ಹನೂರು: ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 3 ವಿದ್ಯಾರ್ಥಿಗಳಲ್ಲಿ ಕೋವಿಡ್ ಪ್ರಕರಣ ದೃಢಪಟ್ಟಿದೆ. ಇದು ತಾಲೂಕಿನಾ ದ್ಯಂತ ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪಿಯುಸಿ ವಿದ್ಯಾರ್ಥಿ ಮನೋಜ್ ಕಿಶೋರ್, 10ನೇ ತರಗತಿ ವಿದ್ಯಾರ್ಥಿ ಭಾನು ಮತ್ತು 9ನೇ ತರಗತಿಯ ಕಿರಣ್ ಕೋವಿಡ್ ಸೋಂಕಿತರಾಗಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯು ವಸತಿ ಶಾಲೆಯಾಗಿದ್ದು, ಶಾಲೆಗಳು ಪ್ರಾರಂಭವಾಗುವ ಮುನ್ನ ಎಲ್ಲಾ ವಿದ್ಯಾರ್ಥಿಗಳ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದೇ ಶಾಲೆಗೆ ದಾಖಲು ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ಒಂದು ವಾರದ ಹಿಂದೆ ಕೆಲ ವಿದ್ಯಾರ್ಥಿಗಳಲ್ಲಿ ನೆಗಡಿ, ಕೆಮ್ಮು, ಶೀತ ಜ್ವರ ಕಂಡುಬಂದ ಹಿನ್ನೆಲೆ ಹನೂರು ಪಟ್ಟಣದ ಕೋವಿಡ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದ ಸ್ವ್ಯಾಬ್ ಮಾದರಿಯಲ್ಲಿ 3 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ.
ಇದನ್ನೂ ಓದಿ:ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ಗೌಡ ನಾಯಕಿ
ಎಲ್ಲಾ ವಿದ್ಯಾರ್ಥಿಳಿಗೂ ಪರೀಕ್ಷೆ:ಶಾಲೆಯ ಮೂವರು ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಡು ತ್ತಿದ್ದಂತೆ ಶಾಲೆಯ ಪ್ರಾಂಶುಪಾಲರು, ಇಲಾಖಾ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಶಾಲೆಗೆ ತೆರಳಿದ ಆರೋಗ್ಯ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿ ತಂಡ 13 ವಿದ್ಯಾರ್ಥಿಗಳ ರ್ಯಾಟ್ ಪರೀಕ್ಷೆ ನಡೆಸಿದ್ದು ಎಲ್ಲಾ 13 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದೆ. 99 ವಿದ್ಯಾರ್ಥಿಗಳಿಂದ ಆರ್ ಟಿಪಿಸಿಆರ್ ಟೆಸ್ಟ್‌ಗೆ ಸ್ವ್ಯಾಬ್ ಪಡೆದಿದ್ದು ಪರೀಕ್ಷೆಗೆ ರವಾನಿಸಲಾಗಿದೆ. ಫಲಿತಾಂಶ ಬರುವವರೆಗೂ 99 ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
3 ಮಕ್ಕಳಿಗೆ ಸೋಂಕು ತಗುಲಿದ್ದರೂ ಶಾಲೆ ಸ್ಥಗಿತ ಇಲ್ಲ
ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ನಿಜ. ಈಗಾಗಲೇ ಶಾಲೆಯ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ ಪ್ರತಿ 2 ದಿನಕ್ಕೊಮ್ಮೆ ಎಲ್ಲಾ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗಿದ್ದು, ಈ ವಸತಿ ಶಾಲೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ತಿಳಿಸಿದ್ದಾರೆ.