿ ಇಲಾಖೆ ಸಿಬ್ಬಂದಿ ಇದ್ದರು.