ಚಿಕ್ಕಮಗಳೂರು: ಕೋವಿಡ್ ಸೋಂಕು ಅನೇಕ ಸಂಕಷ್ಟಗಳನ್ನು ತಂದೊಡ್ಡಿದೆ. ವಿದ್ಯಾಥಿಗಳ ಭವಿಷ್ಯವನ್ನು ಕತ್ತಲಿನಟ್ಟಿದೆ. ಕೋವಿಡ್ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಉತೀರ್ಣ ಗೊಳಿಸಲಾಗಿದೆ.
ನಡೆಯಬೇಕಾಗಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ. ಸರ್ಕಾರ ಯಾವುದೇ ಸಂದರ್ಭದಲ್ಲಿ ಪರೀಕ್ಷೆಯನ್ನು ನಡೆಸಬಹುದಾಗಿದ್ದು ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದರೆ, ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಗಳು ಪೂರ್ಣಗೊಂಡು ಯೂಟ್ಯೂಬ್‌ನಲ್ಲಿ ವಿಡಿಯೋದಲ್ಲಿ ರಿವಿಜನ್ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ನಡೆಸುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳ ವಿಭಾಗದ ಗುಂಪನ್ನು ರಚಿಸಿದ್ದು, ಆ ಗುಂಪಿಗೆ ವಾಟ್ಸ್ ಆ್ಯಪ್‌ಗೆ ಪ್ರಶ್ನೆ ಪತ್ರಿಕೆಯನ್ನು ಹಾಕಲಾಗುತ್ತದೆ. ಉತ್ತರ ಬರೆದು ಪುನಃ ವಾಟ್ಸ್ ಆ್ಯಪ್‌ಗೆ ಹಾಕಿದರೆ, ತಪ್ಪುಗಳನ್ನು ಶಿಕ್ಷಕರು ತಿದ್ದಿ ಹೇಳುವ ಕೆಲಸ ಮಾಡುತ್ತಿದ್ದಾರೆ.
ವಾಟ್ಸ್ ಆ್ಯಪ್ ಮೊಬೈಲ್ ಹೊಂದಿರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಮುಟ್ಟಿಸಿದ್ದು, ಅವರು ಉತ್ತರ ಬರೆದು ಉತ್ತರ ಪತ್ರಿಕೆಯನ್ನು ಶಾಲೆಗಳಿಗೆ ತಲುಪಿಸಬೇಕು. ಶಾಲೆ ಆರಂಭವಾಗುತ್ತಿದ್ದಂತೆ ಮೌಲ್ಯಮಾಪನ ನಡೆಸಿ ತಪ್ಪು ಬರೆದಿರುವ ಉತ್ತರಗಳಿಗೆ, ಹೇಗೆ ಉತ್ತರಿಸಬೇಕೆಂಬ ಸಲಹೆಗಳನ್ನು ನೀಡುವ ಮೂಲಕ ಮುಖ್ಯ ಪರೀಕ್ಷೆಗೆ ಶಿಕ್ಷಕರು ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದ್ದಾರೆ. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಬೋಧನೆ ಪೂರ್ಣಗೊಂಡಿದ್ದರಿಂದ ಆನ್‌ಲೈನ್ ಮೂಲಕ ರಿವಿಜನ್ ಮಾಡಲಾಗುತ್ತಿದೆ. ನೋಟ್ಸ್ ನೀಡಲು ಸಾಧ್ಯವಾಗಿರಲಿಲ್ಲ, ಹಾಗಾಗಿ ನೋಟ್ಸ್ ರೆಡಿಮಾಡಿಕೊಂಡು ಜೆರಾಕ್ಸ್ ಪ್ರತಿಗಳನ್ನು ವಿದ್ಯಾಥಿಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಬಂದಾಗ ತಮಗೆ ಇಷ್ಟವಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಎಷ್ಟೊತ್ತಿಗಾದರೂ ಪಾಠ ಕೇಳುವ ಅವಕಾಶವನ್ನು ಪಪೂ ಶಿಕ್ಷಣ ಇಲಾಖೆ ಕಲ್ಪಿಸಿಕೊಟ್ಟಿದೆ ಎಂದು ಉಪನ್ಯಾಸಕರು ತಿಳಿಸಿದರು.
ಪಪೂ ಶಿಕ್ಷಣ ಇಲಾಖೆ ಆನ್‌ಲೈನ್ ಪಾಠವನ್ನು ಒಂದು ವಿಷಯವನ್ನು ಒಂದು ಜಿಲ್ಲೆಯವರಿಗೆ ವಹಿಸಿಕೊಡಲಾಗಿತ್ತು. ಕನ್ನಡ ವಿಷಯ ಬೋಧನೆಯನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ವಹಿಸಿಕೊಡಲಾಗಿತ್ತು. ಇಲಾಖೆ ಅ ಧಿಕಾರಿಗಳು ಕನ್ನಡ ಶಿಕ್ಷಕರೊಬ್ಬರನ್ನು ಆಯ್ಕೆ ಮಾಡಿಕೊಂಡು ಕನ್ನಡ ವಿಷಯ ಬೋ ಧಿಸಿ ಅದರ ರೆಕಾರ್ಡ್ ಮಾಡಿಕೊಂಡು ಪಿಯು ಬೋರ್ಡಿಗೆ ಕಳುಹಿಸಿಕೊಡಲಾಗಿತ್ತು. ಶಿಕ್ಷಣ ಇಲಾಖೆ ನಿರ್ದೇಶನದಂತೆ ವಿವಿಧ ಜಿಲ್ಲೆಗಳಿಂದ ಒಂದೊಂದು ವಿಷಯಗಳನ್ನು ವಿಡಿಯೋ ಮಾಡಿಸಿ ಯುಟ್ಯೂಬ್‌ನಲ್ಲಿ ಶಿಕ್ಷಣ ಇಲಾಖೆ ಅಪ್‌ಲೋಡ್ ಮಾಡಿದ್ದು, ವಿದ್ಯಾರ್ಥಿಗಳು ತಮ್ಮಗೆ ಬೇಕಾದಾಗ ಮೊಬೈಲ್ ಮೂಲಕ ತರಗತಿಗಳನ್ನು ಕೇಳಬಹುದಾಗಿದೆ. ಇದನ್ನು ಸಬೋ ಕ್ಲಾಸಸ್ ಎಂದು ಕರೆಯಲಾಗುತಿದೆ. ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಪಿಯು ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಉಪನ್ಯಾಸಕರು ತಿಳಿಸಿದರು.