Advertisement

ಕೋವಿಡ್‌: ಮಾರ್ಗಸೂಚಿ ಪಾಲನೆಗೆ ಸೂಚನೆ

12:27 PM Jan 01, 2023 | Team Udayavani |

ಚಾಮರಾಜನಗರ: ಕೋವಿಡ್‌-19ರ ಸಂಭಾವ್ಯ 4ನೇ ಅಲೆಯನ್ನು ನಿಯಂತ್ರಿಸುವ ಸಂಬಂಧ ಜಿಲ್ಲಾದ್ಯಂತ ಸಾರ್ವಜನಿಕರು ಹಾಗೂ ಕಾರ್ಯಕ್ರಮಗಳ ಆಯೋಜಕರು ಹೊಸ ವರ್ಷದ ಆಚರಣೆ ಹಾಗೂ ಇತರ ಆಚರಣೆಗಳ ಸಂದರ್ಭಗಳಲ್ಲಿ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚಿಸಿ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಆದೇಶ ಹೊರಡಿಸಿದ್ದಾರೆ.

Advertisement

ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್‌ -19ರ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರ ಆದೇಶ ಅನುಸಾರ ಹೊಸ ವರ್ಷದ ಆಚರಣೆ ಹಾಗೂ ಇತರ ಆಚರಣೆಗಳ ಸಂದರ್ಭಗಳಲ್ಲಿ ಎಚ್ಚರ ವಹಿಸಬೇಕಿದ್ದು, ಸೂಚಿಸಲಾಗಿರುವ ನಿರ್ಬಂಧ ಹಾಗೂ ಮಾರ್ಗಸೂಚಿಗಳನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಿ ಆದೇಶಿಸಲಾಗಿದೆ. ಹೊಸ ವರ್ಷಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆಚರಣೆಗಳನ್ನು ಜ.1ರಂದು ರಾತ್ರಿ 1 ಗಂಟೆಯ ಒಳಗೆ ಪೂರ್ಣಗೊಳಿಸಬೇಕು. ಹೊಸ ವರ್ಷಚರಣೆಗಾಗಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಒಂದೆಡೆ ಸೇರುವ ಸಂದರ್ಭದಲ್ಲಿ, ಅಂತಹ ಕಾರ್ಯಕ್ರಮಗಳನ್ನು ಹಗಲು ಹೊತ್ತಿನಲ್ಲಿ ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಬೇಕು.

ಇದರಿಂದ ಆರೋಗ್ಯದ ಮೇಲೆ ಬೆಳಗಿನ ಹಾಗೂ ಸಂಜೆಯ ಚಳಿ ಹಾಗೂ ಶೀತ ಗಾಳಿಯ ಪರಿಣಾಮವನ್ನು ತಡೆಗಟ್ಟಬಹುದು. ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗಳು, ಕ್ಲಬ್‌, ರೆಸಾರ್ಟ್‌, ಇತ್ಯಾದಿ ಒಳಾಂಗಣ ಗಳಲ್ಲಿ ವಿಶೇಷವಾಗಿ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವಂತಿಲ್ಲ. ವೃದ್ಧರು (60 ವರ್ಷ ಮೇಲ್ಪಟ್ಟವರು) ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಇಂತಹ ಆಚರಣೆಗಳಿಂದ ದೂರವಿರುವುದು ಉತ್ತಮ. ಕಾರ್ಯಕ್ರಮಗಳ ಆಯೋಜಕರು, ನಿರ್ವಹಣೆ ಮಾಡುವವರು ಹಾಗೂ ಸೇವಾ ಸಿಬ್ಬಂದಿ ಕೋವಿಡ್‌-19 ಲಸಿಕೆಯ ಬೂಸ್ಟರ್‌ ಡೋಸ್‌ ಲಸಿಕೆಯನ್ನು ಪಡೆದಿರಬೇಕು. ಆದಾಗ್ಯೂ, ಲಸಿಕೆಯ 2 ಡೋಸ್‌ಗಳನ್ನು ಪಡೆದಿರುವುದು ಅಗತ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜನದಟ್ಟಣೆಯನ್ನು ನಿಯಂತ್ರಿಸಲು ಪ್ರವೇಶ ದ್ವಾರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಒಳಾಂಗಣ ಪ್ರದೇಶಗಳಲ್ಲಿನ ಆಚರಣೆಯಲ್ಲಿ ಭಾಗವಹಿಸುವ ಎಲ್ಲರೂ ಎಲ್ಲಾ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಮಾಸ್ಕ್ ಧರಿಸದವರಿಗೆ ಪ್ರವೇಶವಿಲ್ಲ ಎಂಬ ಬೋರ್ಡ್‌ಗಳನ್ನು ಎಲ್ಲಾ ಸ್ಥಳಗಳಲ್ಲಿ ಕಾಣುವಂತೆ ಪ್ರದರ್ಶಿಸಬೇಕು. ಪ್ರತಿಯೊಬ್ಬರೂ ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಬೇಕು ಜ್ವರ ಹಾಗೂ ಉಸಿರಾಟದ ಸಮಸ್ಯೆ, ಕೆಮ್ಮು, ಶೀತ, ಮೂಗು ಸೋರುವಿಕೆ ಇತ್ಯಾದಿ ಲಕ್ಷಣಗಳನ್ನು ಹೊಂದಿದವರನ್ನು ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯಲು ಶಿಫಾರಸ್ಸು ಮಾಡುವುದು ಅಗತ್ಯವಾಗಿದೆ. ಒಳಾಂಗಣ ಆಚರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಹ್ಯಾಂಡ್‌ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು.

ಎಲ್ಲರೂ ಕಡ್ಡಾ ಯವಾಗಿ ಮಾಸ್ಕ್ ಧರಿಸಬೇಕು : ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಒಂದೆಡೆ ಸೇರುವ ಸಂದರ್ಭಗಳಲ್ಲಿ, ಸೋಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ಕಾರ್ಯಕ್ರಮದ ಸ್ಥಳದಿಂದ, ತಕ್ಷಣವೇ ಗುರುತಿಸಲಾದ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ಸೇವೆಯ ಲಭ್ಯತೆಯನ್ನು ಆಯೋಜಕರು ಖಚಿತಪಡಿಸಿಕೊಳ್ಳಬೇಕು. ಸಿನಿಮಾ ಹಾಲ್‌, ಥಿಯೇಟರ್‌ಗಳಿಗೆ ತೆರಳುವವರು ಕಡ್ಡಾಯವಾಗಿ ಎನ್‌-95 ಮಾಸ್ಕ್ ಧರಿಸಬೇಕು, ಪ್ರವೇಶದ್ವಾರದಲ್ಲಿರುವ ಸಿಬ್ಬಂದಿ ಇದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next