ವರದಿ: ಮಲ್ಲಿಕಾರ್ಜುನ ಎಂ ಬಂಡರಗಲ್ಲ
ಹುನಗುಂದ: ಮಣ್ಣೆತ್ತಿನ ಅಮಾವಾಸ್ಯೆ ರೈತಾಪಿ ವರ್ಗಕ್ಕೆ ವಿಶೇಷ ಹಬ್ಬ. ಆದರೆ, ಈ ಬಾರಿ ಕೊರೊನಾ ಮಹಾಮಾರಿದಿಂದ ಹಬ್ಬದ ಕಳೆ ಮಾಯವಾಗಿದೆ.
ಕೃಷಿ ಪ್ರಧಾನವಾದ ಉತ್ತರ ಕರ್ನಾಟಕದಲ್ಲಿ ಮುಂಗಾರು ಬಿತ್ತನೆಯ ನಂತರ ರೈತರ ಜೀವ ನಾಡಿ ಎತ್ತುಗಳನ್ನು ಹೊಲ, ನದಿ ತಟದಲ್ಲಿ ಜಿಗುಟು ಮಣ್ಣು ತಂದು ಅದರಲ್ಲಿ ಎತ್ತಿನ ರೂಪ ಮಾಡಲಾಗುತ್ತದೆ. ಅದಕ್ಕೆ ತೊಯಿಸಿದ ಜೋಳದ ಕಾಳು, ಕುಸಿಬಿ ಸೇರಿದಂತೆ ಅನೇಕ ಕಾಳುಗಳಿಂದ ಸಿಂಗರಿಸಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ ಮಾಡುವ ಪರಂಪರೆಯಿದೆ. ಇನ್ನು ಮಣ್ಣಿನಿಂದ ಎತ್ತು ಮಾಡಲು ಬರದವರು ಕುಂಬಾರ ಮಾಡಿದ ಮಣ್ಣಿನ ಎತ್ತನ್ನು ತಂದು ಪೂಜಿಸಿ ಆರಾಧಿಸುವ ವಿಶಿಷ್ಟ ಹಬ್ಬವಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಕಳೆಗುಂದುವ ಲಕ್ಷಣ ಕಂಡು ಬರುತ್ತಿದ್ದು, ಪ್ರತಿ ವರ್ಷ 1000-2000 ಮಣ್ಣೆತ್ತು ತಯಾರಿಸುತ್ತಿದ್ದೇವು. ಆದರೆ, ಈ ಬಾರಿ ಕೊರೊನಾದಿಂದ ವ್ಯಾಪಾರ ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ ಒಂದು ಸಾವಿರ ಮಣ್ಣೆತ್ತುಗಳನ್ನು ಮಾಡಲಾಗಿದೆ ಎಂದು ಮಣ್ಣೆತ್ತು ತಯಾರಿಸುವ ಕುಂಬಾರರು ಹೇಳುತ್ತಾರೆ. ಪ್ರತಿಯೊಂದು ಹಳ್ಳಿಗಳಲ್ಲಿ ಪ್ರಮುಖ ರಸ್ತೆ ಮತ್ತು ಗ್ರಾಮದ ಅಗಸಿ ಬಾಗಿಲಿಗೆ ದೊಡ್ಡ ದೊಡ್ಡ ಎತ್ತುಗಳನ್ನು ಮಾಡಿ ದೊಡ್ಡ ಪೆಂಡಾಲ್ ಹಾಕಿ ಹಲವು ರೀತಿಯಲ್ಲಿ ಅಲಂಕಾರ ಮಾಡಿ ಮಣ್ಣಿನ ಎತ್ತುಗಳನ್ನು ಇಟ್ಟು ಅನೇಕ ರೀತಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮರು ದಿನ ನದಿ ಮತ್ತು ಬಾವಿಗಳ ನೀರಿನಲ್ಲಿ ಬಿಡುವ ವಾಡಿಕೆಯಿತ್ತು. ಆದರೆ, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಸರಳವಾಗಿ ಹಬ್ಬ ಆಚರಣೆಗೆ ಸೂಚಿಸಿರುವುದರಿಂದ ತಾಲೂಕಿನಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಕಳೆಗುಂದಿದೆ.
ಇನ್ನು ಚಿಕ್ಕ ಮಕ್ಕಳು ಕೊರಳಲ್ಲಿ ಎತ್ತಿನ ಗೆಜ್ಜಿಯನ್ನು ಕಟ್ಟಿಕೊಂಡು ಮಣ್ಣಿನಿಂದ ಮಾಡಿದ ಎತ್ತಿನ ಒಂದು ಕಾಲು ಮುರಿದು ಮನೆ ಮನೆಗಳಿಗೆ ತೆರಳಿ ಎಂಟೆತ್ತಿನ್ಯಾಗ ಒಂದು ಕುಂಟೆತ್ತು ಬಂದೈತಿ ಜೋಳ ನೀಡಿ ಅಂತ ಜೋಳ ಮತ್ತು ಹಣವನ್ನು ಪಡೆದು ಅದೇ ಹಣ ತೆಗೆದುಕೊಂಡು ಪಂಚ ಪಳಾರ ತಗೆದುಕೊಂಡು ಬಂದು ಊರಿನ ಜನರಿಗೆ ಹಂಚಿ ಖುಷಿ ಪಡುವ ವಿಶೇಷ ಹಬ್ಬವೇ ಮಣ್ಣೆತ್ತಿನ ಹಬ್ಬವಾಗಿದೆ. ಆದರೆ, ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ.