ಚಾಮರಾಜನಗರ: ದಕ್ಷಿಣ ಭಾರತದಲ್ಲಿ ಪ್ರಸ್ತುತ ಎರಡೇ ಜಿಲ್ಲೆಗಳು ಕೋವಿಡ್ 19 ಮುಕ್ತವಾಗಿದ್ದು, ತೆಲಂಗಾಣದ ವಾರಂಗಲ್ ಗ್ರಾಮಾಂತರ ಜಿಲ್ಲೆ ಮತ್ತು ಕರ್ನಾಟಕದ ಚಾಮರಾಜನಗರ ಜಿಲ್ಲೆ ಈ ಗೌರವಕ್ಕೆ ಪಾತ್ರವಾಗಿವೆ. www.covid19india.org ಎಂಬ ಜಾಲತಾಣದಲ್ಲಿ ಪ್ರತಿದಿನ ಇಡೀ ದೇಶದ ಎಲ್ಲ ರಾಜ್ಯಗಳ ಕೋವಿಡ್ 19 ಅಂಕಿ ಅಂಶಗಳನ್ನು ಸಮಗ್ರವಾಗಿ ಪ್ರಕಟಿಸಲಾಗುತ್ತಿದೆ. ಪ್ರತಿ ರಾಜ್ಯದ ಜಿಲ್ಲೆಗಳಲ್ಲಿರುವ ಕೋವಿಡ್ 19 ಪ್ರಕರಣಗಳ ಸಂಖ್ಯೆಯನ್ನು ಪ್ರತಿ ದಿನ ಜಾಲತಾಣದಲ್ಲಿ ಅಪ್ ಡೇಟ್ ಮಾಡಲಾಗುತ್ತಿದೆ.
ಇಡೀ ದೇಶದ ಕೋವಿಡ್ 19 ಪ್ರಕರಣಗಳ ಕುರಿತು ಸಮಗ್ರವಾದ ಮಾಹಿತಿಯನ್ನು ಈ ಜಾಲತಾಣ ನೀಡುತ್ತಿದೆ. ಇದರಲ್ಲಿ ದಕ್ಷಿಣ ಭಾರತದಲ್ಲಿ ತೆಲಂಗಾಣದ ವಾರಂಗಲ್ ಗ್ರಾಮಾಂತರ ಮತ್ತು ಕರ್ನಾಟಕದ ಚಾಮರಾಜ ನಗರ ಜಿಲ್ಲೆಗಳು ಮಾತ್ರ ಕೋವಿಡ್ 19 ಮುಕ್ತ ಜಿಲ್ಲೆ ಗಳಾಗಿ ಭೂಪಟದಲ್ಲಿ ಬಿಳಿ ಬಣ್ಣದಲ್ಲಿ ನಮೂದಿಸಲಾಗಿದೆ. ಚಾಮರಾಜನಗರ ಜಿಲ್ಲೆ ಕರ್ನಾಟಕದ ಏಕೈಕ ಕೋವಿಡ್ 19 ಮುಕ್ತ ಜಿಲ್ಲೆ ಎಂಬುದು ಖಚಿತವಾಗಿತ್ತು. ಆದರೆ ದಕ್ಷಿಣ ಭಾರತದಲ್ಲಿ ಎರಡೇ ಜಿಲ್ಲೆಗಳು ಕೋವಿಡ್ 19 ಮುಕ್ತ ಎಂಬುದು ಬೆಳಕಿಗೆ ಬಂದಿರಲಿಲ್ಲ.
ದಕ್ಷಿಣ ಭಾರತದ ಆಂಧ್ರ, ತಮಿಳುನಾಡು, ಕೇರಳದ ಎಲ್ಲ ಜಿಲ್ಲೆಗಳಲ್ಲೂ ಕೋವಿಡ್ 19 ಪಾಸಿಟಿವ್ ಪ್ರಕರಣಗಳಿವೆ. ವಾರಂಗಲ್ ಗ್ರಾಮಾಂತರ ಸಹ ಈ ಸಾಧನೆ ಮಾಡಿರುವುದನ್ನು ತಿಳಿದು, ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಉದಯವಾಣಿ ವಾರಂಗಲ್ ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಹರಿತಾ ಅವರನ್ನು ಸಂಪರ್ಕಿಸಿತು. ಈ ಕುರಿತು ಮಾತನಾಡಿದ ಹರಿತಾ, ವಾರಂಗಲ್ ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ 19 ಪಾಸಿಟಿವ್ ಕಂಡು ಬಂದಿಲ್ಲ.
ನಮ್ಮ ಜಿಲ್ಲೆ ಅರಣ್ಯ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವುದು, ವಿದೇಶದಿಂದ ಬಂದವರ ಸಂಖ್ಯೆ ಕಡಿಮೆ ಇರುವುದು, ದೊಡ್ಡ ನಗರಗಳು ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು ಎಂದರು. ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದ ಚಾಮರಾಜನಗರ ಬಿಟ್ಟರೆ ವಾರಂಗಲ್ ಗ್ರಾಮಾಂತರ ಮಾತ್ರ ಕೋವಿಡ್ 19 ಮುಕ್ತ ಎಂಬ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದರು. ಇತ್ತ ಕರ್ನಾಟಕದ ಏಕೈಕ ಕೋವಿಡ್ 19 ಮುಕ್ತ ಜಿಲ್ಲೆಯಾದ ಚಾಮರಾಜನಗರ ವಾರಂಗಲ್ ಗ್ರಾಮಾಂತರ ಜಿಲ್ಲೆಯ ಜೊತೆ ಗೌರವ ಹಂಚಿಕೊಳ್ಳುವ ಮೂಲಕ ಅಪರೂಪದ ಸಾಧನೆ ಮಾಡಿದೆ.
ಜಿಲ್ಲಾಡಳಿತ, ಆರೋಗ್ಯ ಇಲಾಖೆ, ನಗರಸಭೆ, ಪುರಸಭೆಗಳು ಕೈಗೊಂಡ ಕ್ರಮದಿಂದ ಜಿಲ್ಲೆ ಇದುವರೆಗೂ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿಲ್ಲ. ಈಗ ವಾರಂಗಲ್ ಗ್ರಾಮೀಣ ಮತ್ತು ಚಾಮರಾಜನಗರ ಕೋವಿಡ್ 19 ಮುಕ್ತ ಜಿಲ್ಲೆಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿ ಫೈನಲ್ ತಲುಪಿವೆ. ಇವೆರಡರಲ್ಲಿ ಟ್ರೋμ ಯಾವ ಜಿಲ್ಲೆಯ ಪಾಲಿಗೆ ದೊರಕುತ್ತದೋ ಎಂಬ ಕುತೂಹಲ ಮೂಡಿದೆ!
* ಕೆ.ಎಸ್. ಬನಶಂಕರ ಆರಾಧ್ಯ