Advertisement

ಗಣೇಶೋತ್ಸವಕ್ಕೆ ಕೋವಿಡ್ ವಿಘ್ನ!

02:06 PM Aug 09, 2020 | Suhan S |

ಗದಗ: ಪ್ರಥಮ ಪೂಜಿತ ವಿನಾಯಕ ಚೌತಿ ಆಚರಣೆಗೆ ಇನ್ನೂ 20 ದಿನಗಳು ಬಾಕಿ ಉಳಿದಿದ್ದು, ಜಿಲ್ಲೆಯಲ್ಲಿ ಗಣೇಶ ಮೂರ್ತಿ ತಯಾರಿಕೆ ಬರದಿಂದ ಸಾಗಿದೆ. ಈ ನಡುವೆ ಎಲ್ಲೆಡೆ ಕೋವಿಡ್ ಸೋಂಕು ವ್ಯಾಪಿಸುತ್ತಿರುವುದರಿಂದ ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸರಕಾರ ನಿರ್ಬಂಧ ಹೇರಿರುವುದು ಮೂರ್ತಿಗಳ ಮಾರಾಟಕ್ಕೆ ವಿಘ್ನ ಎದುರಾಗಿದೆ.

Advertisement

ದಿನ ಕಳೆದಂತೆ ತನ್ನ ಕಬಂಧ ಬಾಹು ಚಾಚುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದೆ. ಪರಿಣಾಮ ಗಣೇಶೋತ್ಸವ ಆಚರಣೆಗೆ ಇನ್ನೂ 15 ದಿನಗಳು ಬಾಕಿ ಇದ್ದರೂ, ಜಿಲ್ಲೆಯಲ್ಲಿ ಶೇ. 30ರಷ್ಟೂ ವಿನಾಯಕ ಮೂರ್ತಿಗಳು ಬುಕ್‌ ಆಗದಿರುವುದು ಕಲಾವಿದರನ್ನು ಆತಂಕಕ್ಕೆ ದೂಡಿದೆ.

350 ಕುಟುಂಬಗಳಿಗೆ ಆತಂಕ: ಅವಳಿ ನಗರವೊಂದರಲ್ಲೇ ಪ್ರತಿ ವರ್ಷ 150 ಸಾರ್ವಜನಿಕ ಹಾಗೂ 20 ಸಾವಿರ ಮನೆಗಳಲ್ಲಿ ಹಾಗೂ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ 3 ಸಾವಿರ ಸೇರಿದಂತೆ ಒಟ್ಟು 3.5 ಲಕ್ಷ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿ ವರ್ಷದಂತೆ 5 ತಿಂಗಳ ಮುನ್ನವೇ ವಿನಾಯಕ ಮೂರ್ತಿಗಳ ತಯಾರಿಕೆ ಆರಂಭಿಸಲಾಗಿದೆ.

ನಗರದ ಕಾಗದಗೇರಿ, ಟ್ಯಾಗೋರ ರಸ್ತೆ, ಗಂಜಿ ಬಸವೇಶ್ವರ ವೃತ್ತ, ಸುಣ್ಣದ ಬಟ್ಟಿ, ರಾಚೋಟೇಶ್ವರ ದೇವಸ್ಥಾನದ ಬಳಿ, ಹುಡ್ಕೊà ಕಾಲನಿ, ಬೆಟಗೇರಿಯ ತೆಂಗಿನಕಾಯಿ ಬಜಾರ, ನರಸಾಪುರ, ಮುಳಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಮೂರ್ತಿಗಳ ಗಾತ್ರ ಹಾಗೂ ವಿನ್ಯಾಸಕ್ಕೆ ತಕ್ಕಂತೆ ದರದಲ್ಲಿ ತಿಂಗಳ ಮುನ್ನವೇ ಶೇ. 50ರಷ್ಟು ಮುಂಗಡ ಪಡೆದು ಕಾಯ್ದಿರಿಸಲ್ಪಡುತ್ತಿದ್ದವು. ಆದರೆ, ಗಣೇಶೋತ್ಸವಕ್ಕೆ ಕೋವಿಡ್ ಕಂಠಕವಾಗಿದೆ. ತಿಂಗಳುಗಳ ಕಾಲ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರ ಬಾಳಲ್ಲಿ ಕರಿನೆರಳು ಆವರಿಸಿದೆ ಎಂಬುದು ಕಲಾವಿದರ ಅಳಲು.

ಮಹಾರಾಷ್ಟ್ರ ಮಾದರಿಯಾಗಲಿ: ನೆರೆ ಮಹಾರಾಷ್ಟ್ರದಲ್ಲೂ ಕೋವಿಡ್ ಸೋಂಕು ವ್ಯಾಪಿಸಿದೆ. ಅಲ್ಲಿನ ಸರಕಾರ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಷರತ್ತು ಬದ್ಧ ಅವಕಾಶ ನೀಡಿದೆ. ಸಾಮಾಜಿಕ ಅಂತರದೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಅದೇ ನಿಯಮಗಳನ್ನು ರಾಜ್ಯದಲ್ಲೂ ವಿಧಿಸಿ, ಅನುಮತಿ ನೀಡಬೇಕು. ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುವ ಬೃಹತ್‌ ಮೂರ್ತಿಗಳ ಮಾರಾಟದಿಂದಲೇ ಕಲಾವಿದರ ಹೊಟ್ಟೆ ತುಂಬುತ್ತದೆ. ಕಲಾವಿದರ ಹಿತದೃಷ್ಟಿಯಿಂದ ಸರಕಾರ ನಿಮಯಗಳನ್ನು ಸಡಿಲಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

Advertisement

ದಶಕಗಳ ಹಿಂದೆ ಗದಗಿನಿಂದಲೇ ಆರಂಭಗೊಂಡ ಹೋರಾಟದ ಫಲವಾಗಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಗಣೇಶ ಮೂರ್ತಿಗಳನ್ನು ನಿಷೇಧಿಸಿ, ಸರಕಾರ ರಾಜ್ಯಾದ್ಯಂತ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಆದೇಶಿಸಿದೆ. ಆದರೆ ಸದ್ಯ ಕೋವಿಡ್ ಹೆಮ್ಮಾರಿಯಿಂದಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಕಲಾವಿದರೂ ಬೀದಿಗೆ ಬರುವಂತಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲೂ ಸರಕಾರ ಗಣೇಶ ಮೂರ್ತಿ ಕಲಾವಿದರಿಗೆ ಯಾವುದೇ ರೀತಿಯಲ್ಲಿ ಆರ್ಥಿಕ ನೆರವಾಗಿಲ್ಲ. ಸದ್ಯ ಗಣೇಶೋತ್ಸವ ಆಚರಣೆಗೆ ಕೊಂಚ ಸಡಿಲಿಕೆ ನೀಡಬೇಕು. -ಮುತ್ತಣ್ಣ ಭರಡಿ, ಜಿಲ್ಲಾ ಕಾರ್ಯದರ್ಶಿ, ಮಣ್ಣಿನ ಗಣೇಶ ಮೂರ್ತಿ ತಯಾರಕರ ಸಂಘ

ಈ ಬಾರಿ ಗಣೇಶ ಮೂರ್ತಿಗಳನ್ನು 2 ಅಡಿಗೆ ಸೀಮಿತಗೊಳಿಸಲಾಗಿದ್ದು, ಕೇಳುವವರೇ ಇಲ್ಲದಂತಾಗಿದೆ. ಈ ಬಾರಿ ದುಡಿಮೆಗೆ ಕೂಲಿಯೂ ಸಿಗುವಂತಿಲ್ಲ. ವಿವಿಧ ವೃತ್ತಿದಾರರಿಗೆ ನೀಡಿರುವಂತೆ ಸರಕಾರ ಗಣೇಶ ಮೂರ್ತಿ ಕಲಾವಿದರಿಗೂ ಸರಕಾರ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು. -ಪ್ರಕಾಶ ಕುಂಬಾರ, ಗಣೇಶ ಮೂರ್ತಿ ತಯಾರಕ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next