ವಿಜಯಪುರ: ಕೋವಿಡ್ 19 ವೈರಸ್ ನಿಗ್ರಹಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ ಏ.14ರ ವರೆಗೆ ಲಾಕ್‌ಡೌನ್ ನಿರ್ಬಂಧ ಹೇರಿದೆ. ಈ ಹಂತದಲ್ಲಿ ದೇಶಾದ್ಯಂತ ಸಂಕಷ್ಟದಲ್ಲಿ ಸಿಲುಕಿರುವ ಹಾಗೂ ನೆರವಿನ ಅಗತ್ಯವಿರುವ ಜನರಿಗಾಗಿ ಸ್ಥಾಪಿಸಿರುವ ಸಹಾಯವಾಣಿ-1077 ವಿಜಯಪುರ ಜಿಲ್ಲೆಯ ಮಟ್ಟಿಗೆ ಅತ್ಯಂತ ಉಪಯುಕ್ತ ಸೇವೆ ನೀಡಿದೆ.
ಕೋವಿಡ್ 19 ಹೆಮ್ಮಾರಿ ವ್ಯಾಪಕವಾಗಿ ಹರಡುತ್ತಲೇ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಯಿತು. ಕೂಡಲೇ ಸಹಾಯವಾಣಿ ತೆರೆಯಿತು. ರಾಜ್ಯಾದ್ಯಂತ ಆಯಾ ಜಿಲ್ಲಾ ಎಸ್‌ಟಿಡಿ ಕೋಡ್ ಸೇರಿಸಿ 1077 ಸಂಖ್ಯೆಗೆ ಕರೆ ಮಾಡಿದರೆ ದಿನದ 24 ಗಂಟೆಯೂ ದೂರು ಸ್ವೀಕರಿಸಿ, ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಇಬ್ಬರು ಸಿಬ್ಬಂದಿ 3 ಹಂತದಲ್ಲಿ ನಿರಂತರ ಸೇವೆ ನೀಡುತ್ತಿದ್ದಾರೆ. ಕರೆ ಮಾಡಿದವರು ಸಂಕಷ್ಟದಲ್ಲಿರುವ ಕಾರಣ ತಾಳ್ಮೆಯಿಂದ ಸಮಸ್ಯೆ ಆಲಿಸಿ, ಸಮಾಧಾನದಿಂದಲೇ ಉತ್ತರುಸುವ ಕೆಲಸ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಹಗಲಿರುಳು ಸೇವೆ: ವಿಜಯಪುರ ಜಿಲ್ಲೆಯಲ್ಲಿ ಮಾ.14ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಗೊಂಡ ಕೋವಿಡ್ 19 ಸಹಾಯವಾಣಿ ಲಾಕ್ ಡೌನ್ ಮುಕ್ತಾಗೊಳ್ಳುವ ಏ.14ರ ವರೆಗೆ ಹಗಲು-ರಾತ್ರಿ ದೂರು ಸ್ವೀಕರಿಸಲಿದೆ. ದೂರುದಾರರಿಗೆ ಮರಳಿ ಸಂದೇಶ ನೀಡುತ್ತಿರುವುದು ಈ ಸಹಾಯವಾಣಿ ವಿಶೇಷ. ಏ.3ರ ವರೆಗೆ ಅಂದರೆ ಕಳೆದ 21 ದಿನಗಳಲ್ಲಿ ಸಹಾಯವಾಣಿ ಕೇಂದ್ರ 218ಕ್ಕೂ ಹೆಚ್ಚು ದೂರು ಸ್ವೀಕರಿಸಿದೆ. ಸ್ವೀಕರಿಸಿದ ಬಹುತೇಕ ದೂರುಗಳಲ್ಲಿ ಲಾಕ್‌ಡೌನ್ ಬಳಿಕ ಎಲ್ಲೆಂದರಲ್ಲಿ ಸ್ಥಗಿತಗೊಂಡವರು ತಮ್ಮನ್ನು ರಕ್ಷಿಸಿ, ಊರಿಗೆ ಮರಳಲು ನೆರವಾಗಿ, ಅನ್ನ-ಆಹಾರ-ನೀರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ತಮ್ಮನ್ನು ರಕ್ಷಿಸಿ ಎಂದು ದೇಶದ ಮೂಲೆ ಮೂಲೆಗಳಿಂದ ಬಂದ ಕರೆಗಳೇ ಹೆಚ್ಚು. ತಮ್ಮ ರಾಜ್ಯದ 4 ಜನರು ವಿಜಯಪುರದಲ್ಲಿ ಸಿಲುಕಿದ್ದು, ಕೂಡಲೇ ನೆರವು ನೀಡುವಂತೆ ಉತ್ತರ ಪ್ರದೇಶದ ಕೋವಿಡ್ ಸಂಯೋಜನಾಧಿಕಾರಿ ವಿಜಯಕುಮಾರ ಈ ಕೇಂದ್ರಕ್ಕೆ ಮನವಿ ಮಾಡಿದ್ದರು. ದೂರು ಸ್ವೀಕಾರವಾಗುತ್ತಲೇ ಜಿಲ್ಲಾಡಳಿತ ತಕ್ಷಣ ಉತ್ತರ ಪ್ರದೇಶ ಮೂಲದ ನಾಲ್ವರಿಗೆ ಪುನರ್ವಸತಿ ಕಲ್ಪಿಸಿದೆ.
ವಿಜಯಪುರ ಜಿಲ್ಲೆಯ ತಿಕೋಟ ಭಾಗದ ವಿವಿಧ ಗ್ರಾಮಗಳ 36 ಜನರು ಮಹಾರಾಷ್ಟ್ರದ ಪುಣೆ ಬಳಿ ಸಿಲುಕಿಕೊಂಡಿದ್ದರು. ಕಾಮುಂಡಿ ಗುಡ್ಡದಲ್ಲಿ 36 ಜನರು ಲಾಕ್‌ಔಟ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಕುರಿತು ಆಲೇಶ ಕಿಶನ್ ರಾಠೊಡ ಎಂಬವರಿಂದ ಸಹಾಯವಾಣಿಗೆ ದೂರು ಬಂತು. ಕೂಡಲೇ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನಿರ್ದೇಶನದಂತೆ ಅಪರ ಜಿಲ್ಲಾ ಧಿಕಾರಿ ಡಾ| ಔದ್ರಾಮ್ ಮಹಾರಾಷ್ಟ್ರದ ಅಧಿಕಾರಿಗಳನ್ನು ಸಂಪರ್ಕಿಸಿ, ಕನ್ನಡಿಗರಿಗೆ ರಕ್ಷಣೆ ಕೊಡಿಸಿದರು.
ಪುನರ್ವಸತಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ತೊರವಿ, ಜಾಲಗೇರಿ, ಅತಾಲಟ್ಟಿ, ಲೋಗಾಂವಿ ಭಾಗದ 7 ಕುಟುಂಬಗಳ 40 ಜನರು ಸಂಕಷ್ಟಕ್ಕೆ ಸಿಲುಕಿದ್ದಾಗಿ ದೂರು ಬಂತು. ಕೂಡಲೇ ಜಿಲ್ಲಾಡಳಿತ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ 4 ಕುಟುಂಬಗಳ ಸುಮಾರು 20 ಜನರಿಗೆ ರಕ್ಷಣೆ ಕಲ್ಪಿಸಿದೆ. ಇನ್ನೂ ಮೂರು ಜನರಿಗೆ ಲಾಕ್‌ಡೌನ್‌ವರೆಗೆ ಪುನರ್ವಸತಿ ಕಲ್ಪಿಸುವಲ್ಲಿ ನೆರವಾಗಿದೆ.
ಮುದ್ದೇಬಿಹಾಳ ತಾಲೂಕಿನ ಗರಸಂಗಿ ಗ್ರಾಮದ ಮೂರು ಕುಟುಂಬಗಳ ಸುಮಾರು 15 ಜನರು ಮಂಗಳೂರು ಬಳಿಯ ಕೈಕಂಬ ಬಳಿ ಕೆಲಸಕ್ಕೆ ಹೋಗಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾದಾಗ ಗಂಗಮ್ಮ ಮೇಟಿ ಎಂಬುವರು ಸಹಾಯವಾಣಿಗೆ ದೂರು ನೀಡಿದರು. ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ ಅಲ್ಲಿನ ಜಿಲ್ಲಾಡಳಿತದೊಂದಿಗೆ ಸ್ಪಂದಿಸಿ ಪುನರ್ವಸತಿ ಕಲ್ಪಿಸುವಲ್ಲಿ ನೆರವಾಗಿದೆ.
ಜಿಲ್ಲಾಡಳಿತ ಕೋವಿಡ್-19 ತುರ್ತು ಪರಿಸ್ಥಿತಿ ಎದುರಿಸಲು ಯುದೊœàಪಾದಿಯಲ್ಲಿ ಕೆಲಸ ಮಾಡುತ್ತಿದೆ. ಸಂತ್ರಸ್ತರಿಗೆ ನೆರವಾಗಲು ತೆರೆದಿರುವ ಸಹಾಯವಾಣಿ ಉತ್ತಮವಾಗಿ ಸೇವೆ ನೀಡುತ್ತಿದೆ. ಈ ವರೆಗೆ ಒಂದೇ ಒಂದು ದೂರು ಸ್ವೀಕರಿಸುವಲ್ಲಿ ಲೋಪವಾಗಿಲ್ಲ, ಸ್ಪಂದಿಸುವಲ್ಲಿ ಕೊರತೆಯಾಗಿಲ್ಲ.
-ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ
-ಜಿ.ಎಸ್. ಕಮತರ