Advertisement
ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದವು. ಕನ್ನಡ ಚಿತ್ರರಂಗ 2020ರಲ್ಲಿ ಸಂಪೂರ್ಣ ಸ್ತಬ್ಧವಾಗಿ ಹೋಗಿತ್ತು. ನಿರ್ಮಾಪಕರು, ವಿತರಕರು, ಪ್ರದರ್ಶಕರು, ಕಲಾವಿದರು, ತಂತ್ರಜ್ಞರು ಹೀಗೆ ಚಿತ್ರರಂಗದ ಎಲ್ಲರನ್ನೂ ಕೊರೋನಾ ಒಂದಲ್ಲ ಒಂದು ರೀತಿ ಕಾಡಿ ಹೈರಾಣಾಗಿಸಿತ್ತು. ಇನ್ನೇನು ಕೊರೋನಾ ಲಸಿಕೆ ಕಂಡು ಹಿಡಿದಾಯಿತು, 2021ರಲ್ಲಿ ಎಲ್ಲವೂ ಸರಿ ಹೋಗುತ್ತಿದೆ ಎಂಬ ಆಶಾವಾದ ಇತರ ರಂಗಗಳಂತೆ, ಚಿತ್ರರಂಗದಲ್ಲೂ ಗರಿಗೆದರಿತ್ತು. ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಸಡಿಲಿಸಿದ್ದರಿಂದ, 2021ರ ಆರಂಭದಿಂದಲೇ ಹೊಸ ಜೋಶ್‌ನಲ್ಲಿ ಚಿತ್ರರಂಗದ ಚಟುವಟಿಕೆಗಳು ಆರಂಭವಾದವು.
Related Articles
Advertisement
ಈಗಾಗಲೇ ತಮ್ಮ ಸಿನಿಮಾಗಳ ಮೇಲೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದ ನಿರ್ಮಾಪಕರು ಮುಂದೇನು ಗತಿ ಎಂಬ ಚಿಂತೆಯಲ್ಲಿದ್ದರೆ, ಪ್ರೇಕ್ಷಕರೆ ಬರದಿದ್ದರೆ, ಸಿನಿಮಾ ಬಿಡುಗಡೆ ಮಾಡೋದು ಹೇಗೆ, ಥಿಯೇಟರ್ ನಡೆಸೋದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ವಿತರಕರು ಮತ್ತು ಪ್ರದರ್ಶಕರು. ಇದು ಪ್ರೊಡಕ್ಷನ್ ಹಂತದಲ್ಲಿರುವ, ರಿಲೀಸ್‌ಗೆ ರೆಡಿಯಾಗುತ್ತಿರುವ ಸಿನಿಮಾಗಳ ಕಥೆಯಾದರೆ, ಈಗಾಗಲೇ ರಿಲೀಸ್ ಆಗಿರುವ ಸಿನಿಮಾಗಳದ್ದು “ತ್ರಿಶಂಕು ಸ್ಥಿತಿ’ಯ ಇನ್ನೊಂದು ಥರದ ಕಥೆ.
ಬಿಗ್‌ಸ್ಟಾರ್ ಸಿನಿಮಾಗಳ ನಡುವೆಯೇ ರಿಲೀಸ್ ಪ್ಲಾನ್ ಮಾಡಿಕೊಂಡಿದ್ದ ಹಲವು ಹೊಸಬರ ಸಿನಿಮಾಗಳು, ಎರಡು ತಿಂಗಳಿನಿಂದ ಸಾಕಷ್ಟು ಪ್ರಮೋಶನ್ ನಡೆಸಿಕೊಂಡಿದ್ದವು. ಅದರಲ್ಲಿ ಕೆಲವು ಸಿನಿಮಾಗಳು ಈಗಾಗಲೇ ಏಪ್ರಿಲ್ ಮೊದಲ ಮತ್ತು ಎರಡನೇ ವಾರದಲ್ಲಿ ತೆರೆಕಂಡಿವೆ. ಆ ಸಿನಿಮಾಗಳು ಅರ್ಧಕ್ಕೆ ಚಿತ್ರ ಮಂದಿರದಿಂದ ವಾಪಾಸ್ ಆಗಿವೆ. ನಿಮಗೆ ತಿಳಿದಿರುವಂತೆ ಬಿಗ್ ಬಜೆಟ್ ಹಾಗೂ ಸ್ಟಾರ್ ಸಿನಿಮಾಗಳ ನಿರ್ಮಾಪಕರೆಲ್ಲಾ ಸೇರಿ ತಮ್ಮ ಸಿನಿಮಾ ಬಿಡುಗಡೆಯಲ್ಲಿ ಯಾವುದೇ ಗೊಂದಲವಾಗದಂತೆ ಮೂರು ವಾರಗಳ ಅಂತರದಲ್ಲಿ ಸಿನಿಮಾ ಬಿಡುಗಡೆ ಪ್ಲ್ರಾನ್ ಮಾಡಿಕೊಂಡಿದ್ದರು. ಅವರ ಪ್ಲ್ರಾನ್ ನೋಡಿ ಕೊಂಡು ಹೊಸಬರು ಹಾಗೂ ಇತರ ಹೀರೋ ಗಳು ತಮ್ಮ ಚಿತ್ರ ಬಿಡುಗಡೆಗೆ ಮುಂದಾಗಿದ್ದರು. ಆದರೆ, ಈಗ ಎಲ್ಲವೂ ಉಲ್ಟಾ ಆಗಿದೆ. ಸಿನಿಮಾ ಬಿಡುಗಡೆಯ ಬಗ್ಗೆ ಯೋಚಿಸೋದು ಕೂಡಾ ದೂರದ ಮಾತಾಗಿದೆ. ಓಡೋ ಕುದುರೆಯ ಲಗಾಮ್‌ಗೆ ಕೊರೊನಾ ಕೈ ಹಾಕಿದೆ. ಹೊಸ ಯೋಚನೆ, ಚಿಂತನೆ ಏನಿದ್ದರೂ ಕೊರೊನಾ ತಿಳಿಯಾದ ನಂತರವಷ್ಟೇ
ನಮ್ಮದು ಮೀಡಿಯಂ ಬಜೆಟ್ ಸಿನಿಮಾ. ಎಲ್ಲ ಅಂದುಕೊಂಡಂತೆ ಆಗಿದ್ರೆ, ಇದೇ ತಿಂಗಳ ಕೊನೆಗೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೆವು. ಆದ್ರೆ ಈಗಿನ ಪರಿಸ್ಥಿತಿ ನೋಡಿದ್ರೆ, ಸದ್ಯಕ್ಕೆ ರಿಲೀಸ್ ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಮುಂದೇನಾಗುತ್ತದೆಯೋ ಎಂಬ ಭಯವಿದೆ.
– ಕುಮಾರ್, “ಕ್ರಿಟಿಕಲ್ ಕೀರ್ತನೆಗಳು’ ನಿರ್ದೇಶಕ
ಈಗಿನ ಪರಿಸ್ಥಿಯಲ್ಲಿ ಯಾರೂ, ಏನೂ ಮಾಡುವಂತಿಲ್ಲ. ಯಾರನ್ನೂ ದೂರುವಂತಿಲ್ಲ. ಯಾರಿಗೆ ಯಾರೂ, ಸಹಾಯ ಮಾಡದಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ, ಅನಿವಾರ್ಯವಾಗಿ ಅರ್ಧಕ್ಕಿಂತ ಹೆಚ್ಚು ಮಂದಿ ಸಿನಿಮಾರಂಗವನ್ನು ಬಿಡುತ್ತಾರೆ. ಅದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ.
-ಎನ್. ಎಂ ಸುರೇಶ್, ಹಿರಿಯ ನಿರ್ಮಾಪಕ
ರವಿಪ್ರಕಾಶ್ ರೈ