Advertisement
ಬೆಂಗಳೂರು: ರಜಾ ದಿನಗಳು ಬಂತೆಂದರೆ ಶಾಪಿಂಗ್ ಮಾಲ್‌ಗಳಲ್ಲೇ ಕಾಲ ಕಳೆಯುತ್ತಿದ್ದ ಜನ ಈಗ ಕಣ್ಮರೆಯಾಗಿದ್ದಾರೆ. ಬಟ್ಟೆ, ಪಾದರಕ್ಷೆ, ಸಿನೆಮಾ ವೀಕ್ಷಣೆ ಹೀಗೆ ಪ್ರತಿಯೊಂದಕ್ಕೂ ಮಾಲ್‌ಗಳನ್ನೇ ನೆಚ್ಚಿನ ತಾಣವಾಗಿಸಿಕೊಂಡಿದ್ದ ಜನ ಇದೀಗ ಮಾಲ್ ಸಂಸ್ಕೃತಿಯಿಂದ ವಿಮುಕ್ತರಾಗುತ್ತಿದ್ದಾರೆ. ಹೀಗಾಗಿಯೇ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿಯೇ ಮಳಿಗೆಗಳು ಖಾಲಿಯಾಗಿದ್ದು, ನಗರ ಶಾಪಿಂಗ್ ಮಾಲ್‌ಗಳಲ್ಲಿ ಶೇ. 15.6 ಮಳಿಗೆಗಳು ಖಾಲಿಯಿವೆ. ಒಂದೇ ಸೂರಿನಲ್ಲಿ ಎಲ್ಲ ವಸ್ತುಗಳನ್ನು ಖರೀದಿಸುವುದರ ಜತೆಗೆ ತಮ್ಮ ನೆಚ್ಚಿನವರೊಂದಿಗೆ ಸ್ವಲ್ಪ ಸಮಯ ಕಳೆಯುವ ಉದ್ದೇಶದಿಂದ ಜನರು ಶಾಪಿಂಗ್ ಮಾಲ್‌ಗಳತ್ತ ಬರುತ್ತಿದ್ದರು. ಆದರೆ 2020ರಲ್ಲಿ ಕೊರೊನಾ ಸೋಂಕು ಸೃಷ್ಟಿಸಿದ ಆತಂಕ, ಲಾಕ್‌ಡೌನ್ ಸೇರಿ ಇನ್ನಿತರ ಕ್ರಮಗಳಿಂದಾಗಿ ಜನರು ಮನೆಯಿಂದ ಹೊರಬರದ ಮನಸ್ಥಿತಿಗೆ ತಲುಪಿದ್ದಾರೆ. ಅದರಲ್ಲೂ 2020 ಮತ್ತು 2021ರಲ್ಲಿನ ಕಾಣಿಸಿಕೊಂಡ ಕೊರೊನಾ ಎರಡೂ ಅಲೆಗಳಿಂದಾಗಿ ಜನರು ಬೆಂಗಳೂರನ್ನೇ ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ನಂತರವೂ ನಗರದ ಶಾಪಿಂಗ್ ಮಾಲ್‌ಗಳಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಅದರ ಜತೆಗೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಇ-ಕಾಮರ್ಸ್ ಕ್ಷೇತ್ರ, ಒಟಿಟಿಯಂತಹ ವಿನೂ ತನ ವೇದಿಕೆಗಳ ಸೃಷ್ಟಿಯಿಂ ದಾಗಿ ಬೆಂಗಳೂರಿನ ಶಾಪಿಂಗ್ ಮಾಲ್‌ಗಳಲ್ಲಿನ ಮಳಿಗೆಗಳು ಖಾಲಿಯಾಗುವಂತಾಗಿದೆ.
Related Articles
Advertisement
ನಗರ ಖಾಲಿ ಮಾಡಿದ ಜನರು : 2020ರ ಮಾರ್ಚ್ ವೇಳೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾದ ನಂತರ ಲಾಕ್‌ಡೌನ್ ಘೋಷಿಸಲಾಯಿತು. ಅದರಿಂದ ಎಲ್ಲ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುವಂತಾಯಿತು. ಜತೆಗೆ ಕೊರೊನಾ ಭೀತಿ ಹಾಗೂ ಜೀವನ ಸಾಗಿಸುವುದು ಕಷ್ಟ ಎನ್ನುವಂತಾದ ಕಾರಣ ಜನರು ಬೆಂಗಳೂರನ್ನು ತೊರೆಯಲಾರಂಭಿಸಿದರು. 1.20 ಕೋಟಿ ಜನಸಂಖ್ಯೆಯಿದ್ದ ಬೆಂಗಳೂರಿನಲ್ಲಿ ಕೊರೊನಾ ಮೊದಲ ಲಾಕ್‌ಡೌನ್ ಅವಧಿಯಲ್ಲಿ 20 ಲಕ್ಷಕ್ಕೂ ಹೆಚ್ಚಿನ ಜನರು ನಗರ ತೊರೆದು ತಮ್ಮ ಊರುಗಳಿಗೆ ತೆರಳಿದರು. ಅದೇ ರೀತಿ 2ನೇ ಲಾಕ್‌ಡೌನ್ ಅವಧಿಯಲ್ಲೂ 10 ಲಕ್ಷಕ್ಕೂ ಹೆಚ್ಚಿನ ಜನ ಮಹಾನಗರವನ್ನು ತೊರೆದರು. ಇದು ನಗರದ ಶಾಪಿಂಗ್ ಮಾಲ್ ಸೇರಿ ಎಲ್ಲ ರೀತಿಯ ವ್ಯಾಪಾರಕ್ಕೂ ಹೊಡೆತ ಬೀಳುವಂತಾಯಿತು.
ಕೊರೊನಾ:ವ್ಯಾಪಾರಕ್ಕೆ ಕುತ್ತು: 2020 ಮತ್ತು 2021ರ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್ ಸೇರಿ ಇನ್ನಿತರ ಕ್ರಮಗಳಿಂದಾಗಿ ಬೆಂಗಳೂರಿನ ಹಲವು ಉದ್ಯಮಗಳಿಗೆ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ನಷ್ಟವುಂಟಾಗಿದೆ. ಅದರಲ್ಲೂ ಶಾಪಿಂಗ್ ಮಾಲ್ ಸೇರಿ ಸಗಟು ವ್ಯಾಪಾರಕ್ಕೆ 50 ಸಾವಿರ ಕೋಟಿ ರೂ.ಗೂ ಹೆಚ್ಚಿನ ವ್ಯಾಪಾರ ನಷ್ಟವುಂಟಾಗುವಂತಾಗಿತ್ತು. ಎರಡೂ ವರ್ಷಗಳಲ್ಲಿ 6 ತಿಂಗಳಿಗೂ ಹೆಚ್ಚಿನ ಕಾಲ ಶಾಪಿಂಗ್ ಮಾಲ್ ಗಳು ಕಾರ್ಯನಿರ್ವಹಿಸದ ಕಾರಣ ಮಳಿಗೆದಾರರು ತಮ್ಮ ಠೇವಣಿ ಹಿಂಪಡೆದು ಮಳಿಗೆ ಖಾಲಿ ಮಾಡಿದರು. 2020 ಮತ್ತು 2021ರಲ್ಲಿಯೇ ಶೇ. 70ಕ್ಕೂ ಹೆಚ್ಚಿನ ಮಳಿಗೆದಾರರು ವ್ಯಾಪಾರದಿಂದ ವಿಮುಖರಾ ಗುವಂತಾಗಿತ್ತು.
ಆನ್‌ಲೈನ್ ವ್ಯಾಪಾರದಲ್ಲಿ ಏರಿಕೆ : ಶಾಪಿಂಗ್ ಮಾಲ್ ಸೇರಿ ಸಗಟು ವ್ಯಾಪಾರಗಳತ್ತ ಜನರು ಮುಖ ಮಾಡದಿರುವ ಇನ್ನೊಂದು ಪ್ರಮುಖ ಕಾರಣ ಆನ್‌ಲೈನ್ ಶಾಪಿಂಗ್(ಇ ಕಾಮರ್ಸ್) ಕಡೆಗೆ ಗ್ರಾಹಕರು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು. ಬಟ್ಟೆ, ಪಾದರಕ್ಷೆಗಳಿಂದ ಎಲೆಕ್ಟ್ರಾನಿಕ್ ವಸ್ತುಗಳು, ತರಕಾರಿ ಹಣ್ಣುಗಳಿಂದ ಸಿದ್ಧ ಆಹಾರಗಳನ್ನೆಲ್ಲವನ್ನು ಕುಳಿತಲ್ಲಿಯೇ ತರಿಸಿಕೊಳ್ಳಬಹುದು. ಹೀಗಾಗಿ ಜನರು ಸಾಲುಸಾಲು ರಜೆಗಳಿದ್ದರೂ ಮನೆಯಿಂದ ಹೊರಬರದೆ ಮನೆಯಲ್ಲಿ ಕುಳಿತೇ ಎಲ್ಲವನ್ನೂ ತರಿಸಿಕೊಳ್ಳುತ್ತಾರೆ. ಅದರ ಜತೆಗೆ ಹಬ್ಬಗಳು ಸೇರಿ ಇನ್ನಿತರ ಪ್ರಮುಖ ದಿನಗಳಲ್ಲಿ ವಸ್ತುಗಳ ಮೇಲೆ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ. ಹಾಗೆಯೇ, ಕಳೆದ ಐದಾರು ವರ್ಷಗಳಿಂದ ಸ್ಮಾರ್ಟ್‌ಫೋನ್ ಮತ್ತು ಅಂತರ್ಜಾಲ ಬಳಕೆಯು ಹೆಚ್ಚಾಗಿದೆ. ಶೇ. 95ಕ್ಕೂ ಹೆಚ್ಚಿನ ಮಂದಿಯ ಬಳಿ ಸ್ಮಾರ್ಟ್ ಫೋನ್‌ಗಳಿವೆ ಹಾಗೂ ಕಡಿಮೆ ಬೆಲೆಗೆ ಅಂತರ್ಜಾಲ ಸೇವೆ ಪಡೆಯಬಹುದಾಗಿದೆ. ಇದರಿಂದಾಗಿ ಆನ್‌ಲೈನ್ ಶಾಪಿಂಗ್ ಆ್ಯಪ್ ಬಳಸುವುದು ಸುಲಭವಾಗಿದೆ. 2021ರಲ್ಲಿ 52 ಬಿಲಿಯನ್ ಡಾಲರ್‌ನಷ್ಟಿದ್ದ ಆನ್‌ಲೈನ್ ಶಾಪಿಂಗ್ ವಹಿವಾಟು 2020ರ ವೇಳೆಗೆ 68 ಬಿಲಿಯನ್ ಡಾಲರ್‌ಗೆ ಎರಿಕೆಯಾಗಿದೆ. ಅದನ್ನು ಗಮನಿಸಿದರೆ ಒಂದು ವರ್ಷದಲ್ಲೇ ಶೇ. 30 ಹೆಚ್ಚಾದಂತಾಗಿದೆ. ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆಯ ನಂತರ ಆನ್ ಲೈನ್ ಶಾಪಿಂಗ್ ಮಾಡುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾ ಗಿದೆ. ಈ ಕಾರಣದಿಂದಲೇ ನಗರದಲ್ಲಿ ವೇರ್‌ಹೌಸ್ ಮತ್ತು ಲಾಜಿಸ್ಟಿಕ್ಸ್ ಉದ್ಯಮವು ಲಾಭದಾಯಕವಾಗಿ ಪರಿಣಮಿಸಿದೆ.
2-3ನೇ ಹಂತದ ನಗರಗಳಲ್ಲಿ ಶಾಪಿಂಗ್ ಮಾಲ್ ಸಂಸ್ಕೃತಿ : ಕರೊನಾ ಸೋಂಕಿನ ತೀವ್ರತೆ ಹೆಚ್ಚಿದ್ದಾಗ ಲಕ್ಷಾಂತರ ಜನರು ಬೆಂಗಳೂರು ತೊರೆದು ಎರಡು ಮತ್ತು ಮೂರನೇ ಹಂತದ ನಗರಗಳತ್ತ ಗುಳೆ ಹೋಗಿದ್ದರು. ಅವರಲ್ಲಿ ಶೇ. 50 ಜನರಷ್ಟೇ ಮಹಾನಗರಕ್ಕೆ ವಾಪಾಸು ಬಂದಿದ್ದಾರೆ. ಹೀಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ಜನರ ಸಂಖ್ಯೆ ಹೆಚ್ಚಾದ ಪರಿಣಾಮ ಆ ನಗರಗಳಲ್ಲಿ ಶಾಪಿಂಗ್ ಮಾಲ್‌ಗಳ ಸಂಖ್ಯೆ ಹೆಚ್ಚಾಗಿದೆ.
ಕೊರೊನಾ ಕಾರಣದಿಂದಾಗಿ ಬೆಂಗಳೂರುನ ಬಹುತೇಕ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಅದರಲ್ಲೂ ಶಾಪಿಂಗ್ ಮಾಲ್ ಗಳಿಗೂ ನಷ್ಟದ ಪರಿಣಾಮ ಉಂಟಾಗಿದೆ. ಇದು ಅಲ್ಪಕಾಲದ ಪರಿಣಾಮವಾಗಿದ್ದು, ಶೀಘ್ರದಲ್ಲಿ ಮಾರುಕಟ್ಟೆ ಅದರಿಂದ ಹೊರಬರಲಿದೆ. ಜನರು ಕೂಡ ಶಾಪಿಂಗ್ ಮಾಲ್‌ಗಳತ್ತ ಬರಲಿದ್ದಾರೆ. – ಭಾಸ್ಕರ್ ಟಿ.ನಾಗೇಂದ್ರಪ್ಪ, ಕ್ರೆಡಾಯ್ ಅಧ್ಯಕ
– ಗಿರೀಶ್ ಗರಗ