Advertisement

1 ಲಕ್ಷಕೋಟಿ ರೂ. ನಿಧಿಗೆ ಕೇಂದ್ರ ಚಿಂತನೆ

12:45 AM May 08, 2021 | Team Udayavani |

ಹೊಸದಿಲ್ಲಿ: ವಿಮಾ ರಹಿತ ಸೋಂಕಿತರು, ಉದ್ಯೋಗ ನಷ್ಟ ಅನುಭವಿಸಿದ ನಾಗರಿಕರಿಗೆ ಕೇಂದ್ರ 1 ಲಕ್ಷ ಕೋಟಿ ರೂ. ಮೊತ್ತದ ಸಾಂಕ್ರಾಮಿಕ ಸಹಾಯ ನಿಧಿ ಘೋಷಿಸಲು ಚಿಂತನೆ ನಡೆಸಿದೆ.

Advertisement

“ಸಾಂಕ್ರಾಮಿಕ ನಿಧಿ ಸ್ಥಾಪನೆ ಸಂಬಂಧ ನಾವು ಕಾರ್ಯಯೋಜನೆ ರೂಪಿಸುತ್ತಿದ್ದೇವೆ. ಇದಿನ್ನೂ ಮೌಲ್ಯಮಾಪನ ಹಂತದಲ್ಲಿದೆ. ಭಾರತೀಯ ವಿಮಾ ನಿರ್ದೇಶನಾಲಯ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಆರ್‌ಬಿಐ ಜತೆ ಮಾತುಕತೆ ನಡೆಸಲಾಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ. ನಾಗರಿ­ಕರ ಉದ್ಯೋಗ, ಆದಾಯ, ಆಹಾರ ಭದ್ರತೆ, ಆರೋಗ್ಯ, ಶಿಕ್ಷಣ ಮುಂತಾದ ವುಳಿಗೆ ಹೊಡೆತ ಬಿದ್ದಿದೆ. ಇದನ್ನು ನೀಗಿಸಲು ಹೆಚ್ಚುವರಿ 5.5 ಲಕ್ಷ ಕೋಟಿ ರೂ. ವೆಚ್ಚ ಮಾಡಬೇಕಾದ ಆವಶ್ಯಕತೆ ಇದೆ ಎಂದು ಅಜೀಮ್‌ ಪ್ರೇಮ್‌ಜಿ ವಿವಿ ವರದಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ನೇರ ಹಣ ವರ್ಗಾವಣೆ ಮತ್ತು  ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸು­ವಂತೆಯೂ ಸಲಹೆ ನೀಡಿತ್ತು. ಅದರಂತೆ, ಸರಕಾರ ಉದ್ಯೋಗ ನಷ್ಟ, ವಿಮಾ ನೆರವಿಗೆ ಹೆಚ್ಚು ಒತ್ತು ನೀಡಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ, 2ನೇ ಅಲೆಯಿಂದ, ಆರ್ಥಿಕ ಚಟುವಟಿಕೆ ಇಳಿಮುಖ ಆಗುವ ಸಾಧ್ಯತೆ ಇದೆ ಎಂದು ವಿತ್ತ ಇಲಾಖೆಯ ಮಾಸಿಕ ವರದಿ ಆತಂಕ ಸೂಚಿಸಿದೆ. ಆದರೂ ಮೊದಲ ಅಲೆಗೆ ಹೋಲಿಸಿದರೆ 2ನೇ ಅಲೆಯಲ್ಲಿ ಸೀಮಿತ ಆರ್ಥಿಕ ಪರಿಣಾಮದ ನಿರೀಕ್ಷೆಯನ್ನು ಸರಕಾರ ಇಟ್ಟುಕೊಂಡಿದೆ ಎಂದೂ ತಿಳಿಸಿದೆ.

ಉಚಿತ ಲಸಿಕೆಗೆ ಸುಪ್ರೀಂನಲ್ಲಿ ದಾವೆ :

ಹೊಸದಿಲ್ಲಿ: ದೇಶಾದ್ಯಂತ 18 ವರ್ಷದಿಂದ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಹಾಕಬೇಕು. ಈ ಬಗ್ಗೆ ಕೇಂದ್ರ ಸರಕಾರ ಏಕರೂಪದ ನಿಲುವು ಕೈಗೊಳ್ಳುವಂತೆ ಸೂಚನೆ ನೀಡಬೇಕು ಎಂದು ಪಶ್ಚಿಮ ಬಂಗಾಲ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿದೆ. ಇದರ ಜತೆಗೆ ವಿವಿಧ ರೀತಿಯ ದರಗಳನ್ನು ಲಸಿಕೆಗೆ ನಿಗದಿ ಮಾಡಿರುವುದನ್ನೂ ಅದು ಪ್ರಶ್ನೆ ಮಾಡಿದೆ. ದೇಶವ್ಯಾಪಿಯಾಗಿ ಪ್ರತಿ ಡೋಸ್‌ಗೆ 150 ರೂ. ಶುಲ್ಕ ವಿಧಿಸುವಂತೆಯೂ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಿಎಂ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲಕ್ಕೆ ಪ್ರತೀ ದಿನ 550 ಮೆಟ್ರಿಕ್‌ ಟನ್‌ ಮೆಡಿಕಲ್‌ ಆಕ್ಸಿಜನ್‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಇತರ ರಾಜ್ಯಗಳಿಗೆ ಹೆಚ್ಚುವರಿ ಆಕ್ಸಿಜನ್‌ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

Advertisement

ಹಲವು ರಾಜ್ಯಗಳಲ್ಲಿ ಸೋಂಕು ಇಳಿಮುಖ :

ಕೋವಿಡ್ ಎರಡನೇ ಅಲೆಯ ಆರಂಭದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಗೆ ಸಾಕ್ಷಿಯಾಗಿದ್ದ ಹಲವು ರಾಜ್ಯಗಳಲ್ಲಿ ಈಗ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ರಾಜಸ್ಥಾನ, ಛತ್ತೀಸ್‌­ಗಢ‌, ಗುಜರಾತ್‌, ಮಧ್ಯಪ್ರದೇಶ, ತೆಲಂಗಾಣ ಹಾಗೂ ಝಾರ್ಖಂಡ್‌ನಲ್ಲಿ ಈಗ ದೈನಂದಿನ ಸೋಂಕು ಪ್ರಕರಣಗಳು ಕ್ರಮೇಣ ಇಳಿಕೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಹೇಳಿದ್ದಾರೆ. ಆದರೆ ಕರ್ನಾಟಕ, ಕೇರಳ, ಪ.ಬಂಗಾಲ, ತಮಿಳುನಾಡು ಮತ್ತು ಒಡಿಶಾಗಳಲ್ಲಿ ಸೋಂಕು ಏರುಗತಿಯಲ್ಲಿದೆ ಎಂದಿದ್ದಾರೆ.

ಬಯಾಲಜಿಕಲ್‌ ಹೊಸ ಲಸಿಕೆ :

ಬಯಾಲಜಿಕಲ್‌ ಇ ದೇಶದಲ್ಲಿ ಲಸಿಕೆಗಳ ಉತ್ಪಾದನೆಗೆ ಹೆಜ್ಜೆಯಿ­ಟ್ಟಿದೆ. ಹೈದರಾಬಾದ್‌ನಲ್ಲಿರುವ ಈ ಕಂಪೆನಿಯ ಘಟಕದಲ್ಲಿ ಆಗಸ್ಟ್‌ ನಿಂದ ಲಸಿಕೆ ಉತ್ಪಾದನೆ ಶುರುವಾಗಲಿದ್ದು, ತಿಂಗಳಿಗೆ 7.5ರಿಂದ 8 ಕೋಟಿ ಲಸಿಕೆಗಳನ್ನು ತಯಾರಿಸಲು ಕಂಪೆನಿ ಉದ್ದೇಶಿಸಿದೆ. ಪ್ರತಿ ಲಸಿಕೆಗೆ ಅಂದಾಜು 110 ರೂ. ಇರಬಹುದು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ಮಹಿಮಾ ಡಾಟ್ಲಾ ತಿಳಿಸಿದ್ದಾರೆ. ಟೆಕ್ಸಾಸ್‌ನಲ್ಲಿರುವ “ಬೇಲರ್‌ ಕಾಲೇಜ್‌ ಆಫ್ ಮೆಡಿಸಿನ್‌’ ವಿದ್ಯಾಸಂಸ್ಥೆಯ ನ್ಯಾಶನಲ್‌ ಸ್ಕೂಲ್‌ ಆಫ್ ಟ್ರಾಪಿಕಲ್‌ ಮೆಡಿಸಿನ್‌ (ಎನ್‌ಎಸ್‌ಟಿಎಂ) ಸಂಸ್ಥೆ ಹಾಗೂ ಬಯಾಲಜಿಕಲ್‌ ಇ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ಕೊವಿಶೀಲ್ಡ್‌ 2 ಡೋಸ್‌ನಡುವೆ ಅಂತರ ಹೆಚ್ಚಳ? :

ಆಕ್ಸ್‌ಫ‌ರ್ಡ್‌-ಆಸ್ಟ್ರಾಜೆನೆಕಾ ಕಂಪೆನಿಯ ಕೊವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಕೇಂದ್ರ ಸರಕಾರದ ತಜ್ಞರ ಸಮಿತಿಯು ಪರಿಶೀಲನೆ ನಡೆಸುತ್ತಿದೆ. ಎರಡು ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿದಷ್ಟೂ ಲಸಿಕೆಯ ಪರಿಣಾಮಕತ್ವ ಸುಧಾರಿಸಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಅಧ್ಯಯನ ವರದಿಗಳು ಹೇಳುತ್ತಿವೆ. ಅದನ್ನು ಸಾಕ್ಷ್ಯವಾಗಿಟ್ಟುಕೊಂಡು ಡೋಸ್‌ಗಳ ನಡುವಿನ ಅಂತರ ಹೆಚ್ಚಿಸುವ ಬಗ್ಗೆ ಸಮಿತಿಯು ಮುಂದಿನ ವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. 4-6 ವಾರಗಳಿದ್ದ ಕೊವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಕಳೆದ ಎಪ್ರಿಲ್‌ನಲ್ಲಿ 6-8 ತಿಂಗಳುಗಳಿಗೆ ಏರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next