ಹೊಸದಿಲ್ಲಿ: ಮುಂದಿನ ತಿಂಗಳ 15ರ ಒಳಗಾಗಿ ದೇಶದಲ್ಲಿ ಕೊರೊನಾ ಇಳಿಮುಖವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಹಾಕಿಸಿಕೊಂಡದ್ದೇ ಮೂರನೇ ಅಲೆಯ ಪ್ರಭಾವ ತಗ್ಗಲು ಕಾರಣ.
ಹೀಗೆಂದು ಕೇಂದ್ರ ಸರಕಾರವೇ ಸೋಮವಾರ ಮಾಹಿತಿ ನೀಡಿದೆ. ಅದಕ್ಕೆ ಪೂರಕವಾಗಿ ಮುಂಬಯಿ, ದಿಲ್ಲಿ, ಕೋಲ್ಕತಾ ಮತ್ತು ಚೆನ್ನೈಯಲ್ಲಿ ಸೋಂಕಿನ ಅಬ್ಬರ ಇಳಿಮುಖವಾಗುವತ್ತ ಸಾಗಿದೆ. ದೇಶದ ಇತರ ಭಾಗಗಳಲ್ಲೂ ಇದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎನ್ನುವ ವಿಶ್ವಾಸ ಕೇಂದ್ರ ಸರಕಾರದ್ದು.
ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಶೇ.74 ಮಂದಿಗೆ 2 ಡೋಸ್ ಲಸಿಕೆ ಹಾಕಿಸಲಾಗಿದೆ. ಹೀಗಾಗಿ ಮೂರನೇ ಅಲೆಯ ತೀವ್ರತೆ ಎದುರಿಸುವಲ್ಲಿ ನೆರವಾಗಿದೆ.
ತಜ್ಞರ ಪ್ರಕಾರ ಮುಂದಿನ ತಿಂಗಳ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದ ಒಳಗಾಗಿ ಕೊರೊನಾ ಸಾಮಾನ್ಯ ಕಾಯಿಲೆ ಸ್ಥಿತಿಗೆ ತಲುಪಲಿದೆ. ಆದರೆ ಮದ್ರಾಸ್ ಐಐಟಿಯ ಪ್ರಾಧ್ಯಾಪಕ ಡಾ| ಜಯಂತ್ ಝಾ ನೇತೃತ್ವದ ತಂಡ ಅಧ್ಯಯನ ನಡೆಸಿದ ಪ್ರಕಾರ ಮುಂದಿನ 15 ದಿನಗಳಲ್ಲಿ ಅಂದರೆ ಫೆ.6ರ ಒಳಗಾಗಿ, ದೇಶದಲ್ಲಿ ಮೂರನೇ ಅಲೆ ಅತ್ಯಂತ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಲಿದೆ ಎಂದು ಈಗಾಗಲೇ ನಡೆಸಿದ ಅಧ್ಯಯನ ದೃಢಪಡಿಸಿದೆ.
ಇದನ್ನೂ ಓದಿ:ಒಂದೇ ದಿನ 46,426 ಕೋವಿಡ್ ಸೋಂಕು ದೃಢ: 32 ಸಾವು
ಇದೇ ವೇಳೆ, ರವಿವಾರದಿಂದ ಸೋಮವಾರದ ಅವಧಿಯಲ್ಲಿ 3,06,064 ಕೊರೊನಾ ಸೋಂಕು ದೃಢಪಟ್ಟಿದೆ ಮತ್ತು 439 ಮಂದಿ ಅಸುನೀಗಿದ್ದಾರೆ.