Advertisement

ಕೋವಿಡ್: ಮಾರ್ಗಸೂಚಿ ಪಾಲನೆಯೇ ಪರಿಹಾರ: ಬೆಡ್‌, ಆಕ್ಸಿಜನ್‌ಗೆ ವಿಶೇಷ ನಿಗಾ

01:18 AM Jan 13, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಮಿಕ್ರಾನ್‌ ಭೀತಿಯ ನಡುವೆ ಕೊರೊನಾ ದೈನಂದಿನ ಪ್ರಕರಣ ಏರುತ್ತಿದ್ದು, ಮುಂದಿನ ದಿನಗಳಲ್ಲಿ ಬೆಡ್‌, ಆಕ್ಸಿಜನ್‌ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಜಿಲ್ಲಾ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ.

Advertisement

ಜಿಲ್ಲೆಯ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 9,376 ಬೆಡ್‌ ಕೊರೊನಾ ರೋಗಿಗಳಿಗೆ ಮೀಸಲಿದೆ. ಹೆಚ್ಚಿನ ಪ್ರಕರಣಗಳು ಸೌಮ್ಯ ಸ್ವಭಾವ ಹೊಂದಿರುವುದರಿಂದ ಆಸ್ಪತ್ರೆಗೆ ದಾಖಲಾಗುವ ಪ್ರಮೇಯ ಕಡಿಮೆ. ಸದ್ಯ 163 ಮಂದಿಯಷ್ಟೇ ಆಸ್ಪತ್ರೆಗಳಲ್ಲಿದ್ದು, ಉಳಿದವರು ಕೇರ್‌ಸೆಂಟರ್‌ ಮತ್ತು ಹೋಂ ಐಸೊಲೇಶನ್‌ನಲ್ಲಿದ್ದಾರೆ.
ಕೊರೊನಾ ಮೊದಲ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಶೇ. 50ರಿಂದ 60 ಪಟ್ಟು ಹರಡುವಿಕೆ ಹೆಚ್ಚು. ಶೇ. 90ರಷ್ಟು ಮಂದಿಯಲ್ಲಿ ಸೋಂಕಿನ ಲಕ್ಷಣ ಇರುವುದಿಲ್ಲ. ಶೇ. 10ರಷ್ಟು ಮಂದಿಗೆ ಶೀತ, ಜ್ವರ, ತಲೆ ನೋವು ಮೈ ಕೈ ನೋವು ಇರುತ್ತದೆ. ಈಗಾಗಲೇ ಇತರ ತೀವ್ರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊರೊನಾ ತಗಲಿದರೆ ಪರಿಣಾಮ ತೀವ್ರವಾಗಬಹುದು ಎನ್ನುತ್ತಾರೆ ವೈದ್ಯರು.

8 ಮಂದಿಯಷ್ಟೇ ವೆಂಟಿಲೇಟರ್‌ನಲ್ಲಿ
ದ.ಕ.ದಲ್ಲಿ ವೆಂಟಿಲೇಟರ್‌ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕಡಿಮೆ. ವೆನ್ಲಾಕ್‌ನಲ್ಲಿ ಇಬ್ಬರು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 6 ಮಂದಿ ಸೇರಿ ಒಟ್ಟು 8 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ. ಖಾಸಗಿ ಆಸ್ಪತ್ರೆಗಳ ಐಸಿಯುನಲ್ಲಿ 9 ಮಂದಿ ಇದ್ದಾರೆ. 28 ಮಂದಿ ಆಕ್ಸಿಜನ್‌ ಬೆಡ್‌ನ‌ಲ್ಲಿ, 118 ಮಂದಿ ನಾರ್ಮಲ್‌ ಬೆಡ್‌ನ‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಕೋವಿಡ್ ಭಾರಿ ಏರಿಕೆ : ರಾಜ್ಯದಲ್ಲಿ ಇಂದು 21 ಸಾವಿರ ಕೇಸ್; 10 ಸಾವು

16 ಕಡೆ ಆಮ್ಲಜನಕ ಘಟಕ
ತುರ್ತು ಸಂದರ್ಭದಲ್ಲಿ ಆಮ್ಲಜನಕ ಕೊರತೆ ಉಂಟಾಗಬಾರದು ಎಂದು ಜಿಲ್ಲೆಯ 16 ಕಡೆಗಳ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ವೆನ್ಲಾಕ್‌ನಲ್ಲಿ 3, ಲೇಡಿಗೋಶನ್‌, ಇಎಸ್‌ಐ ಆಸ್ಪತ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ತಲಾ 1 ಘಟಕ ಇದೆ. ಸಮುದಾಯ ಆರೋಗ್ಯ ಕೇಂದ್ರಗಳಾದ ವಿಟ್ಲ, ಉಪ್ಪಿನಂಗಡಿ, ಕಡಬ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ಮತ್ತು ವಾಮದಪದವಿನಲ್ಲೂ ತಲಾ ಒಂದು ಘಟಕ ಇದೆ. ಅಷ್ಟೇ ಅಲ್ಲದೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಒದಗಿಸಲಾಗಿದೆ.

Advertisement

ಮೂರನೇ ಅಲೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಜಾಗರೂಕರಾಗಿ ರಬೇಕು. ಕೋವಿಡ್‌ ಮಾರ್ಗಸೂಚಿಯ ಪಾಲನೆ ಕಟ್ಟು ನಿಟ್ಟಾಗಿ ಮಾಡಬೇಕು. ಸೋಂಕು ಸೌಮ್ಯ ಸ್ವಭಾವದ್ದೆಂದು ಯಾರೂ ಮೈಮರೆಯಬಾರದು.
– ಡಾ| ಕಿಶೋರ್‌ ಕುಮಾರ್‌,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next