Advertisement

ಗ್ರಂಥಾಲಯಕ್ಕೂ ಕೋವಿಡ್ ಕುತ್ತು

05:14 PM Aug 17, 2020 | Suhan S |

ಚಿಕ್ಕಮಗಳೂರು: ಜನರ ಜ್ಞಾನಾರ್ಜನೆಯ ಜಿಲ್ಲಾ ಕೇಂದ್ರ ಗಂಥಾಲಯ ಕೋವಿಡ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ನಾಲ್ಕು ತಿಂಗಳಿಂದ ಓದುಗರಿಲ್ಲದೆ ಭಣಗುಡುತ್ತಿದೆ.

Advertisement

ಪ್ರತೀ ದಿನ ಓದುಗರಿಂದ ತುಂಬಿರುತ್ತಿದ್ದ ಗ್ರಂಥಾಲಯಕ್ಕೆ ಸರ್ಕಾರದ ಆದೇಶದಂತೆ ಸಾರ್ವಜನಿಕರ ಪ್ರವೇಶ ನಿರ್ಬಂಧಿ ಸಲಾಗಿದ್ದು, ಕೇಂದ್ರ ಗ್ರಂಥಾಲಯ ಸೇರಿದಂತೆ ಸಂಚಾರಿ ಗ್ರಂಥಾಲಯ, ಜೈಲು ಗ್ರಂಥಾಲಯ, ಕನ್ನಡ ಸಾಹಿತ್ಯ ಪರಿಷತ್‌ ಗ್ರಂಥಾಲಯ ಸದ್ಯ ಸಾರ್ವಜನಿಕರಿಗೆ ಎಟುಕದಂತಾಗಿದೆ.

ಸಾಹಿತ್ಯ, ಸಂಸ್ಕೃತಿ, ಇತಿಹಾಸ, ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಶ್ರೇಷ್ಠ ಸಾಹಿತಿಗಳು, ಕಾದಂಬರಿಕಾರರು, ನಾಟಕಕಾರರು ರಚಿಸಿದ ಗ್ರಂಥಗಳು ಸೇರಿದಂತೆ ಜಿಲ್ಲಾದ್ಯಂತ 1,20,000 ವಿವಿಧ ಗ್ರಂಥಗಳಿದ್ದು, ಸಾವಿರಾರು ಜನರು ಪ್ರತಿನಿತ್ಯ ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ, ಕೋವಿಡ್ ಸೋಂಕು ಓದುಗರ ಮೇಲೂ ಪ್ರಭಾವ ಭೀರಿದೆ. ಓದುಗರಿಲ್ಲದೆ ಪುಸ್ತಕ ಮತ್ತು ಪೀಠೊಪಕರಣಗಳನ್ನು ಧೂಳು ಮತ್ತು ಬ್ಯಾಕ್ಟೀರಿಯದಿಂದ ಹಾಳಾಗುವುದನ್ನು ತಪ್ಪಿಸಲು ಗ್ರಂಥಾಲಯ ಸಿಬ್ಬಂದಿ ರಾಸಾಯನಿಕ ಬಳಸಿ ಗ್ರಂಥ ಸಂರಕ್ಷಣೆ ಮಾಡುತ್ತಿದ್ದಾರೆ.

ಸಂಚಾರಿ ಗ್ರಂಥಾಲಯ ಸದ್ಯ ಬಂದ್‌:  ಜಿಲ್ಲೆಯಲ್ಲಿ ಸಂಚಾರಿ ಗ್ರಂಥಾಲಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಇದೆ. ಚಿಕ್ಕಮಗಳೂರು ನಗರದ ಉಪ್ಪಳ್ಳಿ, ದಂಟರಮಕ್ಕಿ, ಜಯನಗರ, ಕೆ.ಆರ್‌. ಪೇಟೆ ಸರ್ಕಲ್‌, ಆದಿಶಕ್ತಿನಗರ, ಗೌರಿಕಾಲುವೆ ಸೇರಿದಂತೆ ನಗರದ 16 ಸ್ಥಳಗಳಲ್ಲಿ ಪ್ರತೀ ವಾರ ಸಂಚಾರಿ ಗ್ರಂಥಾಲಯ ಸೇವೆ ನೀಡುತ್ತಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಂಚಾರಿ ಗ್ರಂಥಾಲಯವನ್ನು ಬಂದ್‌ ಮಾಡಲಾಗಿದೆ.

ಗ್ರಂಥಾಲಯ ಸದಸ್ಯರಾಗಿ 9 ಸಾವಿರ ಜನರು ನೋಂದಣಿ: ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ 9 ಸಾವಿರ ಜನರು ಸದಸ್ಯರಾಗಿ ನೋಂದಾಯಿಸಿಕೊಂಡು ಕಾರ್ಡು ಹೊಂದಿದ್ದು, ಸದಸ್ಯರು ಮನೆಯಲ್ಲಿ ಓದಲು 15 ದಿನಗಳ ಕಾಲಾವ ಧಿಗೆ ಪುಸ್ತಕಗಳನ್ನು ನೀಡಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಡುದಾರರಿಗೂ ಪುಸ್ತಕ ನೀಡುವುದನ್ನು ಸದ್ಯ ನಿಲ್ಲಿಸಲಾಗಿದೆ.

Advertisement

ಗ್ರಂಥಾಲಯ ಸಪ್ತಾಹಕ್ಕೂ ಕೋವಿಡ್ ಅಡ್ಡಿ: ಪ್ರತೀ ವರ್ಷ ನ. 14ರಿಂದ 20ರ ವರೆಗೂ ಗ್ರಂಥಾಲಯ ಸಪ್ತಾಹವನ್ನು ಆಯೋಜಿಲಾಗುತ್ತದೆ. ಆ. 12ರಂದು ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಗ್ರಂಥಾಲಯ ಸಪ್ತಾಹ ಮತ್ತು ಗ್ರಂಥಪಾಲಕರ ದಿನಾಚರಣೆಯನ್ನು ಇಲಾಖೆಯಿಂದ ಸಾಂಕೇತಿಕವಾಗಿ ಆಚರಿಸಲಾಯಿತು.

ಜಿಲ್ಲಾ ಕೇಂದ್ರ ಗ್ರಂಥಾಲಯ ಡಿಜಟಲೀಕರಣ: ಜಿಲ್ಲಾ ಗ್ರಂಥಾಲಯವನ್ನು ಆಧುನಿಕತೆಗೆ ಹೊಂದಿಕೊಳ್ಳುವಂತೆ ಡಿಜಿಟಲೀಕರಣ ಮಾಡಲು ಮುಂದಾಗಿದ್ದು, ಈಗಾಗಲೇ ಶೇ.80ರಷ್ಟು ಕಾರ್ಯ ಮುಕ್ತಾಯಗೊಂಡಿದೆ. ಇಷ್ಟರೊಳಗೆ ಡಿಜಿಟಲೀಕರಣ ಕಾರ್ಯ ಪೂರ್ಣಗೊಳ್ಳಬೇಕಿತ್ತು. ಕೋವಿಡ್  ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಎರಡು-ಮೂರು ತಿಂಗಳಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.

ಕಟ್ಟಡ ವಿಸ್ತರಣೆ: ಸದ್ಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆಗೆ ಅನುಗುಣವಾಗಿ ಸ್ಥಳಾವಕಾಶದ ಕೊರತೆಯಿದ್ದು, ಗ್ರಂಥಾಲಯದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸುಮಾರು 500 ಜನರು ಕುಳಿತು ಓದಲು ಅನುಕೂಲವಾಗುವ ದೃಷ್ಟಿಯಿಂದ ಕಟ್ಟಡ ವಿಸ್ತರಣೆಗೆ ಗ್ರಂಥಾಲಯ ಇಲಾಖೆ ಮುಂದಾಗಿದ್ದು, ಸದ್ಯದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಗುದ್ದಲಿಪೂಜೆ ನೆರವೇರಲಿದೆ.

ಶತಮಾನದ ಹೊಸ್ತಿಲಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ :  1929ರಲ್ಲಿ ಅಂದಿನ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯಲ್ಲಿ ವಾಚನಾಲಯಆರಂಭವಾಗಿದ್ದು, ಇಂದು ಜಿಲ್ಲಾ ಕೇಂದ್ರ ಗ್ರಂಥಾಲಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶತಮಾನದ ಹೊಸ್ತಿಲಲ್ಲಿದೆ.

ಕೋವಿಡ್ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. -ಜಿ. ಉಮೇಶ್‌, ಜಿಲ್ಲಾ ಗ್ರಂಥಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next