Advertisement

ಕೋವಿಡ್ ಕರಿನೆರಳಲೇ ನಗರ ಸಭೆ ಚುನಾವಣೆ

02:47 PM Apr 24, 2021 | Team Udayavani |

ರಾಮನಗರ: ಒಂದೆಡೆ ಕೋವಿಡ್‌ ಸೋಂಕು ಕ್ಷಿಪ್ರಗತಿಯಲ್ಲಿ ವ್ಯಾಪ್ತಿಸುತ್ತಿದೆ. ಇನ್ನೊಂದೆಡೆ ಏ.27ರಂದು ನಡೆಯುವ ನಗರಸಭೆಯ ಚುನಾವಣೆಯ ಕಾವು ಏರುತ್ತಿದೆ. ಸೋಂಕಿನ ಆತಂಕದ ನಡುವೆಯೇ ಮತದಾರರು ಸ್ಥಳೀಯ ನಗರಸಂಸ್ಥೆಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.

Advertisement

ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ಆಡಳಿತ: ಕಳೆದ ಅವಧಿಯಲ್ಲಿ ನಗರಸಭೆಯಲ್ಲಿ 16 ಕಾಂಗ್ರೆಸ್‌, 12 ಜೆಡಿಎಸ್‌, 2 ಬಿಜೆಪಿ ಮತ್ತು 1 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಕಾಂಗ್ರೆಸ್‌ ಆಡಳಿತ ನಡೆಸಿತ್ತು. ಜೆಡಿಎಸ್‌ ಮತ್ತು ಬಿಜೆಪಿ ವಿರೋಧ ಪಕ್ಷದಲ್ಲಿದ್ದವು. ಈ ಬಾರಿ ಚುನಾವಣೆಗೆ ವಾರ್ಡ್‌ಗಳ ಮರು ವಿಂಗಡಣೆಯಾಗಿದೆ. ವಾರ್ಡ್‌ಗಳ ಮೀಸಲಾತಿ ಬದಲಾಗಿದೆ. ಹೀಗಾಗಿ ಕಳೆದ ಬಾರಿಯ ಲೆಕ್ಕಾಚಾರಗಳು ವಕೌìಟ್‌ ಆಗುವುದಿಲ್ಲ. ಮೇಲಾಗಿ ಕಳೆದ ಬಾರಿಯ ಆಡಳಿತದ ಅವಧಿ 2019ರಲ್ಲೇ ಮುಗಿದಿತ್ತು. 2 ವರ್ಷಗಳ ನಂತರ ಚುನಾವಣೆ ಬಂದಿದೆ.

ಈ ಬಾರಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್‌ ಹವಣಿಸುತ್ತಿದೆ. ಅಧಿಕಾರ ಹಿಡಿಯಲು ಜೆಡಿಎಸ್‌ ಮತ್ತು ಬಿಜೆಪಿ ಅಧಿಕಾರ ಹಿಡಿಯಲು ಎಲ್ಲಾ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎಲ್ಲಾ 31 ವಾರ್ಡ್‌ಗಳಲ್ಲೂ ಸ್ಪರ್ಧಿಸಿವೆ. ಬಿಜೆಪಿ 21 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಲ್ಪ ಸಂಖ್ಯಾತರು ಹೆಚ್ಚಾಗಿ ಇರುವ ವಾರ್ಡ್‌ಗಳಲ್ಲಿ ಬಿಜೆಪಿತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ರಾಮನಗರ ನಗರಸಭೆ ಚುನಾವಣೆಯಲ್ಲಿ ಒಟ್ಟಾರೆ ಕಾಂಗ್ರೆಸ್‌ – ಜೆಡಿಎಸ್‌ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕೆಲವು ವಾರ್ಡ್‌ಗಳಲ್ಲಿ ಜೆಡಿಎಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಇನ್ನು ಕೆಲವು ವಾರ್ಡ್‌ಗಳಲ್ಲಿ ಜೆಡಿಎಸ್‌ -ಕಾಂಗ್ರೆಸ್‌-ಬಿಜೆಪಿ ತ್ರಿಕೋನ ಸ್ಪರ್ಧೆ ಇದೆ.

ಎಚ್‌ಡಿಕೆ ಗೈರು, ಕಾಂಗ್ರೆಸ್‌ ಬಲ ಪ್ರದರ್ಶನ, ಬಿಜೆಪಿ ಸರ್ಕಾರ!: ಕೆಲವು ದಿನಗಳ ಹಿಂದೆ ರಾಮನಗರ ನಗರಸಭೆಯ ಚುನಾವಣೆಯ ಬಗ್ಗೆ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಮಾಧ್ಯಮಗಳ ಬಳಿ ಪ್ರತಿಕ್ರಿಯಿಸಿ ಜೆಡಿಎಸ್‌ ಹಣಿಯಲು ಕಾಂಗ್ರೆಸ್‌ನಲ್ಲಿ ಗುಂಪೊಂದು ಹುಟ್ಟಿ ಕೊಂಡಿದೆ ಎಂದಿದ್ದರು. ಚುನಾವಣೆ ಮುಕ್ತವಾಗಿ ನಡೆಯುವ ಸಲುವಾಗಿ ಮತ್ತು ನಗರಸಭೆಯ ಅಧಿಕಾರ ಹಿಡಿಯುವ ಸಲುವಾಗಿ ತಾವೇ ಸ್ವತಃ ಫೀಲ್ಡಿಗಿಳಿಯುವುದಾಗಿ ಹೇಳಿದ್ದರು. ಸ್ವತಃ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರು ಮಾಡಿದ್ದರು. ಆದರೆ, ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಿಂದಲೇ ಪ್ರತಿ ಕ್ಷಣದ ಮಾಹಿತಿ ಪಡೆದುಕೊಂಡು ತಮ್ಮ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಸ್ಥಳೀಯ ಮುಖಂಡರು ಮತ್ತು ಅಭ್ಯರ್ಥಿಗಳೇ ಸ್ವತಃ ತಮ್ಮ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಆದರೆ, ಎಚ್‌.ಡಿ.ಕೆ. ಗೈರು ಮತದಾರರ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದು ಮತ ಎಣಿಕೆಯಲ್ಲೇ ಗೊತ್ತಾಗಬೇಕಾಗಿದೆ. ರಾಮನಗರ ರಾಜಕಾರಣದಲ್ಲಿ ನಗರಸಭೆಯಮಾಜಿ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೆಸರು ಆಟಕ್ಕೂಉಂಟು, ಲೆಕ್ಕಕ್ಕೂ ಉಂಟು. ಅವರು ಈ ಬಾರಿ 5ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಗುಂಪಿನಲ್ಲಿ ಇವರು ಸೇರಿದಂತೆ ಸಂಸದ ಡಿ.ಕೆ.ಸುರೇಶ್‌, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್‌ ಜಿಯಾವುಲ್ಲಾ ಹೀಗೆ ಪ್ರಭಾವಿ ಹಸರುಗಳೇ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಬಿಜೆಪಿ ಗೆಲುವಿಗೆ ಸಚಿವರೇ ಹಾಜರ್‌!: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ರಾಮನಗರ ಮತ್ತು ಚನ್ನಪಟ್ಟಣ ನಗರಗಳ ಕುಡಿಯುವ ನೀರಿನ ಯೋಜನೆ ಸೇರಿ ನನೆಗುದಿಗೆ ಬಿದ್ದಿದ್ದ ಎಲ್ಲಾ ಯೋಜನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಜೀವ ತುಂಬಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ಹೇಳಿಕೆ.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರಿಗೆ ಯಾವ ತೊಂದರೆಯೂ ಇಲ್ಲದೆ ಚಿಕಿತ್ಸಾ ಸೌಲಭ್ಯ ಸಿಗುತ್ತಿದೆ. ಇವೆಲ್ಲ ಬಿಜೆಪಿಗೆ ಇರುವ ಕಾಳಜಿ ಮತ್ತು ಬದ್ಧತೆ. ಅಧಿಕಾರಕ್ಕೆ ಬಂದರೆ ಇಲ್ಲಿಯ ಜನತೆ ಇನ್ನು ಹೆಚ್ಚಿನದನ್ನು

ನಿರೀಕ್ಷಿಸಬಹುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ಹೇಳಿದ್ದಾರೆ. ಈಇಬ್ಬರು ನಾಯಕರು ಸ್ವತಃ ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಸವಾಲು ಎಸೆದಿದ್ದಾರೆ.

27ರಂದು ಮತದಾನ: ರಾಮನಗರ ನಗರಸಭೆಗೆ ಇದೇ ಏ.27ರಂದು ಮತದಾನ ನಡೆಯಲಿದೆ. ಕೋವಿಡ್‌ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಎಲ್ಲಾ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಗುಂಪು ಕಟ್ಟಿಕೊಂಡು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ.ಏ.30ರಂದು ಮತ ಎಣಿಕೆ ನಡೆಯಲಿದ್ದು, ಎಲ್ಲಾ ಮತದಾರರ ಹಣೆಬರಹ ಅಂದು ಗೊತ್ತಾಗಲಿದೆ.

ಮೂರು ಪಕ್ಷಗಳಲ್ಲಿ ಯಾರು ಹಿತವರು? :

ಈ ಪ್ರಶ್ನೆ ಸದ್ಯ ನಗರಸಭೆ ವ್ಯಾಪ್ತಿಯ ಮತದಾರರಲ್ಲಿ ಮನೆ ಮಾಡಿದೆ. ಕಳೆದ ಬಾರಿ ಅಧಿಕಾರ ಚಲಾಯಿಸಿದ ಕಾಂಗ್ರೆಸ್‌ ಮೂಲ ಸೌಕರ್ಯಗಳ ವೃದ್ಧಿಗೆ ಶ್ರಮಿಸಲಿಲ್ಲ. ನಗರಸಭೆಯಲ್ಲಿ ಅವ್ಯವಹಾರ ತಡೆಯಲಿಲ್ಲ. ಖಾತೆಗಳ ವಿಚಾರದಲ್ಲಿ ರಾಜ್ಯ ಮಟ್ಟದ ಸುದ್ದಿಗಳಾಗಿದ್ದವು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದರೂ ಅಭಿವೃದ್ಧಿಗೆಶಾಸಕರು ಸಹಕರಿಸುತ್ತಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಹೊಣೆ ಹೊರಿಸಿ ಕೈತೊಳೆದುಕೊಂಡು ಬಿಟ್ಟಿರು ಎಂಬ ಅಪವಾದಗಳಿವೆ. ಶಾಸಕರಾಗಿ ಎಚ್‌.ಡಿ.ಕುಮಾರಸ್ವಾಮಿ ನಗರವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಹೆಚ್ಚಿಗೆ ಶ್ರಮಿಸಲಿಲ್ಲ. ತಾವು ಮೊದಲು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಾಡಿದ ಕಾಮಗಾರಿಗಳ ಬಗ್ಗೆಯೇ ಮಾತನಾಡಿದರೆ ಹೊರತು ಪ್ರಸಕ್ತ ಇರುವ ಸಮಸ್ಯೆಗಳ ಪರಿಹಾರಕ್ಕೆ ಕನಿಷ್ಠ ಪ್ರಯತ್ನ ಮಾಡಿದರಷ್ಟೇ ಎಂಬ ಆರೋಪವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿ ನಾಯಕರು ಸಂಘಟಿತ ಪ್ರಯತ್ನ ನಡೆಸಲಿಲ್ಲ ಎಂಬ ಅಪಸ್ವರ ಕೇಳಿ ಬರುತ್ತಿದೆ. ಮೂಲ ಕಾರ್ಯಕರ್ತರ ಬಣ, ರುದ್ರೇಶ್‌ ಬಣ ಅಂತೆಲ್ಲ ರಾಡಿ ಮಾಡಿಕೊಂಡಿದ್ದಾರೆ. ಹೀಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳ ಪೈಕಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾರು ಹಿತವರು ನಮಗೆ ಎಂಬ ಪ್ರಶ್ನೆ ತಮ್ಮಲ್ಲಿರುವುದಾಗಿ ಮತದಾರರು ಪ್ರತಿಕ್ರಿಯಿಸಿದ್ದಾರೆ.

 

ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next