ಕುಂದಾಪುರ: ಇಲ್ಲಿನ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನಿಂದ ಕೊಡುಗೆಯಾಗಿ ನೀಡಿರುವ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಹೆರಿಗೆ ವಾರ್ಡ್‌ನ್ನು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಗುರುವಾರದಿಂದ ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಈಗಾಗಲೇ ಉಡುಪಿಯಲ್ಲಿ ಕೋವಿಡ್ 19 ಆಸ್ಪತ್ರೆ ಕಾರ್ಯಾಚರಿಸುತ್ತಿದ್ದು, ಇದೀಗ ಕುಂದಾಪುರದಲ್ಲಿ ಜಿಲ್ಲೆಯ 2ನೆಯ ಕೋವಿಡ್-19 ಆಸ್ಪತ್ರೆ ಕಾರ್ಯಾರಂಭವಾಗಿದೆ. ಹೊರರಾಜ್ಯದಿಂದ ಬಂದವರಲ್ಲಿ ಸೋಂಕು ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಆಸ್ಪತ್ರೆ ನಿರ್ವಹಣೆಯ ಕುರಿತು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು ಇಲ್ಲಿ ಟೇಪ್ ಕಟ್ಟಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಇಲ್ಲಿದ್ದ ಮಹಿಳೆಯರನ್ನು ಪಕ್ಕದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸದ್ಯ ಆಸ್ಪತ್ರೆಯ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ವಾರ್ಡ್‌ನಲ್ಲಿ ಹೆರಿಗಾಗಿ ಸೇರ್ಪಡೆಗೊಂಡು ಆರೈಕೆ ಪಡೆದುಕೊಳ್ಳುತ್ತಿರುವವರನ್ನು, ಈ ಹಿಂದೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ಕೊಡುಗೆಯಾಗಿ ನೀಡಿದ್ದ ಹಳೆಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.
ಕುಂದಾಪುರದ ಉಪ ವಿಭಾಗೀಯ ಮಟ್ಟದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪ್ರಕರಣ ವರದಿಯಾಗುವ ಮೊದಲು ದಿನವೊಂದಕ್ಕೆ ಸರಾಸರಿ 400 500 ಹೊರ ರೋಗಿಗಳು ಹಾಗೂ 90 100 ಒಳ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಕೋವಿಡ್ ಪ್ರಕರಣದ ಬಳಿಕ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದೆ.
ತಾಲೂಕು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಎಲ್ಲ ರೋಗಿಗಳಿಗೂ ನಿತ್ಯದ ಚಿಕಿತ್ಸೆ ಮುಂದುವರಿಯಲಿದೆ. ಹೆರಿಗೆಗಾಗಿ ಬರುವವರನ್ನು ಈ ಹಿಂದಿನ 30 ಬೆಡ್‌ಗಳ ಹಳೆಯ ಹೆರಿಗೆ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್‌ಗಳ ಆಧಾರದಲ್ಲಿ ಉಳಿದ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ನೀಡಲಾಗುವ ಎಲ್ಲ ರೀತಿಯ ಚಿಕಿತ್ಸೆಗಳು ಸಾರ್ವಜನಿಕರಿಗೆ ಎಂದಿನಂತೆ ಲಭ್ಯವಾಗಲಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ
ಸಹಾಯಕ ಕಮಿಷನರ್ ಕೆ. ರಾಜು , ಕೋವಿಡ್ ಪಾಸಿಟಿವ್ ಬಂದಿರುವ ರೋಗಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಿ ಅವರಿಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಂದಾಜು 100 ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲಾಡಳಿತ ನಿರ್ದೇಶನದ ಮೇರೆಗೆ, ಜಿಲ್ಲಾ ಆರೋಗ್ಯ ಇಲಾಖೆಯ ಸಹಕಾರದಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಸೌಕರ್ಯ ಮಾಡಲಾಗಿದೆ ಎಂದಿದ್ದಾರೆ.