ವರದಿ : ಮಂಜುನಾಥ ಕುಂಬಳೂರು
ರಾಣಿಬೆನ್ನೂರ: ಕೊರೊನಾ ಇಡೀ ಮನು ಕುಲಕ್ಕೆ ಕಂಟಕವಾಗಿ ಕಾಡುತ್ತಿದ್ದು, ಅಕ್ಷರಶಃ ಇದರ ತಾಪ ತಟ್ಟದವರೇ ಇಲ್ಲ. ಈ ಸಾಲಿನಲ್ಲಿ ಕುಂಬಾರರು ಕೂಡ ಒಬ್ಬರು. ಮಣ್ಣನ್ನೇ ನಂಬಿ, ವಿವಿಧ ಬಗೆಯ ಸಾಮಗ್ರಿ, ಒಲೆ, ಮಡಿಕೆ, ಕುಡಿಕೆ, ಮುಚ್ಚಳ, ವಾಡೇವು (ಖಣಜ) ತಯಾರಿಸುತ್ತಿದ್ದ ಕುಂಬಾರರಿಗೆ ಕೊರೊನಾ ಬಿಸಿ ತಟ್ಟಿದೆ.
ಈ ಮೂಲಕ ಬೆವರು ಸುರಿಸಿ ತಯಾರಿಸಿದ್ದ ಸಾಮಗ್ರಿಗಳೆಲ್ಲ ಇದೀಗ ಕತ್ತಲೆ ಕೋಣೆಯಲ್ಲಿಯೇ ಧೂಳುಗಟ್ಟುವಂತಾಗಿದೆ. ಆಧುನಿಕತೆ ಬೆಳೆದಂತೆ ಸ್ಟೀಲಿನ ಪಾತ್ರೆಗಳ ಮೊರೆ ಹೋದ ಜನರು ಪೂರ್ವಜರು ಉಪಯೋಗಿಸುತ್ತಿದ್ದ ಮಣ್ಣಿನ ಮಡಿಕೆ, ಕುಡಿಕೆ, ಮುಚ್ಚಳ, ವಾಡೇವು (ಖಣಜ) ಕಣ್ಮರೆಯಾಗಿವೆ. ಇದರಿಂದ ಕುಂಬಾರ ಬದುಕು ಒಂದೆಡೆ ಆಧುನೀಕತೆ ಮಂಕಾದರೆ, ಇನ್ನೊಂದೆಡೆ ಕೊರೊನಾ ಲಾಕ್ ಡೌನ್‌ನಿಂದ ತತ್ತರಿಸಿ ಹೋಗಿದೆ. ಕುಲ ಕಸುಬು ಬಿಡದೇ, ಬೇರೆ ಉದ್ಯೋಗವನ್ನೂ ಮಾಡಲಾಗದೇ ಸವಾಲಾಗಿ ಸ್ವೀಕರಿಸುವ ಮೂಲಕ ನಗರದ ಕುಂಬಾರ ಓಣಿಯಲ್ಲಿ ಕೆಲವರು ಮಣ್ಣಿನ ಮಡಿಕೆ, ಕುಡಿಕೆ, ಮುಚ್ಚಳ ತಯಾರಿಸಿ ಕೊಳ್ಳುವವರಿಗಾಗಿ ಎದುರು ನೋಡುವಂತಾಗಿದೆ. ಆದರೆ ಲಾಕ್ ಡೌನ್ ಪರಿಣಾಮದಿಂದ ಮಾರುಕಟ್ಟೆ ವ್ಯವಸ್ಥೆ ಸಿಗದೇ ಕುಂಬಾರರು ಇದ್ದುದ್ದರಲ್ಲಿಯೇ ಬದುಕಿನ ಬಂಡಿ ನೂಕುತ್ತ ಸೆಣಸಾಡುತ್ತಿದ್ದಾರೆ.
ವಾಡೇವು ವಿಷರಹಿತ ಆಹಾರ ಧಾನ್ಯ ರಕ್ಷಣೆ: ಪೂರ್ವಜರು ಬೆಳೆದ ಧಾನ್ಯಗಳನ್ನೆಲ್ಲ ವಾಡೇವು (ಖಣಜ) ದಲ್ಲಿ ಸಂಗ್ರಹಿಸಿಡುತ್ತಿದ್ದರು. ಇದರಲ್ಲಿ ನುಸಿ, ಇಲಿ, ಕೀಟಗಳ ಕಾಟ ಇರುತ್ತಿರಲಿಲ್ಲ. ಜತೆಗೆ ಧಾನ್ಯಗಳೂ ಆರೋಗ್ಯಕ್ಕೆ ಉತ್ತಮವಾಗಿರುತ್ತಿದ್ದವು. ಆದರಿಂದು ಇವು ಕಣ್ಮರೆಯಾಗುತ್ತಿವೆ. ರೈತರು ಧಾನ್ಯಗಳನ್ನು ಚೀಲದಲ್ಲಿ ತುಂಬಿ ಇಡುತ್ತಿದ್ದು, ನುಸಿ, ಇಲಿ, ಕೀಟಗಳ ಕಾಟ ಆಗಬಾರದೆಂದು ವಿಷ ಮಿಶ್ರಣ ಮಾಡಿ ಸಂಗ್ರಹಿಸುತ್ತಿರುವುದರಿಂದ ಇಂದು ನಾವು ಸೇವಿಸುವ ಆಹಾರಧಾನ್ಯಗಳು ಕೂಡ ವಿಷಪೂರಿತವಾಗಿವೆ. ಮಡಿಕೆ ಬಡವರ ಪ್ರಿಡ್ಜ್: ಬಡವರ ಪ್ರಿಡ್ಜ್ ಎಂದೇ ಹೇಳಲಾಗುವ ಮಡಿಕೆ ಸ್ಥಳೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದರೂ ಲಾಕ್ ಡೌನ್ ಎಫೆಕ್ಟ್ನಿಂದ ಕೊಳ್ಳುವವರು ತುಂಬ ವಿರಳವಾಗಿದ್ದಾರೆ. ಬೇಸಿಗೆ ಆರಂಭವಾ ಗುತ್ತಿದ್ದಂತೆ ಬಿಸಿಲಿನಲ್ಲಿ ನೀರು ತಣ್ಣಗಾಗಿಸುವ ಮಣ್ಣಿನ ಗಡಿಗೆ, ಹೂಜಿ ಖರೀದಿಗೆ ಸ್ವಲ್ಪ ಪ್ರಮಾಣದಲ್ಲಿ ಜನರು ಮುಂದಾಗಿರುವುದು ಕುಂಬಾರನಿಗೆ ಸ್ವಲ್ಪ ಸಂತಸದ ಸಂಗತಿ. ಆದರೆ ಕೊರೊನಾ ಅದಕ್ಕೂ ಕೂಡ ಕಲ್ಲು ಹಾಕಿದೆ.
ಆದಾಯಕ್ಕೆ ಕತ್ತರಿ: ಕಾಲಕ್ಕೆ ತಕ್ಕಂತೆ ತಮ್ಮ ಕುಲ ಕಸುಬಿನ ಮೂಲಕ ಹಲವು ಸಾಮಗ್ರಿ ತಯಾರಿಸಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಕುಂಬಾರರ ಆದಾಯಕ್ಕೆ ಕೊರೊನಾ ಬಿಸಿ ತಟ್ಟಿದೆ. ವರ್ಷಪೂರ್ತಿ ತಾವು ತಾಯರಿಸಿದ್ದ ವಸ್ತುಗಳನ್ನು ಮಾರಿ ಸ್ವಲ್ಪ ಆದಾಯ ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಂಬಾರರಿಗೆ ಕೋವಿಡ್ ವೈರಸ್ ಪೆಡಂಭೂತವಾಗಿ ಕಾಡುತ್ತಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿದ್ದು, ಮಾರುಕಟ್ಟೆ ಸೇರಿದಂತೆ ಇತರೆ ಮಾರಾಟಕ್ಕೆ ಕಡಿವಾಣ ಹಾಕಿದೆ. ಈ ಹಿನ್ನೆಲೆಯಲ್ಲಿ ಕುಂಬಾರರ ವಸ್ತುಗಳನ್ನು ಯಾರೊಬ್ಬರೂ ನೋಡುವವರೇ ಇಲ್ಲದಂತಾಗಿದೆ.
ಕಾಲಕ್ಕೆ ಸರಿಯಾಗಿ ಕೌಶಲ್ಯ: ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಲ್ಲಿ ರಾಣಿಬೆನ್ನೂರಿನ ದೊಡ್ಡಪೇಟೆ ದುರ್ಗಮ್ಮನ ದೇವಸ್ಥಾನದ ಹತ್ತಿರ ಬಸವರಾಜ್ ಕೆಂಚಪ್ಪಳವರು ಮಣ್ಣಿನ ಮಡಿಕೆ ತಯಾರಿಸುತ್ತಾರೆ. ಮಣ್ಣಿನ ಮಡಿಕೆ ಮಾರಾಟ ಮಾಡಲು 2ರಿಂದ 3 ತಿಂಗಳ ಹಿಂದೆಯೇ ಕೆರೆ ಮಣ್ಣು ತಂದು ಮಡಿಕೆ ತಯಾರಿಸಲು ಬಳಸಲಾಗುತ್ತದೆ.
ಒಟ್ಟು 3ರಿಂದ 4 ಜನ ಮಡಿಕೆ ತಯಾರಿಸುತ್ತಾರೆ. ದಿನಕ್ಕೆ 100ರಿಂದ 150 ಮಣ್ಣಿನ ಮಡಿಕೆ ತಯಾರಿಸಲಾಗುತ್ತದೆ. ಸಣ್ಣ ಮಡಿಕೆಗೆ 300 ರೂ. ಹಾಗೂ ದೊಡ್ಡ ಮಡಿಕೆಗೆ 400 ರೂ. ನಿಗದಿ ಮಾಡಲಾಗಿದೆ. ಜತೆಗೆ ಮಣ್ಣಿನಿಂದ ತಯಾರಿಸಲಾದ ಮಣ್ಣಿನ ಟೀ ಕಪ್, ಪಾತ್ರೆ, ಬಿಂದಿಗೆ ಸೇರಿದಂತೆ ಮತ್ತಿತರ ವಸ್ತುಗಳನ್ನು ತಯಾರಿಸಲಾಗುತ್ತದೆ. ಆದರೆ ಅದೆಲ್ಲವೂ ಇದೀಗ ಇದ್ದೂ ಇಲ್ಲದಂತಾಗಿದೆ.